ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಶಿವಮೊಗ್ಗ:
ಕೇಂದ್ರ ಸರ್ಕಾರ ದಿನೇ ದಿನೇ ತೈಲಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಇಂದು ನಗರದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ಸೈಕಲ್ ಜಾಥ ಸವಾರಿ ಮಾಡುವ ಮೂಲಕ ಪ್ರತಿಭಟಿಸಲಾಯಿತು.
ನಗರದ ಅಶೋಕ ವೃತ್ತದಿಂದ ಸೈಕಲ್ ಸವಾರಿ ಆರಂಭವಾಗಿ ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಗೋಪಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಬಿ. ಪ್ರಸನ್ನಕುಮಾರ್, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 10 ವರ್ಷಗಳಲ್ಲಿ ತೈಲ ಬೆಲೆ 70 ರೂ. ದಾಟಿರಲಿಲ್ಲ. 400 ರೂ.ಗೆ ಅಡುಗೆ ಅನಿಲ ಲಭ್ಯವಾಗುತ್ತಿತ್ತು. ಶ್ರೀಸಾಮಾನ್ಯರ ಹಾಗೂ ಬಡವರ ಸಂಕಷ್ಟಗಳಿಗೆ ಸ್ಪಂದಿಸಿದ ನಮ್ಮ ಸರ್ಕಾರ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ, ಕಳೆದ 7 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಶತಕ ಬಾರಿಸಿದೆ. 400 ರೂ. ಇದ್ದ ಅಡುಗೆ ಅನಿಲದ ಸಿಲಿಂಡರ್ ವೊಂದರ ಬೆಲೆ 900 ರೂ. ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಬಡವರ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೈಲವನ್ನು ಕೇವಲ 31 ರೂ.ಗೆ ಆಮದು ಮಾಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಾಗಿ 34 ರೂ. ಹಾಗೂ 31 ರೂ. ತೆರಿಗೆ ಸೇರಿ ಇನ್ನಿತರ ತೆರಿಗೆಗಳನ್ನು ಹೇರಿ ತೈಲ ಬೆಲೆ ಶತಕ ದಾಟುವಂತೆ ಮಾಡಿದೆ. ತಾನು ಬಡವರ ಪರ ಎಂದು ಹೇಳುವ ಸರ್ಕಾರ ಬಡವರ ಬದುಕನ್ನು ದಯನೀಯ ಸ್ಥಿತಿಗೆ ತಳ್ಳಿದೆ. ತೈಲ ಬೆಲೆ ತಗ್ಗುವವರೆಗೂ ಕಾಂಗ್ರೆಸ್ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೂಡಲೇ ಕೇಂದ್ರ ತೈಲಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಮಂದಿ ಸ್ವಯಂ ಪ್ರೇರಣೆಯಿಂದ ಸೈಕಲ್ ನಲ್ಲಿ ಮೆರವಣಿಗೆ ಸಾಥ್ ನೀಡಿದರು. ರ್ಯಾಲಿಯಲ್ಲಿ ಪ್ರಮುಖರಾದ ಎನ್.ಕೆ. ಶ್ಯಾಮ ಸುಂದರ್, ವಿಜಯ ಲಕ್ಷ್ಮಿ ಪಾಟೀಲ್, ಆಸೀಫ್, ದೀಪಕ್ ಸಿಂಗ್, ಸುವರ್ಣಾ ನಾಗರಾಜ್, ರಘು, ಬೊಮ್ಮನಕಟ್ಟೆ ಮಂಜುನಾಥ್ ಸೇರಿದಂತೆ ಹಲವರಿದ್ದರು.
ಸೈಕಲ್ ಜಾಥಾ…!
ಶಿವಮೊಗ್ಗ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ದಿನಸಿ ಸಾಮಗ್ರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ನಗರದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಭವನದಿಂದ ಆರಂಭವಾದ ಸೈಕಲ್ ಜಾಥಾ ಬಾಲರಾಜ್ ಅರಸ್ ರಸ್ತೆ – ನೆಹರು ರಸ್ತೆ, ಶಿವಪ್ಪನಾಯಕ ಪ್ರತಿಮೆ, ಗಾಂಧಿಬಜಾರ್ ರಸ್ತೆ ಮೂಲಕವಾಗಿ ರಾಮಣ್ಣಶ್ರೇಷ್ಟಿ ಪಾರ್ಕ್ ವರೆಗೆ ಸಾಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಸ್. ಸುಂದರೇಶ್, ಬೆಲೆ ಏರಿಕೆ ತಡೆಯದ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು. ಕೂಡಲೇ ಅಗತ್ಯ ಕ್ರಮ ಕೈಗೊಂಡು ಬೆಲೆ ಇಳಿಕೆ ಮಾಡಬೇಕೆಂದು ಪ್ರತಿಭಟನಾರರು ಒತ್ತಾಯಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಎಸ್.ಪಿ. ಶೇಷಾದ್ರಿ, ಚಂದ್ರಭೂಪಾಲ್, ಸೌಗಂಧಿಕಾ ಮೊದಲಾದವರಿದ್ದರು.
ತುತ್ತೂರಿಗಳಿಗೆಲ್ಲಾ ಉತ್ತರಿಸಲಾಗದು: ಆಯನೂರು ಮಂಜುನಾಥ್
ಶಿವಮೊಗ್ಗ:
ತುತ್ತೂರಿಗಳಿಗೆಲ್ಲ ಬೆಲೆ ನೀಡುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದೊಳಗೆ ಮತ್ತು ಹೊರಗೆ ಅನೇಕ ತುತ್ತೂರಿಗಳು ಕೇಳಿಬರುತ್ತಿವೆ. ಈ ತುತ್ತೂರಿಗಳ ಕೆಲಸವೇ ಊದುವುದು. ಊದಿದ್ದಕ್ಕೆಲ್ಲ ಉತ್ತರಕೊಡುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ನಾಯಕತ್ವ ಬದಲಾವಣೆ ಇಲ್ಲವೆಂದು ವರಿಷ್ಠರೇ ಸ್ಪಷ್ಟಪಡಿಸಿದ್ದರೂ, ಕೂಡ ಈ ವಿಚಾರ ಪದೇ ಪದೇ ಕೇಳಿ ಬರುತ್ತಿದೆ. ಕೆಲವರು ತುತ್ತೂರಿ ಊದುವ ಮೂಲಕ ತಮ್ಮ ಇರುವಿಕೆ ತೋರ್ಪಡಿಸುತ್ತಿದ್ದಾರೆ. ಅವರಿಗೆಲ್ಲ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಆಗಾಗ ಕೆಲವರು ತಮ್ಮ ಅಸ್ತಿತ್ವವನ್ನು ತೋರಿಸಲು, ರಾಜಕೀಯವಾಗಿ ಬದುಕ್ಕಿದ್ದೇನೆ ಎಂದು ಬಿಂಬಿಸಲು ಕುಹಕ ಪ್ರಯತ್ನ ಮಾಡಿ ಇಂತಹ ಹೇಳಿಕೆ ನೀಡುತ್ತಾರೆ. ಇದಕ್ಕೆ ಮಾನ್ಯತೆ ಕೊಡಬೇಕಾಗಿಲ್ಲ ಎಂದರು.
ಪಕ್ಷದಿಂದ ನೋಟಿಸ್ ನೀಡಿದ್ದು, ಪಕ್ಷದ ಬೈಲಾ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಇದೆಲ್ಲ ನಿಯಮಾವಳಿ ಅನುಸರಿಸಿ ಕೈಗೊಳ್ಳಬೇಕಾದ ಕ್ರಮವಾಗಿದೆ. ಇದಕ್ಕೆ ಒಂದಿಷ್ಟು ಸಮಯ ಬೇಕಾಗುತ್ತದೆ. ಕೆಲವು ಕಿಡಿಗೇಡಿಗಳಿಗೆ ಪೊಲೀಸರು ಹಿಡಿದು ಹೊಡೆದರೂ ಅಂತಹವರಲ್ಲಿ ಕೆಲವರು ಚಾಳಿ ಬಿಡುವುದಿಲ್ಲ. ಅದೇ ರೀತಿ ಕೆಲವರು ಎಚ್ಚರಿಕೆ ನೀಡಿದರೂ ಹೇಳಿಕೆ ನೀಡುತ್ತಲೇ ಇರುತ್ತಾರೆ. ಪಕ್ಷದ ಕೆಲವರಿಗೆ ತಮ್ಮನ್ನು ತಾವು ಮೋಹಿಸಿಕೊಳ್ಳುವ ಆತ್ಮರತಿ ಎಂಬ ಕಾಯಿಲೆ ಇದೆ. ತಮ್ಮನ್ನು ತಾವು ದೊಡ್ಡ ನಾಯಕರೆಂದು ಭಾವಿಸಿ ಹೇಳಿಕೆ ನೀಡುತ್ತಾರೆ. ಇಂತಹ ಕಾಯಿಲೆಗೆ ಪಕ್ಷದ ವರಿಷ್ಠರು ಮದ್ದು ಕೊಡುತ್ತಾರೆ. ಇದಕ್ಕೆ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದರು.
ಅಧಿಕಾರಿಗಳಿಂದ ಜನಪ್ರತಿನಿಧಿಗಳ ವಿಶ್ವಾಸಕ್ಕೆ ದಕ್ಕೆ: ಬಿಕೆ ಸಂಗಮೇಶ್
ಭದ್ರಾವತಿ: ಬಡವರಿಗೆ ಮನೆ ನಿರ್ಮಿಸಿ ಕೊಡುವ ಸಂಬಂಧ ಖಾಲಿ ಜಾಗ ಸರ್ವೆ ಮಾಡಿ ಆಶ್ರಯ ಸಮಿತಿಗೆ ವರದಿ ನೀಡುವಂತೆ ಹಲವು ಬಾರಿ ತಿಳಿಸಿದ್ದರೂ ಸಹ ತಹಸೀಲ್ದಾರ್ ಕಚೇರಿ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಜನಪ್ರತಿನಿಧಿಗಳು ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಳ್ಳು ವಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಕಛೇರಿ ಸಭಾಂಗಣದಲ್ಲಿ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿ ರುವವರಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯ ಬಹುತೇಕ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಕೆಲವು ಕೊಳಚೆ ಪ್ರದೇಶಗಳಿಗೆ ಇನ್ನೂ ನೀಡಲು ಸಾಧ್ಯವಾಗಿಲ್ಲ. ಕೊಳಚೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ 94 ಸಿ ಯೋಜನೆಯಡಿ ಹಾಗು ಗ್ರಾಮಾಂತರ ಪ್ರದೇಶದಲ್ಲಿ 94ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡಲಾಗುವುದು. ಈ ಸಂಬಂಧ ಸರ್ವೆ ಮಾಡಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರ ವ್ಯಾಪ್ತಿಯಲ್ಲಿ ಆಶಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಖಾಲಿ ಜಾಗ ಗುರುತಿಸುವಲ್ಲಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ಹಲವಾರು ಬಾರಿ ಸಭೆಯಲ್ಲಿ ಈ ಕುರಿತು ಸೂಚಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಾಗ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
ಉಪತಹಸೀಲ್ದಾರ್ ಮಲ್ಲಿಕಾರ್ಜು ನಯ್ಯ ಹಾಗು ಕಂದಾಯಾಧಿಕಾರಿ ಪ್ರಶಾಂತ್ ಜಾಗ ಗುರುತಿಸುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭಾ ಸದಸ್ಯರು ಸಹ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ 4000 ಗುಂಪು ಮನೆಗಳಿಗೆ 4400 ಅರ್ಜಿಗಳು ಬಂದಿದ್ದು, ಈ ಪೈಕಿ 2050 ಅರ್ಜಿದಾರರು ಆಯ್ಕೆಯಾಗಿ ಶುಲ್ಕ ಪಾವತಿಸಿದ್ದಾರೆ. ಇವರು ಬ್ಯಾಂಕಿನವರೊಂದಿಗೆ ಚರ್ಚಿಸಿ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದರು. ಉಳಿದಂತೆ 1950 ಅರ್ಜಿದಾರರು ಹೊಸದಾಗಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಈ ಹಿಂದೆ ಅರ್ಜಿ ಸಲ್ಲಿಸದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ತಕ್ಷಣ ಎಲ್ಲೆಡೆ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ನಗರಸಭೆ ಇಂಜಿನಿಯರ್ ರಂಗರಾಜಪುರೆ, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಕೆ ಮೋಹನ್‌ಕುಮಾರ್, ವಿ. ಕದಿರೇಶ್, ಟಿಪ್ಪುಸುಲ್ತಾನ್, ಸುದೀಪ್‌ಕುಮಾರ್, ಮಣಿ, ಚನ್ನಪ್ಪ, ಜಯಶೀಲ, ಲತಾ ಚಂದ್ರಶೇಖರ್, ಉದಯ್‌ಕುಮಾರ್, ಕಾಂತರಾಜ್, ಜಾರ್ಜ್, ಆರ್. ಮೋಹನ್‌ಕುಮಾರ್, ರಾಜ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕೇಂದ್ರ ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆ
ನವದೆಹಲಿ,ಜು.07:
ರಾಷ್ಟ್ರಪತಿ ಭವನದ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ನಾಲ್ವರಿಗೆ ಈ ಭಾಗ್ಯ ದೊರೆತಿದೆ.
43 ನೂತನ ಸಚಿವರ ಪಟ್ಟಿ ಈ ಕೆಳಕಂಡಂತೆ ಇದೆ.
ನಾರಾಯಣ ತಾಕು ರಾಣೆ
ಸರ್ಬಾನಂದ ಸೋನೊವಾಲ್
ಡಾ. ವೀರೇಂದ್ರ ಕುಮಾರ್
ರಾಮಚಂದ್ರ ಪ್ರತಾಪ್ ಸಿಂಗ್
ಅಶ್ವಿನಿ ವೈಷ್ಣವ್
ಪಶುಪತಿ ಕುಮಾರ್ ಪರಾಸ್
ಕಿರಣ್ ರಿಜಿಜು
ರಾಜ್ ಕುಮಾರ್ ಸಿಂಗ್
ಹರ್ದೀಪ್ ಸಿಂಗ್ ಪುರಿ
ಮನ್ಸೂಖ್ ಮಾಂಡವಿಯಾ
ಭೂಪೇಂದ್ರ ಯಾದವ್
ಪರ್ಶೋತಮ್ ರೂಪಾಲ
ಕಿಶನ್ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ಪಂಕಜ್ ಚೌಧರಿ
ಅನುಪ್ರಿಯಾ ಸಿಂಗ್ ಪಟೇಲ್
ಸತ್ಯಪಾಲ್ ಸಿಂಗ್ ಬಾಘೇಲ್
ರಾಜೀವ್ ಚಂದ್ರಶೇಖರ್
ಶೋಭಾ ಕರಂದ್ಲಾಜೆ
ಭಾನುಪ್ರತಾಪ್ ಸಿಂಗ್ ವರ್ಮಾ
ದರ್ಶನ್ ವಿಕ್ರಮ್ ಜಾರ್ದೋಸ್
ಮೀನಾಕ್ಷಿ ಲೇಖಿ
ಅನ್ನಪೂರ್ಣ ದೇವಿ
ಎ ನಾರಾಯಣಸ್ವಾಮಿ
ಕೌಶಲ್ ಕಿಶೋರ್
ಅಜಯ್ ಭಟ್
ಬಿ ಎಲ್ ವರ್ಮಾ
ಅಜಯ್ ಕುಮಾರ್
ಚೌಹಾನ್ ದೇವುಸಿನ್ಹ
ಭಗವಂತ್ ಖೂಬಾ
ಕಪಿಲ್ ಮೊರೇಶ್ವರ್ ಪಾಟೀಲ್
ಪ್ರತಿಮಾ ಭೌಮಿಕ್
ಡಾ. ಸುಭಾಸ್ ಸರ್ಕಾರ್
ಡಾ. ಭಗವಂತ್ ಕಿಶನ್ ರಾವ್ ಕರದ್
ಡಾ. ರಾಜಕುಮಾರ್ ರಂಜನ್ ಸಿಂಗ್
ಡಾ. ಭಾರತಿ ಪ್ರವೀಣ್ ಪವಾರ್
ಬಿಶ್ವೇಶ್ವರ್ ತುಡು
ಶಂತನು ಠಾಕೂರ್
ಡಾ. ಮುಂಜಾಪರ ಮಹೇಂದ್ರ ಭಾಯ್
ಜಾನ್ ಬಾರ್ಲಾ
ಡಾ. ಎಲ್ ಮುರುಗನ್
ನಿಶಿತ್ ಪ್ರಾಮಾಣಿಕ್
ಈ ವಿಸ್ತರಣೆಯ ನಂತರ ಮೋದಿ ಸಂಪುಟದಲ್ಲಿ 27 ಇತರೆ ಹಿಂದುಳಿದ ವರ್ಗ, 12 ಪರಿಶಿಷ್ಟ ಜಾತಿ, 8 ಪರಿಶಿಷ್ಟ ವರ್ಗ ಮತ್ತು 5 ಅಲ್ಪಸಂಖ್ಯಾತ ಸಮುದಾಯದ ಸಚಿವರೂ ಸೇರಿ ಒಟ್ಟು 11 ಮಹಿಳಾ ಸಚಿವರು ಇದ್ದಾರೆ. ಇವರಲ್ಲಿ 09 ಮಹಿಳೆಯರು ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೇರಿದ್ದಾರೆ. 50 ವರ್ಷಗಳಿಗಿಂತ ಕಡಿಮೆ ವಯಸ್ಸಿನ 14 ಜನ ಯುವ ಸಚಿವರು ಇದ್ದಾರೆ. ಈ 43 ಸಚಿವರ ಪೈಕಿ 8 ಕ್ಯಾಬಿನೆಟ್ ದರ್ಜೆ ಹಾಗೂ ಉಳಿದವರು ರಾಜ್ಯ ದರ್ಜೆ ಮತ್ತು ಸ್ವತಂತ್ರ ಖಾತೆ ಸಚಿವರಾಗಲಿದ್ದಾರೆ.