Site icon TUNGATARANGA

ಭದ್ರಾವತಿ ಸುತ್ತ ಕಾಡಾನೆಗಳ ದಾಳಿ: ತೋಟಗಳ ನಾಶ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ ಸುತ್ತಮುತ್ತ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ನಿನ್ನೆ ರಾತ್ರಿ ಲಕ್ಕಿನಕೊಪ್ಪ ಗ್ರಾಮದ ಅರುಣ್ ಎಂಬುವವರ ತೋಟಕ್ಕೆ ನುಗ್ಗಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ
ಅಡಕೆ, ಬಾಳೆ, ಮಾವು, ಹಲಸನ್ನು ನಾಶ ಪಡಿಸಿವೆ.
ಕಳೆದ ಗುರುವಾರ ಗೋಣಿಬೀಡಿನಲ್ಲಿ ನಾಲ್ಕು ಕಾಡಾನೆಗಳು ಕಾಣಿಸಿಕೊಂಡಿತ್ತು. ರೋಡಿನ ಅಂಚಿಗೆ ಬಂದಿದ್ದ ಕಾಡಾನೆಗಳನ್ನು ಜನರೇ ಅರಣ್ಯ ಸಿಬ್ಬಂದಿಯ ಪಟಾಕಿ ಸಿಡಿಸಿ ಹಿಮ್ಮೆಟ್ಟಿಸಿದ್ದರು..
ಭದ್ರಾ ಅಭಯಾರಣ್ಯದಿಂದ ಮಾರೀದೀಪ, ಉಂಬ್ಳೆಬೈಲು, ಮೂಲಕ ಲಕ್ಕಿನಕೊಪ್ಪ, ಕಾಚಿನಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ತೊಂದರೆ ನೀಡುತ್ತಿವೆ. ಈ ಕೆಲದಿನಗಳ ಹಿಂದೆ ಅರಣ್ಯಾಧಿಕಾರಿಗಳು, ಸಕ್ರೆಬೈಲ್ ನ ಆನೆಗಳನ್ನು ತಂದು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದರು.
ಬಳಿಕ ಆ ಆನೆಗಳು ಮತ್ತೆ ರೈತರಿಗೆ ತೊಂದರೆ ನೀಡಲಾರವು, ವಾಪಸ್ ಇದೆ ದಾರಿಯಲ್ಲಿ ಬರಲಾರವು ಎಂದು ವನ್ಯಜೀವಿ ತಜ್ಞರು ತಿಳಿಸಿದ್ದರು.
ಕೆಲವೆ ದಿನಗಳಲ್ಲಿ ಕಾಡಾನೆಗಳು ಮತ್ತೆ ಈ ಭಾಗದ ಸುತ್ತಮುತ್ತ ಕಾಣಿಸಿಕೊಂಡು ಉಪದ್ರ ನಿಡಲು ಆರಂಭಿಸಿವೆ. ಈಗಾಗಲೇ ಸುಮಾರು ನೂರು ಎಕೆರೆಗೂ ಅಧಿಕ ಪ್ರದೇಶದಲ್ಲಿ ಬೆಳೆಗಳನ್ನು ಹಾಳು ಮಾಡಿರುವ ಕಾಡಾನೆಗಳು, ದಿನಕ್ಕೊಬ್ಬರ ತೋಟಕ್ಕೆ ನುಗ್ಗಿ ಭರ್ಜರಿ ಭೋಜನ ನಡೆಸುತ್ತಿವೆ.

ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ವಿಪರೀತ ತೊಂದರೆ ನೀಡುತ್ತಿರುವ ಕಾಡಾನೆಗಳ ಬಗ್ಗೆ, ಅರಣ್ಯ ಇಲಾಖೆ ದಿಟ್ಟ ಕ್ರಮವನ್ನು ಕೈಗೊಳ್ಳುತ್ತಿಲ್ಲ, ಜನರನ್ನು ಸಮಾಧಾನ ಮಾಡುವ ಕೆಲಸವನ್ನು ಮಾಡುತ್ತಿರುವ ಅರಣ್ಯ ಇಲಾಖೆ ಕಾಡಾನೆಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಇದು ಎಷ್ಟರಮಟ್ಟಿಗೆ ಸರಿ ಎಂದ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಬೆಳೆ ನಾಶವಾದರೆ ನಾವೇನು ಮಾಡುವುದಕ್ಕೆ ಆಗುತ್ತೆ , ಕಾಡಂಚಲ್ಲಿ ಹೊಲ ತೋಟ ಮಾಡಿರುವುದು ನೀವು, ಈಗ ತೊಂದರೆ ಅನುಭವಿಸಬೇಕಾದವರು ಸಹ ನೀವೆ ಎನ್ನುವಂತಹ ಮಾತುಗಳು ಸಿಬ್ಬಂದಿಗಳ ಬಾಯಲ್ಲಿ ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆನೆಗಳು ಮತ್ತೆ ಬಂದು ತೊಂದರೆ ನೀಡದಿರುವ ಹಾಗೇ. ಆನೆಗಳನ್ನು ಹಿಡಿದು ಅವುಗಳನ್ನು ಸಕ್ರೆಬೈಲ್ ಬಿಡಾರಕ್ಕೆ ಕಳುಹಿಸಿ, ಈ ಮೂಲಕ ಕಾಡಾನೆಗಳ ಕಾಟದಿಂದ ಮುಕ್ತಿ ನೀಡಿ ಎಂದು ಲಕ್ಕಿನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

Exit mobile version