Site icon TUNGATARANGA

ಶಿವಮೊಗ್ಗ | ತೈಲಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ಭಿನ್ನ-ವಿಭಿನ್ನ ಪ್ರತಿಭಟನೆ

ಶಿವಮೊಗ್ಗ: ತೈಲಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ಇಂದು ವಿವಿಧ ಪೆಟ್ರೋಲ್ ಬಂಕ್‌ಗಳ ಬಳಿ ಸರಣಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ನೇತೃತ್ವದಲ್ಲಿ ಕುವೆಂಪು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕನ್ನ ಹಾಕಲು ಹೊರಟಿದೆ. ಪೆಟ್ರೋಲ್ ಬೆಲೆ ಏರಿಸಿ ಸುಮಾರು ೨೧.೬೦ ಲಕ್ಷ ಕೋಟಿ ಗಳಿಸಿದೆ. ಮೇ ತಿಂಗಳೊಂದರಲ್ಲಿಯೇ ೧೬ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ ಎಂದರು.
ಮೋದಿ ಸರ್ಕಾರ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದೆ. ಬಡವರು ಜೀವನ ಮಾಡುವುದೇ ದುಸ್ಥರವಾಗಿದೆ. ಪದೇ ಪದೇ ತೈಲ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದೆ. ಸುಮಾರು ೪೭ ಬಾರಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಈ ವರ್ಷ ಏರಿಸಲಾಗಿದೆ. ತೈಲ ಬೆಲೆ ಏರಿಕೆಯಿಂದ ಸಹಜವಾಗಿ ನಿತ್ಯ ಬಳಕೆ ವಸ್ತುಗಳ ಮೇಲೆ ಪರಿಣಾಮಬೀರಿ ಬಡವರು ಮತ್ತು ಮದ್ಯಮ ವರ್ಗದವರು ಜೀವನ ಮಾಡುವುದೆ ದುಸ್ಥರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್,ಪಲ್ಲವಿ, ದೇವೇಂದ್ರಪ್ಪ, ಚಂದ್ರಶೇಖರ್, ಮೋಹನ್, ಸತ್ಯನಾರಾಯಣ, ಮೂರ್ತಿ, ಸೈಯದ್ ವಾಯಿದ್ ಅಡ್ಡು, ಸೌಗಂಧಿಕ, ರಾಜು, ಸ್ಟೆಲ್ಲಮಾರ್ಟಿನ್, ಮೊದಲಾದವರಿದ್ದರು.

ಶಾಸಕ ಆರ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ : ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ವಿನೋಬ ನಗರದ ರಾಜ್ ಫ್ಯೂಲ್ಸ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಆರ್.ಪ್ರಸನ್ನ ಕುಮಾರ್ ಕೇಂದ್ರ ಸರ್ಕಾರ ಅವೈಜ್ಞಾನಿಕವಾದ ರೀತಿಯಲ್ಲಿ ತೈಲ ಬೆಲೆಯನ್ನು ಏರಿಸಿದೆ. ಇದರಿಂದ ಜನ ಸಾಮಾನ್ಯರ ಮೇಲೆ ಹೊರೆಯಾಗಿದೆ. ಕಚ್ಚಾತೈಲ ಬೆಲೆ ಇಳಿದಿದ್ದರೂ ಕೂಡ ಕೇಂದ್ರ ಸರ್ಕಾರದ ಅಸಮರ್ಪಕ ವಿತ್ತೀಯ ನೀತಿಯಿಂದಾಗಿ ಬೆಲೆ ಏರಿಕೆಯಾಗಿದೆ. ಮೋದಿ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಚ್ಚೆದಿನ್ ದೇಶವಾಸಿಗಳಿಗೆ ಕನಸಾಗಿದೆ ಎಂದು ಟೀಕಿಸಿದರು.
ಮುಖಂಡ ಎನ್.ರಮೇಶ್ ಮಾತನಾಡಿ, ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುವ ಮೂಲಕ ಜನ ಸಾಮಾನ್ಯರಿಗೆ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೆ ಕಷ್ಟಕರವಾಗಿದೆ. ಇಂತಹ ಪ್ರಜಾವಿರೋಧಿ ನೀತಿ ವಿರುದ್ಧ ಜನ ಸಿಡಿದೇಳಬೇಕಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ರಂಗನಾಥ್, ರೇಖಾ ರಂಗನಾಥ್,ಓಂಪ್ರಕಾಶ್ ತೇಲ್ಕರ್, ನವುಲೆ ಶ್ರೀಧರ್, ಹೆಚ್.ಪಿ.ಗಿರೀಶ್, ಎಸ್.ಪಿ.ದಿನೇಶ್, ಹಾಲಪ್ಪ, ಶಿವಾನಂದ್, ಸೇರಿದಂತೆ ಹಲವರಿದ್ದರು.
ತಮಟೆ ಚಳವಳಿ : ಶತಕ ಬಾರಿಸಿದ ಪೆಟ್ರೋಲ್ ಬೆಲೆ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ದುರ್ಗಿಗುಡಿಯ ಹೆಚ್‌ಎಂ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿದರು.


ಪೆಟ್ರೋಲ್ ದರ 100 ರೂ. ಏರಿಕೆಯಾಗಿದ್ದು, ಖಂಡನೀಯ ಮೋದಿಯವರು ಶತಕ ಬಾರಿಸಿಯೂ ನಾಟೌಟ್ ಆಗಿದ್ದಾರೆ ಎಂದು ಅಣಕಿಸುವ ಘೋಷಣೆಗಳನ್ನು ಕೂಗಿ ತಮಟೆ ಬಾರಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್‌ಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಮುಖಂಡರಾದ ಕೆ.ರಂಗನಾಥ್, ರೇಖಾ ರಂಗನಾಥ್, ನಿತಿನ್, ಕುಮರೇಶ್, ಸೈಯದ್ ಜಮೀಲ್,ಕಿರಣ್, ರಂಜಿತ್, ರಾಹುಲ್, ವೆಂಕಟೇಶ್, ರಾಕೇಶ್, ಶರತ್, ಪವನ್, ಪ್ರಜ್ವಲ್, ಇಫ್ರಾನ್ ಸೇರಿದಂತೆ ಹಲವರಿದ್ದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ : ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ದೀಪಕ್ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಬಿ.ಪ್ರಸನ್ನ ಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯಿಂದಾಗಿ ಇಂದು ಜನ ಸಾಮಾನ್ಯರು ಜೀವನ ಮಾಡುವುದೆ ಕಷ್ಟಕರವಾಗಿದೆ. ಜನರಿಗೆ ಹುಸಿ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಇಂದು ಜನರಿಗೆ ಮಂಕು ಬೂದಿ ಎರಚಿದೆ. ಮಾನವೀಯತೆಯನ್ನು ಕಳೆದು ಕೊಂಡ ಸರ್ಕಾರವಿದು. ಆದಷ್ಟು ಬೇಗ ಈ ಸರ್ಕಾರ ತೊಲಗಬೇಕು ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ಯಾಮ್ ಸುಂದರ್, ದೀಪಕ್‌ಸಿಂಗ್, ಸುವರ್ಣ, ಮಂಜುನಾಥ್, ಲಕ್ಷ್ಮಣ್, ಆಸಿಫ್, ಪ್ರಸನ್ನ ಸೇರಿದಂತೆ ಹಲವರಿದ್ದರು.
ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ : ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತೈಲ ಬೆಲೆ ವಿರೋಧಿಸಿ ಎತ್ತಿನಗಾಡಿ ಚಳವಳಿಯ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಸಿ.ಯೋಗೀಶ್ ತೈಲ ಬೆಲೆ ಏರಿಕೆ ಖಂಡನೀಯವಾದುದ್ದು, ಜನ ಸಾಮಾನ್ಯರ ಜೀವನದ ಜೊತೆ ಕೇಂದ್ರ ಸರ್ಕಾರ ಆಟವಾಡುತ್ತಿದೆ. ಬದುಕು ದುಸ್ಥವಾಗಿದೆ. ಕೂಡಲೆ ಬೆಲೆಯನ್ನು ಇಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಕ್ಬರ್, ಹೆಚ್.ಎಂ.ಮಹದೇವ, ಅನ್ವರ್, ಶರತ್, ವಿಜಯಲಕ್ಷ್ಮೀ, ಶಾದಾಬ್, ಪುಟ್ಟಮ್ಮ, ಇರ್ಷಾದ್, ಬಾಬಣ್ಣ ಹಾಗೂ ಇತರೆ ಮುಖಂಡರು ಇದ್ದರು.
ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ : ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹೊಳೆಬಸ್‌ಸ್ಟಾಪ್ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಲಾಯಿತು.


ಮೋದಿ ಸರ್ಕಾರ ಕೋವಿಡ್ ಸಂಕಷ್ಟದ ಸಮಯದಲ್ಲೂ ತೈಲ ಬೆಲೆ ಏರಿಸಿ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಬಿಜೆಪಿ ಸರ್ಕಾರವನ್ನು ನಂಬಿದ ಜನರಿಗೆ ಈಗ ಆ ಸರ್ಕಾರದ ಮೇಲೆ ವಿಶ್ವಾಸವೆ ಹೊರಟು ಹೋಗಿದೆ. ಜನರಿಗೆ ದಿಕ್ಕೆ ತೋಚದಂತಾಗಿದೆ. ಬಡವರು ಜೀವಿಸಲು ಸಾಧ್ಯವಾಗದಂತ ಪರಿಸ್ಥಿತಿಯನ್ನು ನಿರ್ಮಾಣಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್, ಪ್ರಮುಖರಾದ ಕಾಶಿ ವಿಶ್ವನಾಥ್, ವಿನಯ್, ಗಿರೀಶ್, ಅಬ್ದುಲ್, ಪ್ರಮೋದ್, ಜಫರುಲ್ಲಾ, ಸಂದೇಶ್, ಅರ್ಜುನ್ ಮುಂತಾದವರಿದ್ದರು.

Exit mobile version