Site icon TUNGATARANGA

ಶಿವಮೊಗ್ಗ ಆದಿಚುಂಚನಗಿರಿ ಮಠದಿಂದ ಸದ್ದಿಲ್ಲದ ದಾಸೋಹ, ಕಿಟ್ ವಿತರಣೆಯ ಸಾರ್ಥಕತೆ

ಶಿವಮೊಗ್ಗ: ಕರಾಳ ಕೊರೊನಾ ದಳ್ಳುರಿಗೆ ರಾಜ್ಯ ತತ್ತರಿಸಿರುವಾಗ ಆದಿಚುಂಚನಗಿರಿ ಮಠ ಸದ್ದಿಲ್ಲದೇ ಕಡು ಬಡವರಿಗೆ ಹೊಟ್ಟೆ ತುಂಬಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠ ಕಳೆದ ಮೇ.೨೩ರಿಂದ ಇಂದಿನವರೆಗೆ ಅಲೆಮಾರಿಗಳಿಗೆ, ನಿರಾಶ್ರಿತರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ರೋಗಿಗಳ ಪೋಷಕರು ಸೇರಿದಂತೆ ಪಡಿತರ ಚೀಟಿ ಇಲ್ಲದೇ ತುತ್ತಿಗಾಗಿ ಪರದಾಡುತ್ತಿರುವ ನೂರಾರು ಜನರಿಗೆ ಹಸಿವು ಇಂಗಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.


ಮಹಾ ಸಂಸ್ಥಾನದ ಡಾ.ನಿರ್ಮಾಲನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಶಾಖಾ ಮಠವು ದಾಸೋಹ ಹಾಗೂ ಕಿಟ್ ನೀಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ಗಾಡಿಕೊಪ್ಪದ ಶ್ರೀರಾಂಪುರದಲ್ಲಿರುವ ಸುಮಾರು ೨೫೦ಜನರು ಪಡಿತರ ಚೀಟಿ ಇಲ್ಲದೇ ಟೆಂಟ್‌ಗಳಲ್ಲಿ ಬದುಕುತ್ತಿದ್ದಾರೆ. ಅವರನ್ನು ಗುರುತಿಸಿ ಅವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿಗಳು ಕೀರ್ತಿನಗರದಲ್ಲಿರುವ ನಿರಾಶ್ರಿತರು, ಲಿಂಗತ್ವ ಅಲ್ಪಸಂಖ್ಯಾತರಿಗೆ ತುತ್ತಿನ ಆಹಾರ ಕಿಟ್‌ಗಳನ್ನು ಕೊಡಮಾಡಿದೆ.


ನಿರಂತರವಾಗಿ ನಿತ್ಯ ಸುಮಾರು ೨೦೦ ಚಪಾತಿಗಳನ್ನು ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಸೆಂಟರ್ ರೋಗಿಗಳ ಪೋಷಕರಿಗೆ ನೀಡುತ್ತಿರುವ ಆದಿಚುಂಚನಗಿರಿ ಮಠವು ಇಂದು ಬೆಳಗ್ಗೆ ಶ್ರೀರಾಂಪುರದ ಯಾವುದೇ ಹಕ್ಕುಗಳಿಲ್ಲದೇ, ಪಡಿತರ ಚೀಟಿ ಇಲ್ಲದೇ ಟೆಂಟ್‌ಗಳಲ್ಲಿ ವಾಸ ಮಾಡುತ್ತಿರುವ ಸುಮಾರು ೨೫೦ ಮಹಿಳೆಯರು, ಮಕ್ಕಳು, ವೃದ್ಧರಿಗೆ ಬೆಳಗಿನ ದಾಸೋಹದ ವ್ಯವಸ್ಥೆಯನ್ನು ಮಾಡಿತ್ತು. ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಪತ್ರಕರ್ತ ಹಾಗೂ ರಾಜ್ಯ ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಎಸ್.ರಮೇಶ್ ದಾಸೋಹ ವಿತರಿಸಿದರು.
ಭದ್ರಾವತಿ ಪದ್ಮಾಂಬ ಸ್ವಯಂ ಸೇವಾ ಸಂಸ್ಥೆಯ ಪ್ರಮುಖರು, ಸಮಾಜ ಸೇವಕಿಯೂ ಆದ ಕೆ.ಸಿ. ಅನ್ನಪೂರ್ಣ ಸತೀಶ್ ಅವರು ಮಾಸ್ಕ್ ಹಾಗೂ ಇತರ ಸಾಮಗ್ರಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಅಮೀಷ್, ಪತ್ರಕರ್ತ ಶೈಲೇಶ್ ಕೋಟಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಮಠದ ಜೊತೆ ಚುಂಚಾದ್ರಿ ಮಹಿಳಾ ಸೌಹಾರ್ದ ಸಹಕಾರಿ, ರಾಮಕೃಷ್ಣ ಚಾರಿಟಬಲ್ ಟ್ರಸ್ಟ್, ಒಕ್ಕಲಿಗರ ವೇದಿಕೆ, ಮಹಿಳಾ ಒಕ್ಕಲಿಗರ ವೇದಿಕೆ, ಹಾಪ್‌ಕಾಮ್ಸ್, ಉಲ್ಲಾಸ್ ಐಸ್‌ಕ್ರೀಂ, ವಿಶಾಲ್ ಗ್ಲಾಸ್, ಶಿವಮೊಗ್ಗ ಡಯಾಗ್ನೋಷ್ಟಿಕ್ಸ್, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳು ಸಮಾಜಮುಖಿ ಸೇವೆಗೆ ಕೈ ಜೋಡಿಸಿವೆ.

Exit mobile version