Site icon TUNGATARANGA

ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ನಮ್ಮೆಲ್ಲರ ಹೊಣೆ

ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಎಂದರೆ ಅವನತಿ ಹೊಂದಿದ ಅಥವಾ ನಾಶವಾದ ಪರಿಸರ ವ್ಯವಸ್ಥೆಗಳ ಚೇತರಿಕೆಗೆ ಸಹಾಯ ಮಾಡುವುದು ಹಾಗೂ ಇನ್ನೂ ಅಸ್ಥಿತ್ವದಲ್ಲಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಆ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆ, ಉತ್ಕೃಷ್ಟ ಜೀವವೈವಿಧ್ಯತೆಯೊಂದಿಗೆ ಹೆಚ್ಚು ಫಲವತ್ತಾದ ಮಣ್ಣು, ಮರ-ಗಿಡಗಳು ಹೀಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.

ಇಂದು (ಜೂನ್‍ 5) ವಿಶ್ವಪರಿಸರದಿನ ಭೂಮಿ ಮೇಲೆ ವಾಸಿಸುತ್ತಿರುವ ಪ್ರತಿಯೊಬ್ಬರೂ ಇದರ ಮಹತ್ವವನ್ನು ಅರಿಯಬೇಕಿದೆ. ನಮ್ಮ ಸಕಲ ಇಷ್ಟಾರ್ಥಗಳನ್ನೂ ಸುತ್ತಲಿನ ಪರಿಸರದಿಂದ ಈಡೇರಿಸಿಕೊಳ್ಳುವ ನಾವು. ಇಂದು ಉಸಿರಾಡಲೂ ಸಹ ಸ್ವಚ್ಛಗಾಳಿ ಸಿಗದ ರೀತಿಯಲ್ಲಿ ನಮ್ಮ ಪರಿಸರದ ಮೇಲೆ ಕ್ರೌರ್ಯ ಮೆರೆದಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಕಣ್ಣೆದುರೇ ನಮ್ಮ ಸರ್ವನಾಶ ನಡೆಯಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

೧೯೭೨ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಪರಿಸರ ಕುರಿತ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವಪರಿಸರ ದಿನವನ್ನಾಗಿ ಆಚರಣೆಗೆ ತಂದಿತು. ತದನಂತರ ೧೯೭೪ರಲ್ಲಿ ಇರುವುದೊಂದೇ ಭೂಮಿ (Only one earth)ಎಂಬ ವಿಷಯವಸ್ತುವಿನೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಜಾಗತಿಕ ತಾಪಮಾನ ಏರಿಕೆಯಿಂದ ಹಿಡಿದು ಸುಸ್ಥಿರ ಬಳಕೆ ಹಾಗೂ ವನ್ಯಜೀವಿ ಅಪರಾಧ, ಪರಿಸರ ಜಾಗೃತಿ, ಸಮುದ್ರ ಮಾಲಿನ್ಯ ಹೀಗೆ ತುರ್ತು ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ. ೨೦೨೧ರ ಜೂನ್ ೫ರ ಇಂದು ವಿಶ್ವಪರಿಸರ ದಿನವನ್ನು (ecosystem restoration) ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ.

ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಎಂದರೆ ಅವನತಿ ಹೊಂದಿದ ಅಥವಾ ನಾಶವಾದ ಪರಿಸರ ವ್ಯವಸ್ಥೆಗಳ ಚೇತರಿಕೆಗೆ ಸಹಾಯ ಮಾಡುವುದು ಹಾಗೂ ಇನ್ನೂ ಅಸ್ಥಿತ್ವದಲ್ಲಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಆ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆ, ಉತ್ಕೃಷ್ಟ ಜೀವವೈವಿಧ್ಯತೆಯೊಂದಿಗೆ ಹೆಚ್ಚು ಫಲವತ್ತಾದ ಮಣ್ಣು, ಮರ-ಗಿಡಗಳು ಹೀಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.

ನಾವು ಪರಿಸರದ ಶಿಶು, ನಮ್ಮ ಸುತ್ತಲಿನ ತರಹೇವಾರಿ ಮರಗಿಡಗಳು, ಪ್ರಾಣಿಪಕ್ಷಿಗಳು, ಕೀಟಗಳು, ವೈವಿಧ್ಯಮಯ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು, ನದಿ, ಉಪನದಿ, ಸಾಗರ- ಸರೋವರಗಳು, ಗುಡ್ಡ ಬೆಟ್ಟಗಳ ಸಾಲು, ಗಿರಿಧಾಮ, ಪರ್ವತ ಶಿಖರಗಳು, ಅಪರಿಮಿತ ಖನಿಜ ಸಂಪತ್ತು, ಗಾಳಿ ಬೆಳಕು ಹೀಗೆ ವೈವಿದ್ಯಮಯ ಸೊಬಗಿನಿಂದ ಕಂಗೊಳಿಸುತ್ತಿದ್ದ ನಿಸರ್ಗವನ್ನು ಮಾನವರಾದ ನಾವು ಅಳಿವಿನಂಚಿಗೆ ತಂದು ನಿಲ್ಲಿಸಿದ್ದೇವೆ. ಸೊಬಗು ಸೌಂದರ್ಯ ಕ್ಷೀಣಿಸುತ್ತಿದೆ. ನಮ್ಮನ್ನು ಕಾಳಜಿಯಿಂದ ಜತನ ಮಾಡಿಕೊಂಡು ಬಂದ ಪರಿಸರವನ್ನು ನಾವು ಯಕಶ್ಚಿತ್ ಆಗಿ ಕಾಣುವ ಮೂಲಕ ಕ್ರೂರತನವನ್ನು ಮೆರೆದಿದ್ದೇವೆ. ಮಾನವ ತನ್ನ ಕ್ಷಣಿಕ ಸುಖಕ್ಕೆ ಪರಿಸರದ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಲೇ ಬಂದಿದ್ದಾನೆ.

ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಗೆ ಶರಣಾಗಿ ಅನೇಕ ರೀತಿಯಲ್ಲಿ ಇಂದು ತಿಳಿದೋ ತಿಳಿಯದೆಯೋ  ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದಾನೆ. ಆಧುನಿಕ ಜಗತ್ತಿನ ನಾಗಾಲೋಟದ ತಂತ್ರಜ್ಞಾನ ಆವಿಷ್ಕಾರದಿಂದನ ಇಂದಿನ ಮಾನವನ ಜೀವನ-ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದು ಮಾನವನ ಅನೈಸರ್ಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಮಾನವ ತನ್ನ ನೈಸರ್ಗಿಕ ಜೀವನಕ್ಕೆ ಮರಳಬೇಕಿದೆ. ಆ ನಿಟ್ಟಿನಲ್ಲಿ ಇಂದಿನ ದಿನಮಾನದಲ್ಲಿ ನಮ್ಮ ಜೀವನಶೈಲಿಯ ಬದಲಾವಣೆ ಅನಿವಾರ್ಯವಾಗಿದೆ. ಆಡಳಿತ ಯಂತ್ರವು ಪರಿಸರಸ್ನೇಹಿ ಕಾನೂನು ಕಟ್ಟಳೆಗಳನ್ನು ತಂದರೂ ಅವುಗಳ ಅನುಷ್ಠಾನದಲ್ಲಿ ಸೋಲುತ್ತಿದೆ. ಪ್ರತಿಯೊಬ್ಬ ನಾಗರೀಕರೂ ಪರಿಸರದ ಮೇಲೆ ಕಾಳಜಿಯಿಟ್ಟು ಜೀವನ ಮಾಡಿದರೆ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಸಾಧ್ಯ. ಆಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬಹುದು.

ಪರಿಸರ ಕಾಳಜಿಗೆ ನಾವು ಮಾಡಲೇಬೇಕಾದ ಕಾರ್ಯಗಳು:

ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿರು ಹಾಗೂ ಒಣಕಸವನ್ನಾಗಿ ವಿಂಗಿಡಿಸಿ ವಿಲೇವಾರಿ ಮಾಡುವುದು. ಮರುಬಳಕೆಯಂತ ವಸ್ತುಗಳನ್ನು ಬಿಸಾಡದೆ ಇತರರಿಗಾದರೂ ದಾನ ಮಾಡುವುದು. ಮಣ್ಣಿನಲ್ಲಿ ಸುಲಭವಾಗಿ ಲೀನವಾಗುವ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಸುವುದು. ಟ್ಯೂಬ್‌ಲೈಟ್, ಸಿ.ಎಫ್.ಎಲ್. ಬಲ್ಬುಗಳು, ಇಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಿಡಿಭಾಗಗಳು ವಿಂಗಡಿಸಿ ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗರೂಕತೆಯಿಂದ ವಿಲೇವಾರಿ ಮಾಡುವುದು. ಸುತ್ತಲಿನ ಪರಿಸರದಲ್ಲಿ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡುವುದು. ವಿಶೇಷದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳುವುದು ಮತ್ತು ಅವುಗಳನ್ನು ಪೋಷಿಸುವುದು. ಇಂಗುಗುಂಡಿಗಳನ್ನು ಸ್ಥಾಪಿಸಿ ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಭೂಮಿಯಲ್ಲಿ ಇಂಗಿಸುವ ವ್ಯವಸ್ಥೆ ಕಲ್ಪಿಸುವುದು.

ಲೇಖನ: ಸೋಮಶೇಖರ ಎಂ. ಕೂಡ್ಲಿ

Exit mobile version