Site icon TUNGATARANGA

ಕಂಡ ಕಂಡಲ್ಲಿ ಬೈಕು, ಆಟೋ, ಕಾರಿಗೆ ಬೆಂಕಿ..!

ಶಿವಮೊಗ್ಗ : ಸೂಕ್ಷ್ಮ ಹಾಗೂ ಸುಭದ್ರವಾಗಿರುವ ಸಮಾಜದ ಸ್ವಸ್ಥತೆಯನ್ನು ಹಾಳು ಮಾಡಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳು ನಿನ್ನೆ ಮಧ್ಯರಾತ್ರಿ ಶಿವಮೊಗ್ಗ ನಗರದ ಹೊರವಲಯ ಹಾಗೂ ಇತರ ಕಡೆ ಕಂಡ ಕಂಡಲ್ಲಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಬೆಂಕಿಇಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗಾಂಜಾದಂತಹ ಆಫಿಮ್ ಜೊತೆಗೆ ಮರ್ಜಿಯಾದವರೆನ್ನಲಾದ ಇಬ್ಬರು ತಮ್ಮ ಬೈಕ್‌ನಲ್ಲಿ ಎಲ್ಲೆಂದರಲ್ಲಿ ವಾಹನಗಳಿಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆಯ ಬಗ್ಗೆ ನಿನ್ನೆ ಮಧ್ಯರಾತ್ರಿಯಿಂದಲೇ ದೊಡ್ಡಪೇಟೆ ಸಿಪಿಐ ವಸಂತ್ ಕುಮಾರ್, ಎಸ್‌ಐ ಶಂಕರಮೂರ್ತಿ ನೇತೃತ್ವದ ತಂಡ ಸಮಗ್ರ ತನಿಖೆಗೆ ಮುಂದಾಗಿದೆ.ಮಧ್ಯರಾತ್ರಿ ಸುಮಾರು ೨ಗಂಟೆಯ ಹೊತ್ತಿಗೆ ಮಲ್ಲಗೆನಹಳ್ಳಿಯ ಮನೆಯ ಮುಂದೆ ನಿಲ್ಲಿಸಿದ ೨ ಬೈಕ್‌ಗಳಿಗೆ ಬೆಂಕಿಇಟ್ಟು ಪರಾರಿಯಾಗಿದ್ದಾರೆ. ನಂತರ ಸಿಗೇಹಟ್ಟಿ ಬಿ.ಬಿ.ಸ್ಟೀಟ್ ವಲಯದಲ್ಲಿನ ಮನೆಯ ಮುಂದೆ ನಿಲ್ಲಿಸಿ ಹೊಸ ಆಟೋ ಹಾಗೂ ಕಾರೊಂದಕ್ಕೆ ಬೆಂಕಿ ಇಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕಾ ಮುದ್ರಣ ವಿಭಾಗದಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದ ಯುವಕನೋರ್ವ ಈ ಘಟನೆ ಅವಲೋಕಿಸಿ  ಜೋರಾಗಿ ಕಿರುಚಿದ್ದಾರೆ. ನಂತರ ವಿಡಿಯೊ ಮಾಡಲು ಮುಂದಾಗಿದ್ದಾರೆ ಈ ಸದ್ದಿಗೆ ಬೆಚ್ಚಿದ ಆರೋಪಿಗಳು ಓಡಿ ಹೋಗಿದ್ದಾರೆ. ಅವರ ಸಮಯ ಪ್ರಜ್ಞೆಯಿಂದ ಕಾರು ಉಳಿದುಕೊಂಡಿದೆ.ಇಷ್ಟಕ್ಕೆ ಮುಗಿಸದ ಕಿಡಿಗೇಡಿಗಳು ಪ್ಲಾಸ್ಟಿಕ್ ಹಾಗೂ ರಟ್ಟುಗಳನ್ನು ತುಂಬಿದ್ದ ಹೊಸ ಲಾರಿಯೊಂದಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲಿ ಬೀಟ್ ಕಾಯುತ್ತಿದ್ದ ದೊಡ್ಡಪೇಟೆಯ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಕೂಡಲೇ ಲಾರಿಯ ಮೇಲೆ ಬೆಂಕಿ ಹತ್ತಿಕೊಂಡಿದ್ದ ಪ್ಲಾಸ್ಟಿಕ್ ಹಾಗೂ ರಟ್ಟಿನ ಸಾಮಾಗ್ರಿಗಳನ್ನು ಸ್ಥಳೀಯರ ನೆರವಿನೊಂದಿಗೆ ಕೆಳಗೆ ಹಾಕಿದ್ದಾರೆ. ಹಾಗಾಗೀ ಲಾರಿ ಉಳಿದುಕೊಂಡಿದೆ. ಅಗ್ನಿ ಶಾಮಕದಳ ಬರುವಷ್ಟವರಲ್ಲಿ ಬೆಂಕಿ  ನಂದಿಸಿತ್ತು ಎನ್ನಲಾಗಿದೆ. ಮಾಹಿತಿ ತಿಳಿದ ದೊಡ್ಡಪೇಟೆ ಎಸ್‌ಐ ಶಂಕರಮೂರ್ತಿ ನೇತೃತ್ವದ ತಂಡ ಕಿಡಿಗೇಡಿಗಳನ್ನು ಹಿಡಿಯಲು ಪೊಲೀಸ್ ತಂಡಗಳ ಮೂಲಕ ರಾತ್ರಿ ಇಡೀ ಯತ್ನಿಸಿದ್ದಾರೆ. ಅನಗತ್ಯ ಗಲಭೆ ಸೃಷ್ಠಿಸುವ ವಿಕೃತ ಮನಸ್ಸಿನ ವ್ಯಸನಿಗಳ ಕಥೆ ಇದಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಹಿಡಿಯುವ ಭರವಸೆಯನ್ನು ದೊಡ್ಡಪೇಟೆ ಪೊಲೀಸರು ನೀಡಿದ್ದಾರೆ.

Exit mobile version