Site icon TUNGATARANGA

ಅಪರೂಪದ ಬಡವರ ವೈದ್ಯ ಡಾ. ಈಶ್ವರಪ್ಪ ಇನ್ನಿಲ್ಲ

Dr. Eshwarapp

ಶಿವಮೊಗ್ಗ, ಹಣವಿರಲಿ ಇಲ್ಲದಿರಲಿ ಶೀತ, ಜ್ವರ, ಕೆಮ್ಮು, ಮೈ ಕೈ ನೋವು, ಭೇದಿ, ಹೊಟ್ಟಿನೋವು, ಮೂಳೆ, ಸಂದಿವಾತ ಏನೇ ಇರಲಿ ತಾವೇ ನೋಡಿ ಸೂಕ್ತ ಇಂಜೇಕ್ಷನ್ ಹಾಗೂ ಗುಳಿಗೆಗಳನ್ನು ನೀಡಲು ಕಳುಹಿಸುತ್ತಿದ್ದ ಶಿವಮೊಗ್ಗ ಕೆಲವೇ ಕೆಲವು ಅಪರೂಪದ ವೈದ್ಯರುಗಳಲ್ಲಿ ಒಬ್ಬರಾದ ಜೈಲ್ ರಸ್ತೆಯ ಸಾನಿಧ್ಯ ಕ್ಲಿನಿಕ್‌ನ ಡಾ. ಈಶ್ವರಪ್ಪ ಅವರು ಇನ್ನಿಲ್ಲ.


ಸದಾ ಆಸ್ಪತ್ರೆಯ ಅವಧಿಯಲ್ಲಿ ಕಿಕ್ಕಿರಿದ ಜನಸ್ತೋಮ ಕಾಣುತ್ತಿದ್ದ ಜಾಗ ಶಿವಮೊಗ್ಗ ಗ್ಯಾಸ್ ಎದುರಿನ ಸಾನಿಧ್ಯ ಕ್ಲಿನಿಕ್. ಡಾ. ಈಶ್ವರಪ್ಪ ಎಂದರೆ ಜನಾನುರಾಗಿ ಅಷ್ಟೇ ಅಲ್ಲ. ವೈದ್ಯ, ದೇವರಿಗಿಂತ ಮಿಗಿಲಾದವನು ಎಂದು ಶಿವಮೊಗ್ಗದ ಜಗತ್ತಿಗೆ ಸಾರಿದಂತಹ ಮಹಾನ್ ವ್ಯಕ್ತಿ. ಆಸ್ಪತ್ರೆಯು ಹಿಂದಿನ ಹಾಗೂ ಇಂದಿನ ಕೊರೊನಾ ಅವಧಿಯಲ್ಲಿಯೂ ನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕೊಟ್ಟಷ್ಟು ಕಾಸು ಪಡೆಯುತ್ತಿದ್ದ ಹಿರಿಯ ವೈದ್ಯ ಡಾ.ಈಶ್ವರಪ್ಪ ಅವರ ಸಾನಿಧ್ಯವೇ ನೂರಾರು ಜನರಿಗೆ ಆರೋಗ್ಯದ ದೈವ ಮಂದಿರವಾಗಿ ಕಾಣಿಸಿಕೊಳ್ಳುತ್ತಿತ್ತು. ಮೂಳೆ ತಜ್ಞರಾದ ಡಾ.ಈಶ್ವರಪ್ಪ ಅವರ ಬಳಿ ಮಧ್ಯಮ ವರ್ಗಕ್ಕಿಂತ ಹೆಚ್ಚಾಗಿ ಅತ್ಯಂತ ಬಡತನದ ಗೆರೆಯೊಳಗಿನ ಜನರೇ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಯಾವುದಕ್ಕೂ ಸಿಂಡರಿಸಿಕೊಳ್ಳದೇ ಏನಾದರೂ ಆಗಲೀ ನನ್ನ ಕರ್ತವ್ಯವಿದು ಎಂದುಕೊಂಡು ಇರುವಷ್ಟೇ ಜಾಗದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದ ಡಾ.ಈಶ್ವರಪ್ಪ ರೋಗಿಗಳಿಗೆ ಎಂದೂ ಡಿಮ್ಯಾಂಡ್ ಮಾಡಿ ಶುಲ್ಕ ಪಡೆದ ವೈದ್ಯರಲ್ಲವೇ ಅಲ್ಲ.


ಈಶ್ವರಪ್ಪ ಅವರ ಬಗ್ಗೆ ನಾಲ್ಕು ಸಾಲುಗಳಲ್ಲಿ ಹೇಳಲು ಅಸಾಧ್ಯ. ಅವರಿಂದ ಕೈ ಮುಟ್ಟಿಸಿಕೊಂಡರೇ ನಮ್ಮ ರೋಗವೆಲ್ಲಾ ಕಳೆದು ಹೋಗುತ್ತಿದೆ ಎಂಬ ನಂಬಿಕೆಯನ್ನು ನೂರಾರು ಕುಟುಂಬಗಳು ಹೊಂದಿದ್ದವು. ಈಶ್ವರಪ್ಪರ ಕೈಯಲ್ಲಿ ಒಂದು ಇಂಜೇಕ್ಷನ್ ಮಾಡಿಸಿಕೊಂಡರೇ ನಮಗಿರುವ ಜ್ವರ, ಶೀತ, ಕೆಮ್ಮು ಮೈ-ಕೈ ನೋವು ಕ್ಷಣ ಮಾತ್ರದಲ್ಲಿ ಮಂಗಮಾಯ ಎನ್ನುವ ಶೇ.೧೦೦ರಷ್ಟು ಜನರನ್ನು ಹೊಂದಿದ್ದರು.
ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರುತ್ತಿದ್ದ ಈಶ್ವರಪ್ಪ ಮಧ್ಯಾಹ್ನದ ಹೊತ್ತು ಊಟ ಮರೆತದ್ದೆ ಹೆಚ್ಚು. ಅಲ್ಲಿಯೇ ಇರುವ ಚಿಕ್ಕ ಕಪಾಟಿನ ಮೇಲೆ ಕುಳ್ಳಿರಿಸಿ ಗ್ಲೂಕೋಸ್ ಹಾಕುವುದರಿಂದ ಹಿಡಿದು ರೋಗಿಯ ಮನಸ್ಸಿನಲ್ಲಿ ಏನಾಗಿಲ್ಲ ಎಂಬ ಆತ್ಮ ವಿಶ್ವಾಸದ ದೈರ್ಯವನ್ನು ತುಂಬುತ್ತಿದ್ದ ಈಶ್ವರಪ್ಪ ಅವರಿಗೆ ಸರಿಸಮಾನರಾದ, ದೈವಸಮಾನರಾದ ವೈದ್ಯರ ಸಂಖ್ಯೆ ಅತ್ಯಂತ ಕಡಿಮೆ.


ಪುತ್ರ ಡಾ. ಪ್ರೀತಮ್, ಪತ್ನಿ ಹಾಗೂ ಕುಟುಂಬವನ್ನು ಬಿಟ್ಟು ಆಗಲಿರುವ ಈಶ್ವರಪ್ಪರಿಗೆ ಕಾಡಿದ್ದು, ಕಿರಿಕ್ ಕೊರೊನಾ. ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದ್ದು, ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.
ಸಂತಾಪ: ಜನಾನುರಾಗಿ ಡಾ. ಈಶ್ವರಪ್ಪ ಅವರ ನಿಧನಕ್ಕೆ ವೈದ್ಯ ಸಮೂಹ ಹಾಗೂ ತುಂಗಾ ತರಂಗ ಪತ್ರಿಕಾ ಬಳಗ ಕಂಬನಿ ಮಿಡಿದಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

Exit mobile version