Site icon TUNGATARANGA

ಈಗಲೂ ಗಾಂಜಾ ಹರಿದಾಡುತ್ತಿದೆಯೇ….? ಪ್ರಕರಣದ ಸಮಗ್ರ ತನಿಖೆಗೆ ಕೆ. ಬಿ. ಪ್ರಸನ್ನಕುಮಾರ್ ಆಗ್ರಹ 

ಶಿವಮೊಗ್ಗ, ಮೇ.2೦:
ಶಿವಮೊಗ್ಗ ಗಾಂಧಿಬಜಾರ್ ಸರಹದ್ದಿನಲ್ಲಿ ವಾಹನಗಳ ಗಾಜು ಪುಡಿ ಪುಡಿ ಮಾಡಿರುವ ಘಟನೆಯ ಸಮಗ್ರ ತನಿಖೆ ನಡೆಯಬೇಕು. ಹಾಗೆಯೇ, ಈ ಘಟನೆಯ ಮೂಲದ ಮತ್ತು ಹಿಂದಿನ ದಿನಗಳ ಜಗಳದ ವಿವರಣೆ ಪಡೆದು ತಪ್ಪಿತಸ್ಥರ ವಿರುದ್ದ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳಲು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಯುವ ರಕ್ಷಣಾಧಿಕಾರಿಗಳು ನಿನ್ನೆ ರಾತ್ರಿ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಒಂದಿಬ್ಬರನ್ನು ಬಂಧಿಸಿ ಈ ಪ್ರಕರಣವನ್ನು ಕೊನೆ ಮಾಡದೇ ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಿ ಕೊರೊನಾ ಲಾಕ್ ಡೌನಿನ ಈ ಅವಧಿಯಲ್ಲೂ ಗಾಂಜಾ ಹರಿದಾಡುವುದು ಸೇರಿದಂತೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗಾಂಧಿ ಬಜಾರ್‌ನಲ್ಲಿ ನಡೆದಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ‘ತುಂಗಾ ತರಂಗ ಪತ್ರಿಕೆ’ಯೊಂದಿಗೆ ಮಾತನಾಡಿದ ಅವರು ಈ ರೀತಿಯ ಸಮಾಜಘಾತುಕ ಕೃತ್ಯಗಳು ೨-೩ ದಿನಗಳ ಹಿಂದಿನಿಂದಲೇ ನಡೆಯುತ್ತಿರುವುದು ಇಲ್ಲಿನ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಿಳಿದು ಬಂದಿದೆ. ಆದರೂ ಸಹ ಕ್ರಿಕೆಟ್ ಎಂಬ ಕುಂಟು ನೆಪ ಹೇಳುತ್ತಾ ತಳ್ಳಿ ಹಾಕಿದ್ದಾರೆ. ಲಾಕ್ ಡೌನಿನಲ್ಲಿ ಅಲ್ಲಿ ಕ್ರಿಕೇಟ್ ಆಡಲು ಬಿಟ್ಟವರಾರು.ಎಂದು ಹೇಳಿದರು.
ರಾಜ್ಯ ಸರ್ಕಾರ, ಪಕ್ಷಗಳು, ಸಹಕಾರಿ ಸಂಘ, ಸಂಸ್ಥೆಗಳು, ಸಾರ್ವಜನಿಕರು ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ನಗರದಲ್ಲಿ ಈ ಘಟನೆ ನಡೆದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಾಕ್‌ಡೌನ್, ಕರ್ಫ್ಯೂ ಸಂದರ್ಭದಲ್ಲಿಯೂ ಸಹ ಗಾಂಜಾ, ಆಪೀನಂತಹ ಮತ್ತಿತರರ ಮಾದಕ ವಸ್ತುಗಳು ಸಿಗಬೇಕಾದರೆ ಆಶ್ಚರ್ಯವಾಗುತ್ತದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮುಂದುವರೆಯದಿರಲು ಬಿಡದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

Exit mobile version