Site icon TUNGATARANGA

ಶುಭ ಮಂಗಳ ಛತ್ರ ಈಗ ಕೋವಿಡ್ ಕೇರ್ ಸೆಂಟರ್, ಸಚಿವ ಈಶ್ವರಪ್ಪರ ಸ್ವಂತ ಖರ್ಚಿನಿಂದ ವ್ಯವಸ್ಥೆ, ಮೆಟ್ರೊ ಆಸ್ಪತ್ರೆ ಸಹಕಾರ

ಶಿವಮೊಗ್ಗ,ಮೇ.16:
ಜಿಲ್ಲೆಯಲ್ಲಿ ಪ್ರತಿದಿನ ಏರಿಳಿತದ ಮೂಲಕ ಆತಂಕವನ್ನು ಸೃಷ್ಠಿಸಿರುವ ಕೊರೋನಾ ಸೋಂಕಿನಿಂದ ತತ್ತರಿಸಿರುವ ನಾಗರಿಕರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಧಾವಿಸಿದ್ದಾರೆ.
ಹೌದು… ಕಡಿಮೆ ರೋಗ ಲಕ್ಷಣಗಳನ್ನು ಹೊಂದಿರುವ ಕೋವಿಡ್ ಸೋಂಕಿತರಿಗಾಗಿ ಶುಭ ಮಂಗಳ ಕಲ್ಯಾಣ ಮಂಟಪವನ್ನು 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದು, ಇದು ಮಂಗಳವಾರದಿಂದ ಆರಂಭಗೊಳ್ಳಲಿದೆ.
ಕಡಿಮೆ ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತರಿಗಾಗಿ ಈ ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗುತ್ತಿದ್ದು, ಉತ್ಕೃಷ್ಠ ದರ್ಜೆ ಸವಲತ್ತುಗಳನ್ನು ಇಲ್ಲಿ ಕಲ್ಪಿಸಲಾಗುತ್ತಿದೆ. ಇಲ್ಲಿ, ದಾಖಲಾಗುವ ರೋಗಿಗಳು ಮನೆಯಿಂದ ತಮ್ಮ ಬಟ್ಟೆಗಳನ್ನು ತಂದರೆ ಸಾಕು. ಇನ್ನುಳಿದಂತೆ ಉತ್ತಮ ಗುಣಮಟ್ಟದ ಹಾಸಿಗೆ, ಹೊದಿಕೆ, ಪೇಸ್ಟ್‌, ಬ್ರಷ್, ಸೋಪು, ಶಾಂಪು, ಶುಚಿ ಹಾಗೂ ರುಚಿಯಾದ ಉಪಾಹಾರ, ಊಟ, ಪೌಷ್ಠಿಕ ಆಹಾರ, ಶುದ್ದವಾದ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ವಿಶೇಷವೆಂದರೆ ಇಲ್ಲಿ ಸೋಂಕಿತರಿಗೆ ಒಮ್ಮೆ ನೀಡಲಾದ ಹಾಸುವ ಹಾಗೂ ಹೊದೆಯುವ ಹೊದಿಕೆಗಳನ್ನು ಮರುಬಳಕೆ ಮಾಡದೇ, ಹೊಸತನ್ನೇ ಬಳಸಲಾಗುತ್ತದೆ.


ಮೆಟ್ರೋ ಆಸ್ಪತ್ರೆ ಸಹಕಾರ


ಇನ್ನು, ಈ ಕೋವಿಡ್ ಕೇರ್ ಸೆಂಟರ್’ಗೆ ಮೆಟ್ರೋ ಆಸ್ಪತ್ರೆಯ ಸಹಕಾರವಿದೆ. ಈ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳು ಪ್ರತಿದಿನ ಮೂರು ಪಾಳಿಯಲ್ಲಿ ಇಲ್ಲಿಯೇ ಇದ್ದು ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ದಾಖಲಾಗುವ ಕಡಿಮೆ ರೋಗ ಲಕ್ಷಣವಿರುವ ಸೋಂಕಿತರಿಗೆ ಅಗತ್ಯವಿರುವ ಎಲ್ಲ ರೀತಿಯ ವೈದ್ಯಕೀಯ ನೆರವು ಇಲ್ಲಿ ದೊರೆಯಲಿದೆ.
ಸಂಪೂರ್ಣ ಉಚಿತ ಹಾಗೂ ಸಚಿವರಿಂದಲೇ ಎಲ್ಲ ಖರ್ಚು
ಶುಭ ಮಂಗಳ ಟ್ರಸ್ಟ್‌ ವತಿಯಿಂದ ಈ ಕಲ್ಯಾಣ ಮಂಟಪವನ್ನು ಉಚಿತವಾಗಿ ಕೋವಿಡ್ ಕೇರ್ ಸೆಂಟರ್’ಗೆ ನೀಡಲಾಗಿದೆ.
ಇನ್ನು, ಈ ಕೋವಿಡ್ ಕೇರ್ ಸೆಂಟರ್’ನಲ್ಲಿ ದಾಖಲಾಗುವ ಸೋಂಕಿತರಿಗೆ ಇಲ್ಲಿನ ಸೇವೆಗಳು ಸಂಪೂರ್ಣ ಉಚಿತವಾಗಿದ್ದು, ಇದರ ಎಲ್ಲ ಖರ್ಚು ವೆಚ್ಚಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಜಿಪಂ ಸದಸ್ಯ ಕೆ.ಈ. ಕಾಂತೇಶ್ ಅವರುಗಳು ಭರಿಸುತ್ತಿದ್ದಾರೆ.


ಮಂಗಳವಾರದಿಂದ ಈ ಸೆಂಟರ್ ಕಾರ್ಯಾರಂಭ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಚಿವ ಈಶ್ವರಪ್ಪ ಹಾಗೂ ಜಿಪಂ ಸದಸ್ಯ ಕೆ.ಈ. ಕಾಂತೇಶ್ ಅವರುಗಳು ಶುಭ ಮಂಗಳ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ, ಸಿದ್ದತೆಗಳನ್ನು ಪರಿಶೀಲನೆ ನಡೆಸಿದರು.
ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ಬೆಡ್ ದೊರೆಯದೇ ಪರಿಪಾಟಲು ಪಡುತ್ತಿರುವ ಈ ಸಂದರ್ಭದಲ್ಲಿ ತಮ್ಮದೇ ಖರ್ಚಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿರುವ ಸಚಿವ ಈಶ್ವರಪ್ಪನವರ ಕಾರ್ಯ ನಿಜಕ್ಕೂ ಮಾದರಿಯಾದುದು.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

Exit mobile version