ಶಿವಮೊಗ್ಗ : ಲಾಕ್‌ಡೌನ್ ಕಾರಣದಿಂದ ಹಿಂದಿನ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿ ನಿರೀಕ್ಷಿತ ವಹಿವಾಟು ಕಾಣದಿದ್ದ ಜಿಲ್ಲೆಯ ಚಿನ್ನಾಭರಣ ವರ್ತಕರಿಗೆ ಈ ಬಾರಿಯೂ ಲಾಕ್‌ಡೌನ್ ಬಿಸಿ ತಟ್ಟಿದೆ.
ಕೋವಿಡ್-19 ತಡೆಗಟ್ಟುವ ಉದ್ದೇಶದಿಂದ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಚಿನ್ನಾಭರಣ ಮಳಿಗೆಗಳು ಬಂದ್ ಆಗಿವೆ.
ಅಕ್ಷಯ ತೃತೀಯ ಇರುವುದರಿಂದ ಕೆಲವು ವರ್ತಕರು ಅಲ್ಪಪ್ರಮಾಣದಲ್ಲಿ ಆದರೂ ವ್ಯಾಪಾರ ನಡೆಸುವ ಉದ್ದೇಶದಿಂದ ಆನ್ಲೈನ್ ಮೂಲಕ ತಮ್ಮ ಗ್ರಾಹಕರಿಗೆ ಸೇವೆ ನೀಡಲು ಮುಂದಾಗಿದ್ದಾರೆ.
ಕೆಲವು ದೊಡ್ಡ ದೊಡ್ಡ ವರ್ತಕರು ಹಾಗೂ ಚಿನ್ನಾಭರಣ ಮಳಿಗೆಯವರು ಆನ್ಲೈನ್ ಮೂಲಕ ಚಿನ್ನಾಭರಣ, ಚಿನ್ನದ ಗಟ್ಟಿ ಹಾಗೂ ಚಿನ್ನದ ನಾಣ್ಯದ ವ್ಯಾಪಾರ ನಡೆಸಿದರು. ಇದಕ್ಕಾಗಿ ಆಭರಣ ಮಳಿಗೆಯವರಿಂದ ತಮ್ಮ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಆನ್‌ಲೈನ್ ಬುಕ್ ಮಾಡುವಂತೆ ಮೊದಲೇ ತಿಳಿಸಿದ್ದರು.
ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೆಲವರು ಆನ್‌ಲೈನ್ ಮುಖಾಂತರ ಚಿನ್ನಾಭರಣ ಖರೀದಿಗೆ ಮೊರೆಹೋಗಿದ್ದು ಕಂಡುಬಂತು.
ಅಕ್ಷಯ ತೃತೀಯ ಬಂತೆಂದರೆ ಆಭರಣ ಮಳಿಗೆಗಳಲ್ಲಿ ಗ್ರಾಹಕರ ದಂಡೇ ನೆರೆದಿತ್ತು. ಪ್ರಖ್ಯಾತ ಆಭರಣ ಮಳಿಗೆಗಳಲ್ಲಿ ತಿಂಗಳಿಗೆ ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲೆಯಲ್ಲಿ ಅಕ್ಷಯ ತೃತೀಯದಂದು ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಖರೀದಿಯಾಗುತ್ತಿತ್ತು. ಆದರೆ ಕೋವಿಡ್-೧೯ ಲಾಕ್‌ಡೌನ್ ಪರಿಣಾಮವಾಗಿ ಗ್ರಾಹಕರ ಖರೀದಿ ಆಸೆಗೆ ತಣ್ಣೀರು ಎರಚಿದಂತಾಗಿದೆ. ಅಲ್ಲದೆ ಗ್ರಾಹಕರಿಲ್ಲದೇ ಆಭರಣ ಮಳಿಗೆಗಳಿಗೂ ಸಾಕ? ಹೊಡೆತ ಬಿದ್ದಿದೆ.