Site icon TUNGATARANGA

ಕಷ್ಟದಲ್ಲಿ ಇರುವ ಏಕೈಕ ವರ್ಗ ರೈತಾಪಿ ವರ್ಗ : ಪವಿತ್ರ ರಾಮಯ್ಯ


ಶಿವಮೊಗ್ಗ : ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಕಷ್ಟದಲ್ಲಿ ಇರುವ ಏಕೈಕ ವರ್ಗವಿದ್ದರೆ ಅದು ರೈತಾಪಿ ವರ್ಗ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ದೊಡ್ಡಗೊಪ್ಪೆನಹಳ್ಳಿ, ಚಿಕ್ಕಗೊಪ್ಪೆನಹಳ್ಳಿ, ಹೊನ್ನೆಹಟ್ಟಿ ಹೊಸೂರು, ಮಲ್ಲಿಗೆನಹಳ್ಳಿ ಹಾಗೂ ಕಾರೇಹಳ್ಳಿ ಗ್ರಾಮದ ಅಚ್ಚುಕಟ್ಟು ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.


ಅನ್ನದಾತರಿಗೆ ಪ್ರಮುಖವಾಗಿ ತಾವು ಬೆಳೆಯುವ ಬೆಳೆಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲು ಹಾಗೂ ಕಟಾವು ಮಾಡಿದ ಬೆಳೆಗಳನ್ನು ಕೊಂಡೊಯ್ಯಲು ಟ್ರ್ಯಾಕ್ಟರ್, ಎತ್ತಿನ ಗಾಡಿ ಇನ್ನಿತರ ವಾಹನಗಳ ಮೂಲಕ ಪ್ರತಿದಿನ ರಸ್ತೆಗಳನ್ನು ಬಳಸುತ್ತಾರೆ ಜೊತೆಗೆ ಕೆಲವು ರೈತರ ಬಳಿ ವಾಹನ ವ್ಯವಸ್ಥೆ ಇಲ್ಲದೆ ಇರುವುದರಿಂದ ಭತ್ತದ ಕಣಜ, ಕಬ್ಬಿನ ಜಲ್ಲೆ, ಹುಲ್ಲಿನ ಹೊರೆ ಹೊತ್ತುಕೊಂಡು ಹುಬ್ಬು ತಗ್ಗು ಇರುವ ಅಚ್ಚುಕಟ್ಟು ರಸ್ತೆಯನ್ನು ಅವಲಂಬಿಸಿರುತ್ತಾರೆ. ಈ ರಸ್ತೆಗಳು ಅಚ್ಚುಕಟ್ಟಾಗಿ ಇದ್ದರೆ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇಲ್ಲದಿದ್ದರೆ ರೈತರಿಗೆ ಕಾಲು, ಮಂಡಿ, ಸೊಂಟ ನೋವಿನ ಸಮಸ್ಯೆ ಎದುರಾಗುತ್ತದೆ ಎಂದು ಈ ಸಮಯದಲ್ಲಿ ಹೇಳಿದರು.


ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿ ತಕ್ಷಣವೇ ಸರ್ಕಾರಕ್ಕೆ ಅನುದಾನ ಕೋರಿ ಪತ್ರ ಬರೆದಾಗ ಮುಖ್ಯಮಂತ್ರಿಗಳು ಹಾಗೂ ಸಂಸದರು ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪರಿಣಾಮ ಆದ್ಯತೆ ಮೇರೆಗೆ ಅಭಿವೃದ್ದಿ ಕೆಲಸಗಳು ಕೈಗೊಳ್ಳಲು ಅನುಕೂಲವಾಯಿತು ಎಂದರು.
ಈ ಸಂದರ್ಭದಲ್ಲಿ ಗಂಗಣ್ಣ, ಶ್ರೀನಿವಾಸ್, ಅಮುದಾ, ಅಭಿಯಂತರರಾದ ಪುನೀತ್ ಮತ್ತು ಕಿರಣ್, ಅಚ್ಚುಕಟ್ಟು ಭಾಗದ ರೈತರು, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ಗ್ರಾಮದ ರೈತರು ಉಪಸ್ಥಿತರಿದ್ದರು.

Exit mobile version