Site icon TUNGATARANGA

ಕೊರೊನಾ ಟ್ರೀಟ್ ಗೆ ಬೆಡ್ ಇಲ್ಲ…, ಹುಷಾರ್..!

ಮೆಗ್ಗಾನ್ ಭರ್ತಿ: ಆಮ್ಲಜನಕ ಹಾಸಿಗೆಗಳಿಗೆ ರೋಗಿಗಳ ಪರದಾಟ

ಶಿವಮೊಗ್ಗ,ಮೇ.06:
ಇಲ್ಲಿಗೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಆಮ್ಲಜನಕ ಹಾಸಿಗೆಗಳ ಕೊರತೆ ಎದುರಾಗಿದೆ. ‘ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಲಭ್ಯವಿಲ್ಲ’ ಎಂದು ಇಲ್ಲಿನ ಪ್ರಮುಖ ಕೋವಿಡ್‌ ಕೇಂದ್ರವಾದ ಮೆಗ್ಗಾನ್ ಆಸ್ಪತ್ರೆಯ ಮುಂದೆ ಇಂದು ಫಲಕ ಹಾಕಲಾಗಿದೆ.
ಮೆಗ್ಗಾನ್ ಆಸ್ಪತ್ರೆಯು ಶಿವಮೊಗ್ಗ ಸೇರಿದಂತೆ ಸುತ್ತಲ ಜಿಲ್ಲೆಗಳ ಪ್ರಮುಖ ಕೋವಿಡ್‌ ಕೇಂದ್ರವಾಗಿದೆ. ಆಸ್ಪತ್ರೆಯಲ್ಲಿ 800 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಆದರೆ, ಎಲ್ಲ ಹಾಸಿಗಳಿಗೂ ಆಮ್ಲಜನಕ ಅಳವಡಿಸುವ ಪರಿಕರಗಳಿಲ್ಲ. ಹಾಗಾಗಿ, 500 ಹಾಸಿಗೆಗಳಷ್ಟೆ ರೋಗಿಗಳಿಗೆ ಲಭ್ಯವಾಗಿವೆ.
ಪ್ರತಿ ದಿನ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗುತ್ತಿದೆ. ಜತೆಗೆ ನಿತ್ಯ ಹೊರ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಆಮ್ಲಜನಕದ ಅಗತ್ಯ ಇರುವ ರೋಗಿಗಳು ಮೆಗ್ಗಾನ್‌ಗೆ ಬರುತ್ತಿದ್ದಾರೆ. ಆಮ್ಲಜನಕ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನಷ್ಟು ಹಾಸಿಗೆಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಅಲ್ಲಿಯವರೆಗೂ ಆಮ್ಲಜನಕ ಹಾಸಿಗೆಗಳ ಸೌಲಭ್ಯ ಇರುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಮಾಹಿತಿ ನೀಡಿದರು.
ಅಂಕಿ ಅಂಶಗಳ ಮಧ್ಯೆ ವ್ಯತ್ಯಾಸ:
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ 16 ಸಾವಿರ ಲೀಟರ್ ಆಮ್ಲಜನಕದ ಟ್ಯಾಂಕ್‌ ಭರ್ತಿ ಇದೆ. ಈಗಾಗಲೇ 800 ಹಾಸಿಗೆಗಳಿಗೆ ಸಂಪರ್ಕ ನೀಡಲಾಗಿದೆ. ಎರಡು ದಿನಗಳಲ್ಲಿ ಮತ್ತೆ 300 ಹಾಸಿಗೆಗಳಿಗೆ ಸಂಪರ್ಕ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕೋವಿಡ್‌ ರೋಗಿಗಳ ಹಾಸಿಗೆಗಳು 500 ದಾಟಿಲ್ಲ. ಇಲ್ಲಿ ನಿಜ ಹೇಳುತ್ತಿರುವವರಾರು…? ಜನ ಹುಷಾರಲ್ಲಿರಬೇಕಷ್ಟೆ..!

Exit mobile version