Site icon TUNGATARANGA

ಭದ್ರಾವತಿ ಮಧ್ಯಾಹ್ನ ವೇಳೆಗೆ ಶೇ.40, ತೀರ್ಥಹಳ್ಳಿ 51.03 ರಷ್ಟು ಮತದಾನ

ಭದ್ರಾವತಿ : ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಯಲ್ಲಿ ಮಧ್ಯಾಹ್ನ ವೇಳೆಗೆ ಬಹುತೇಕ ಮತಗಟ್ಟೆ ಗಳಲ್ಲಿ ಶೇ.40ರಷ್ಟು ಮತದಾನ ನಡೆದಿದ್ದು, ಕೊರೊನಾ 2ನೇ ಅಲೆ ಭೀತಿ ನಡುವೆಯೂ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
ಕೊರೋನಾ ಭೀತಿಯಿಂದಾಗಿ ಮತದಾರರು ಮತಗಟ್ಟೆಗಳಿಗೆ ಬರಲು ನಿರಾಕರಿಸುವ ಸಾಧ್ಯತೆ ಹೆಚ್ಚು ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿತ್ತು. ಆದರೆ ಅಭ್ಯರ್ಥಿಗಳ ಆತಂಕ ಬೆಳಿಗ್ಗೆಯಿಂದಲೇ ದೂರವಾಯಿತು. ಬಹುತೇಕ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳ ಬಳಿ ಜನರು ಕೋವಿಡ್-೧೯ ಮಾರ್ಗ ಸೂಚಿಗಳನ್ನು ಮೀರಿ ಗುಂಪು ಸೇರಿರುವುದು ಕಂಡು ಬಂದಿತು. ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಯಾವುದೂ ಸಹ ಕಂಡು ಬರಲಿಲ್ಲ. ಈ ನಡುವೆ ಪೊಲೀಸರು ಆಗಾಗ ಗುಂಪು ಸೇರದಂತೆ ಎಚ್ಚರವಹಿಸಿರುವುದು ಸಹ ಕಂಡು ಬಂದಿತು.


ವಾರ್ಡ್ ನಂ.೧೯, ೨೦, ೨೧ ಮತ್ತು ೨೨ರ ಮತದಾರರು ಕಾಗದನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಈ ನಡುವೆ ವಾರ್ಡ್ ನಂ.೨೧ರ ಮತದಾರರ ಪಟ್ಟಿಯಲ್ಲಿ ಅದಲು ಬದಲು ಆಗಿದ್ದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಅಶೋಕ್‌ಕುಮಾರ್ ಆರೋಪಿಸಿದರು. ಮತಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬರಲಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿತು.
ಗ್ರಾಮೀಣ ಪರಿಸರ ಹೊಂದಿರುವ ತಿಮ್ಲಾಪುರ-ದೊಡ್ಡಗೊಪ್ಪೇನ ಹಳ್ಳಿ ವ್ಯಾಪ್ತಿಯ ವಾರ್ಡ್ ನಂ.೨೩ರ ಮತದಾರರು ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ ಮತ್ತು ಬುಳ್ಳಾಪುರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೊಮ್ಮನಕಟ್ಟೆ ವ್ಯಾಪ್ತಿಯ ವಾರ್ಡ್ ನಂ.೨೪ರ ಮತದಾರರು ಒಂದೇ ಮತಗಟ್ಟೆಯ ೪ ವಿಭಾಗಗಳಲ್ಲಿ ಮತಚಲಾಯಿಸಿದರು.
ಹುಡ್ಕೋ-ಹೊಸಬುಳ್ಳಾಪುರ ವ್ಯಾಪ್ತಿಯ ವಾರ್ಡ್ ನಂ.೨೫ರ ಮತದಾರರು ೨ ಮತಗಟ್ಟೆಗಳಲ್ಲಿ ಮತಚಲಾಯಿಸಿದರು.

ಭದ್ರಾವತಿ ನಗರದಾದ್ಯಂತ ಬೆಳಗ್ಗೆಯಿಂದ ನಗರಸಭೆ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಕಡದಕಟ್ಟೆ ಹೊರತುಪಡಿಸಿ ಉಳೆದೆಲ್ಲೆಡೆ ನಿಧಾನಗತಿಯ ಮತದಾನವಾಗಿದೆ. ಮದ್ಯಾಹ್ನದ ನಂತರ ಉತ್ತಮ ಮತದಾನವಾಗುವ ಸಾಧ್ಯತೆಗಳಿವೆ. ಈ ಭಾರಿ ಬಿಜೆಪಿ ನಗರಸಭೆಯಲ್ಲಿ ಆಡಳಿತ ನಡೆಸುತ್ತದೆಂಬ ವಿಶ್ವಾಸವಿದೆ.
-ಬಿ.ಕೆ.ಶ್ರೀನಾಥ್, ಚುನಾವಣಾ ಉಸ್ತುವಾರಿ, ಭದ್ರಾವತಿ

ತೀರ್ಥಹಳ್ಳಿ ಮತಗಟ್ಟೆ ಕೇಂದ್ರಗಳಿಗೆ ಎಡಿಸಿ ಅನುರಾಧ ಭೇಟಿ, ಪರಿಶೀಲನೆ

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದ್ದು, ಮದ್ಯಾಹ್ನ ಹೊತ್ತಿಗೆ ಶೇ.೫೧.೦೩ರಷ್ಟು ಮತದಾನ ವಾಗಿತ್ತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಪಟ್ಟಣದ ಕೆಲವು ಮತಗಟ್ಟೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀರ್ಥಹಳ್ಳಿ ಕುವೆಂಪು ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಇರುವ ರಥಬೀದಿ ಮತಗಟ್ಟೆಗೆ ಭೇಟಿ ನೀಡಿ ಪ್ರಾರಂಭದಲ್ಲೇ ಕೊರೊನಾ ರೋಗ ನಿಯಂತ್ರಣ ನಿಯಮ ಗಳಂತೆ ಪರೀಕ್ಷೆಗೆ ಒಳಪಟ್ಟು ಸ್ಯಾನಿಟೈಸರ್ ಬಳಸಿ ಮತಗಟ್ಟೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಕುರುವಳ್ಳಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿರುವ ಮತಗಟ್ಟೆಗೆ ತೆರಳಿ ಮತದಾನದ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ವೃದ್ಧರು ಮತ್ತು ಅಂಗವಿಕಲರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಲು ಆದೇಶಿಸಿದರು.

Exit mobile version