Site icon TUNGATARANGA

ಶಿವಮೊಗ್ಗ | ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಂದ ದುರಹಂಕಾರ ವರ್ತನೆ: ದುಗ್ಗಪ್ಪಗೌಡ ಆರೋಪ


ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ ನೇರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧ್ಯಕ್ಷ ಚನ್ನವೀರಪ್ಪನವರ ದೌರ್ಜನ್ಯ ಹೆಚ್ಚುತ್ತಿದೆ. ನಿರ್ದೇಶಕನಾಗಿ ನಾನು ಕೆಲವು ಸಂದೇಹ ಮತ್ತು ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉತ್ತರ ಕೊಡಬೇಕೆಂದು ಪಟ್ಟು ಹಿಡಿದು ಕೂತಾಗ ನನ್ನನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಮತ್ತು ನಾನು ಒಬ್ಬನೇ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಪೊಲೀಸರನ್ನು ಕರೆಸಿ ನನಗೆ ಅವಮಾನ ಮಾಡಿ ಬಲತ್ಕಾರವಾಗಿ ಹೊರದಬ್ಬಿದ್ದಾರೆ. ಇವರ ದೌರ್ಜನ್ಯ ಮಿತಿ ಮೀರಿದೆ ಎಂದು ಆರೋಪಿಸಿದರು.


ಅಧ್ಯಕ್ಷರು ಆಡಳಿತ ಮಂಡಳಿಯೊಂದಿಗೆ ವಿಶ್ವಾಸದಿಂದ ವರ್ತಿಸುತ್ತಿಲ್ಲ. ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಬ್ಯಾಂಕ್ ಹೋದರೆ ಹೋಗಲಿ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇವರ ದುರಹಂಕಾರ ವರ್ತನೆ ಹೆಚ್ಚುತ್ತಿದೆ. ಇದು ಹೀಗೆ ಮುಂದುವರೆದರೆ ನಾವು ಅಸಹಕಾರ ಚಳುವಳಿಯನ್ನು ಆರಂಭಿಸಬೇಕಾಗುತ್ತದೆ ಎಂದರು.
ಹೋದ ವರ್ಷ ಬ್ಯಾಂಕ್ ೧೯ ಕೋಟಿ ಲಾಭದಲ್ಲಿತ್ತು. ಸೆಪ್ಟಂಬರ್ ೨೦ ರ ವರೆಗೂ ಇದ್ದ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸೌಹಾರ್ದ ವಾತಾವರಣವಿತ್ತು. ಇದರಿಂದ ಇದು ಸಾಧ್ಯವಾಯಿತು. ಆದರೆ ಈಗಿನ ಅಧ್ಯಕ್ಷರು ತಾವು ಅಧ್ಯಕ್ಷರಾಗುವ ಪೂರ್ವದಲ್ಲಿ ಹೆಚ್ಚುವರಿ ಷೇರು ವಾಪಸ್ಸು ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆ ಹಾಗೆಯೇ ಉಳಿದಿದೆ ಮತ್ತು ಯಾವ ರೈತರಿಗು ಇವರು ಅಧ್ಯಕ್ಷರಾದ ಮೇಲೆ ಹೆಚ್ಚುವರಿ ಸಾಲ ನೀಡಿಲ್ಲ. ಆಡಳಿತ ಮಂಡಳಿ ಅನುಮತಿಯಿಲ್ಲದೆ ಬ್ಯಾಂಕಿನ ನೌಕರರ ವರ್ಗಾವಣೆ ಮಾಡುವ ಅಧಿಕಾರವು ಇರುವುದಿಲ್ಲ. ಆದರೆ ಇವರ ಅವಧಿಯಲ್ಲಿ ೨೩ ನೌಕರರು ವರ್ಗಾವಣೆಯಾಗಿದ್ದಾರೆ. ಇದರಲ್ಲಿ ಅವ್ಯವಹಾರವಾಗಿದೆ. ಅಶಿಸ್ತಿನಿಂದ ಗೈರು ಹಾಜರಾಗಿದ್ದ ಶಿಕ್ಷೆಗೆ ಒಳಪಟ್ಟ ಸಿಬ್ಬಂದಿಗಳಿಗೂ ಕೂಡ ಕ್ಷೇತ್ರಾಧಿಕಾರಿಯಂತಹ ಹುದ್ದೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ಬೆಳೆ ಸಾಲ ನೀಡುವಲ್ಲಿ ಅಕ್ರಮ ನಡೆಸುತ್ತಿದ್ದಾರೆ. ರೈತರಿಂದ ಕಮಿಷನ್ ದಂಧೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಶಯದಂತೆ ರೈತರಿಗೆ ಬೆಳೆ ಸಾಲ ನೀಡಬೇಕು ಇಲ್ಲದಿದ್ದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ವ ಹೋರಾಟ ನಡೆಸಲಾಗುವುದು ಎಂದು ಅವರು ತನಿಖಾ ವರದಿಯಲ್ಲಿ ತಪ್ಪಿತಸ್ಥ ಎಂದು ಹೇಳಿರುವ ನೌಕರನಿಗೆ ಈಗ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ನೀಡಿದ್ದಾರೆ ಎಂದು ದೂರಿದರು.
ಈ ಎಲ್ಲಾ ದೌರ್ಜನ್ಯ, ದುರಹಂಕಾರ ಮತ್ತು ಸರ್ವಾಧಿಕಾರಿತನವನ್ನು ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಈಗಿನ ಅಧ್ಯಕ್ಷರ ವಿರುದ್ಧ ಹೋರಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್.ಜಗದೀಶ್, ವಿಜಯಾನಂದ್ ಇದ್ದರು.

Exit mobile version