Site icon TUNGATARANGA

ಕಾಳೇನಹಳ್ಳಿ ಶಿವಯೋಗ ಮಂದಿರದ ಶ್ರೀಗಳು ಇನ್ನಿಲ್ಲ

ಶಿವಮೊಗ್ಗ, ಮಾ.16:
ಶಿಕಾರಿಪುರ ತಾ. ಕಾಳೇನಹಳ್ಳಿ ಶಿವಯೋಗ ಮಂದಿರದ 3ನೇ ಶ್ರೀಗಳು ಹಾಗೂ ಶಿಕಾರಿಪುರದ ನಡೆದಾಡುವ ದೇವರು ಎಂದೇ ಗುರುತಿಸಿಕೊಂಡಿದ್ದ ಶ್ರೀ.ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದಾರೆ.
ನಾಡಿನಾಧ್ಯಂತ ಅಪಾರ ಭಕ್ತ ಸಮೋಹವನ್ನು ಹೊಂದಿದ್ದ ವೀರಶೈವ ಮಹಾಸಭಾದ ರೂವಾರಿಗಳಲ್ಲೊಬ್ಬರಾದ ಶ್ರೀಗಳು ದಿನಾಂಕ 1-02-1977 ರಂದು ಪಟ್ಟಾಧಿಕಾರ ವಹಿಸಿಕೊಂಡು ಸುಮಾರು 44 ವರ್ಷಗಳ ಕಾಲ ಮಠವನ್ನು ಮುನ್ನಡೆಸಿದವರಾಗಿದ್ದಾರೆ.


ಸಾವಿರಾರು ಭಕ್ತರನ್ನು ಬಿಟ್ಟು ಅಗಲಿರುವ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಕ್ತ ಸಮೋಹ ಪ್ರಾರ್ಥಿಸಿದೆ.
ವೀರಶೈವ ಮಹಾಸಭೆಯ ಸ್ಥಾಪಕರು, ಹಾಗು ಶಿವಯೋಗ ಮಂದಿರದ ಸ್ಥಾಪಕರೂ ಆದ ಹಾನಗಲ್ಲು ಶ್ರೀ ಕುಮಾರ ಸ್ವಾಮಿಗಳು ಮಲೆನಾಡಿಗೆ ಧರ್ಮ ಪ್ರಚಾರಕ್ಕೆ ಬಂದಾಗ ಭಕ್ತರ ಅಪೇಕ್ಷೆಯಂತೆ ಕುಮದ್ವತಿ-ವೃಷಬಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿ 1912ರಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಿದ್ದರು.
ಶ್ರೀಗಳು ವೀರಶೈವ ಮಹಾಸಭಾದ ಶಿಕಾರಿಪುರ ತಾ. ಗೌರವಾಧ್ಯಕ್ಷರಾಗಿದ್ದರು.

ಸಂತಾಪ
ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ರೇವಣಸಿದ್ಧ ಮಹಾಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿಜಾಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಜನಿಸಿದ ಸ್ವಾಮೀಜಿ ಅವರು ಬಾಲ್ಯಾವಸ್ಥೆಯಲ್ಲಿಯೇ ಸನ್ಯಾಸ ಸ್ವೀಕರಿಸಿ, ಆಧ್ಯಾತ್ಮಿಕ ಉನ್ನತಿ ಸಾಧಿಸಿದ್ದರು. ಅವರು ತಮ್ಮ ಸಮಾಜಮುಖಿ ಚಿಂತನೆಗಳ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಎಲ್ಲಾ ಧರ್ಮದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಸ್ವಾಮೀಜಿ ಅವರ ನಿಧನದಿಂದ ನಾವು ಹಿರಿಯ ಆಧ್ಯಾತ್ಮಿಕ ಚೇತನವನ್ನು ಕಳೆದುಕೊಂಡಿದ್ದೇವೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Exit mobile version