ಶಿವಮೊಗ್ಗ: ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷಕ್ಕೆ ಮೋಸ ಮಾಡಲು ಪ್ರೇರೆಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಹೆಚ್.ಸಿ.ಬಸವರಾಜಪ್ಪ ಬುಳ್ಳಾಪುರ ಹಾಗೂ ಅಡ್ಡ ಮತದಾನ ಮಾಡಿದ ಇವರ ಪುತ್ರ ಎಪಿಎಂಸಿ ಸದಸ್ಯ ದಿನೇಶ್ ಬುಳ್ಳಾಪುರ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಉಚ್ಛಾಟಿಸಿದ್ದಾರೆ.
ಶಿವಮೊಗ್ಗ ಎ.ಪಿ.ಎಂ.ಸಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಅಡ್ಡ ಮತದಾನ ಚಲಾಯಿಸಿದ ಪಕ್ಷದ ಹೆಚ್.ಬಿ.ದಿನೇಶ್ ಬುಳ್ಳಾಪುರ ಇವರನ್ನು ಹಾಗೂ ಈ ಪ್ರಕ್ರಿಯೆಗೆ ಸಹಕರಿಸಿ ಚಟುವಟಿಕೆ ನಡೆಸಿದ ಹೆಚ್.ಸಿ.ಬಸವರಾಜಪ್ಪ ಬುಳ್ಳಾಪುರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಜನತಾ ಪಾರ್ಟಿಯಿಂದ ಉಚ್ಚಾಟಿಸಲಾಗಿದೆ.
ಆದರೆ ಈ ಅಡ್ಡ ಮತದಾನದ ಹಿಂದೆ ಬಿಜೆಪಿಯ ಕೆಲ ನಾಯಕರ ಕಾಣದ ಕೈಗಳು ಕೆಲಸ ಮಾಡಿದ್ದು, ಈಗ ಬಹುದೊಡ್ಡ ಚರ್ಚೆಯ ವಿಯಷವಾಗಿದೆ. ಒಂದು ಮತದ ಅಗತ್ಯವಿದ್ದ ಜೆಡಿಎಸ್ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ನೆರವಿನೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ವ್ಯಕ್ತಿಗೆ ಪಾಠ ಕಲಿಸಲು ಅಪರೇಷನ್ ಜೆಡಿಎಸ್ ಮಾಡಿತ್ತು.
ಹಿಂದೆ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷರಾಗಿದ್ದ ಜಗದೀಶ್ ಅವರ ಪಕ್ಷ ವಿರೋಧಿ ಹಾಗೂ ಜಾತಿ ಪ್ರೇಮಕ್ಕೆ ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ್ ನೇತೃತ್ವದ ತಂಡ ವ್ಯವಸ್ಥಿತವಾಗಿ ಚುನಾವಣೆ ಗೆದ್ದು ತಕ್ಕ ಪಾಠ ಕಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.