ಶಿವಮೊಗ್ಗ,ಫೆ.24: ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಗ್ಯಾಸ್ ಸಿಲಿಂಡರ್- ಪೆಟ್ರೋಲ್-ಡಿಸೇಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ರೈಲ್ವೆ ಸ್ಟೇಷನ್ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿದ್ದ ಬ್ಯಾರಿಕೇಡ್‍ಗಳನ್ನು ಮುರಿದು ಒಳಹೋಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜನ ಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತಲ್ಲಣಗೊಂಡಿದ್ದಾರೆ. ಪ್ರತಿ ದಿನ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಗೃಹಬಳಕೆ ಸಿಲಿಂಡರ್ ಬೆಲೆ ಧಿಡೀರನೆ ಏರಿದೆ. ಗಾಯದ ಮೇಲೆ ಬರೆ ಎಂಬಂತೆ ಸಬ್ಸಿಡಿ ಕೂಡ ಇಲ್ಲ. ಎಣ್ಣೆ ಕಾಳುಗಳು, ತರಕಾರಿ ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಬಡವರ ಬದುಕು ಹೈರಾಣಾಗಿದ್ದು, ಒಪ್ಪೊತ್ತಿನ ಊಟಕ್ಕೂ ಕಷ್ಟವಾಗಿದೆ. ಇವರ ನಿಟ್ಟುಸಿರು ಸರ್ಕಾರಕ್ಕೆ ತಟ್ಟದೆ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದರ ಜೊತೆಗೆ ಹಣಕಾಸು ಬಿಕ್ಕಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕಾಡುತ್ತಿದೆ. ಹಣದುಬ್ಬರ ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ ಲೀಟರ್‍ಗೆ 100 ರೂ. ಮುಟ್ಟುತ್ತಿದೆ. ಇದರಿಂದ ಸರಕು ಸಾಗಾಣೆ ದರಗಳು ಕೂಡ ಹೆಚ್ಚಾಗಿವೆ. ಬಡ ಮತ್ತು ಮಧ್ಯಮ ವರ್ಗದ ಜನರು ಬದುಕುವುದು ಹೇಗೆ ಇಡೀ ಅರ್ಥ ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಹೀಗಾದರೆ ಜನರು ಹೇಗೆ ಸುಮ್ಮನಿರುತ್ತಾರೆ. ಬೆಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದ ಸರ್ಕಾರ ಬೇರೆ ಬೇರೆ ವಿಷಯಗಳತ್ತ ಸಾಮಾನ್ಯ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ತಕ್ಷಣವೇ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಬಡವರು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಹಣದುಬ್ಬರ ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್, ಪ್ರಮುಖರಾದ ಹೆಚ್.ಸಿ.ಯೋಗೀಶ್, ರೇಖಾರಂಗನಾಥ್, ಯಮುನಾರಂಗೇಗೌಡ, ರಮೇಶ್ ಹೆಗ್ಡೆ, ಚಂದ್ರಭೂಪಾಲ್, ಸುವರ್ಣನಾಗರಾಜ್, ವಿಜಯಲಕ್ಷ್ಮೀ ಪಾಟೀಲ್, ಕೆ.ರಂಗನಾಥ್, ಶ್ರೀನಿವಾಸ್ ಕರಿಯಣ್ಣ, ಎಸ್.ಪಿ.ಶೇಷಾದ್ರಿ, ಪ್ರವೀಣ್ ಕುಮಾರ್, ಚಂದ್ರಕಲಾ, ವಿಜಯ್‍ಕುಮಾರ್ ಕಾಶಿವಿಶ್ವನಾಥ್, ನಾಗರಾಜ್ ಸೇರಿದಂತೆ ಹಲವರಿದ್ದರು.