Site icon TUNGATARANGA

ಗ್ರಾಮಸಭೆ ಆಯ್ಕೆ ಮಾಡಿದವರಿಗಷ್ಟೆ ವಸತಿ ಭಾಗ್ಯ: ಸಿಇಓ ವೈಶಾಲಿ

ಶಿವಮೊಗ್ಗ, ಫೆ.23:
ವಸತಿ ರಹಿತರ ಬಗ್ಗೆ ಗ್ರಾಮ ಸಭೆಯಲ್ಲಿ ಮಂಡಿಸಿ ಆಯ್ಕೆಯಾಗದ ಫಲಾನುಭವಿಗಳ ಪಟ್ಟಿಯನ್ನು ಹಿಂದಿರುಗಿಸಿ ಸರ್ಕಾರದ ನಿಯಮಾನುಸಾರ ಪರಿಶಿಷ್ಟರು-12, ಇತರೆ-5, ಅಲ್ಪಸಂಖ್ಯಾತ -3 ಫಲಾನುಭವಿಗಳು ಆಯ್ಕೆ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹ ಪಟ್ಟಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಸ್ಪಷ್ಟಪಡಿಸಿದರು.


ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 20ಜನ ವಸತಿ ರಹಿತರನ್ನು ಸರ್ಕಾರದ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆ ಮೂಲಕ ಆಯ್ಕೆ ಮಾಡಿ ಕಳಿಸುವ ಬದಲಾಗಿ, ಆಯಾ ಕ್ಷೇತ್ರದ ಶಾಸಕರೆ ಆಯ್ಕೆ ಮಾಡಿ ಪಟ್ಟಿ ಕಳಿಸಲು ಸರ್ಕಾರ ಹೊರಡಿಸಿರುವ ಆದೇಶ ತರವಲ್ಲ. ಈ ಆದೇಶವನ್ನು ಹಿಂಪಡೆದು ಗ್ರಾಮಸಭೆಯಲ್ಲಿಯೇ ಆಯ್ಕೆಗೊಂಡ ಫಲಾನುಭವಿಗಳಿಗೆ ವಸತಿ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಜಿ.ಪಂ.ಅಧ್ಯಕ್ಷರಿಗೆ ಮನವಿ ಮಾಡಿದ ಸಂದರ್ಭಗಳಲ್ಲಿ ಸಿಇಓ ಈ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್‌ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪ್ರಮುಖ ಚರ್ಚಿತ ವಿಷಯವಾಗಿತ್ತು. ಈ ವಿಷಯಕ್ಕೆ ಜಿ.ಪಂ.ಸದಸ್ಯ ಕಲಗೋಡು ರತ್ನಾಕರ್, ಶಾಸಕ ಆರ್.ಪ್ರಸನ್ನಕುಮಾರ್ ಅವರು ದನಿಗೂಡಿಸಿದ್ದರು.


ಈ ಸಂದರ್ಭದಲ್ಲಿ ಸಿಇಓ ವೈಶಾಲಿ ಅವರು ಮಾತನಾಡಿ,
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ರಹಿತ 2306 ನೂತನ ಮನೆಗಳನ್ನು ಗುರುತಿಸಲಾಗಿದೆ. ಅಂತಹ ಮನೆಗಳು ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದರೆ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಡಲಾಗುವುದು. ಅದಕ್ಕಾಗಿ ಸರ್ಕಾರ 8.19ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.
ಕಳೆದ ಕೆಲವು ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿದ್ದ ಸುಮಾರು 15560 ಫಲಾನುಭವಿಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಅಂತಹ ವಸತಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಅವಕಾಶ ನೀಡಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರು ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಅರಣ್ಯ ಇಲಾಖೆಯು ಜಿಲ್ಲೆಯ ವಿವಿದೆಡೆಗಳಲ್ಲಿ ಪರಿಸರಕ್ಕೆ ಹಾನಿಕರವಾಗಿರುವ ಅಕೇಶಿಯ, ನೀಲಗಿರಿ ನೆಡುತೋಪುಗಳಿಂದಾಗಿ ಅಂತರ್ಜಲ ಕುಸಿತ, ಪ್ರಾಣಿಪಕ್ಷಿ ಸಂಕುಲಗಳ ನಾಶ, ವನ್ಯಜೀವಿ ಜೀವ ವೈವಿದ್ಯತೆಗೆ ಧಕ್ಕೆ ಆಗುತ್ತಿದೆ. ಈ ವಿಷಯದ ಕುರಿತು ಪರಿಸರ ವಾದಿಗಳು ತೀವ್ರ ತರಹದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಪಶ್ಚಿಮಘಟ್ಟ ಉಳಿಸುವ ನಿಟ್ಟಿನಲ್ಲಿ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ನಿರ್ಣಯವನ್ನು ಸಲ್ಲಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಮಾತನಾಡಿ, ಈ ವಿಷಯದ ಕುರಿತು ವಿಸ್ತ್ರತವಾಗಿ ಚರ್ಚಿಸಲು ವಿಶೇಷ ಸಭೆಯನ್ನು ಏರ್ಪಡಿಸಲಾಗುವುದೆಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿ.ಪಂ.ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version