ಶಿವಮೊಗ್ಗ: ಲೋಕಾಯುಕ್ತ ವರದಿಯಲ್ಲಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಅವ್ಯವಹಾರ ಸಾಬೀತಾಗಿದೆ. ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್ ಆಗ್ರಹಿಸಿದರು.
ನಿವೇಶನ ಹಂಚಿಕೆಯಲ್ಲಿ ಅಕ್ರಮ, ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. 498 ನಿವೇಶನಗಳು ಮಾತ್ರ ಸಕ್ರಮ. ಸಕ್ರಮದಲ್ಲೂ ಸಾಕಷ್ಟು ಲೋಪಗಳಿವೆ. ಸರ್ಕಾರ ಇಡೀ ಹಂಚಿಕೆಯನ್ನೇ ಪುನರ್ ಪರಿಶೀಲಿಸಬೇಕು. ಮರು ಹಂಚಿಕೆ ಮಾಡಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
1,802 ನಿವೇಶನಗಳಲ್ಲಿ 1,305 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಸುಮಾರು 807 ನಿವೇಶನಗಳು ಅಕ್ರಮ ಎಂದು ಲೋಕಾಯುಕ್ತ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಮಿತಿ ನಿರಂತರ ಹೋರಾಟದ ಫಲವಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ತನಿಖೆ ನಡೆಸಿದ ಲೋಕಾಯುಕ್ತರು ಅಕ್ರಮ ಸಾಬೀತು ಮಾಡಿದ್ದಾರೆ ಎಂದರು.
ಪ್ರಕರಣದಲ್ಲಿ ಭಾಗಿಯಾಗಿದ್ದ ಅಂದಿನ ಅಧ್ಯಕ್ಷರಾದ ಜ್ಞಾನೇಶ್ವರ್ ಅವರಿಗೆ 4 ವರ್ಷ, ಎಸ್. ದತ್ತಾತ್ರಿ ಅವರಿಗೆ 2 ವರ್ಷ ಸರ್ಕಾರದ ಯಾವುದೇ ಅಧಿಕಾರ ನೀಡುವ ಹಾಗಿಲ್ಲ ಎಂದು ಶಿಫಾರಸು ಮಾಡಲಾಗಿದೆ. ಈಗ ಅವರು ಅಧಿಕಾರದಲ್ಲಿ ಇದ್ದಾರೆ. ಅಧಿಕಾರ ಹಿಂಪಡೆಯಬೇಕು. ದಂಡ ಸೇರಿದಂತೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸಕ್ರಮ ಎಂದು ತಿಳಿಸಿರುವ 498 ನಿವೇಶನಗಳಲ್ಲೂ ಕೆಲವು ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದಾರೆ. ನಿವೃತ್ತ ನ್ಯಾಯಾಧೀಶ ರವೀಂಧ್ರನಾಥ್ ಅವರು ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಉಲ್ಲೇಖವಿದೆ. ಬಡಾವಣೆಯ ಅಭಿವೃದ್ಧಿ ಸಮಯದಲ್ಲಿ ₹ 24,14,120 ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಹಾಗಾಗಿ, ಪ್ರಾಧಿಕಾರದ ಎಂಜಿನಿಯರ್‌ಗಳು, ಆಯುಕ್ತರು ಹಾಗೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.