Site icon TUNGATARANGA

ಮುಖ್ಯಮಂತ್ರಿಗಳೇ, ಆದೇಶ ಪಾಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಹೇಳಿ!

ಶಿವಮೊಗ್ಗ,ಫೆ.17:
ಮುಖ್ಯಮಂತ್ರಿಗಳೇ ಇತ್ತ ಗಮನಿಸಿ. ಹಿಂದೊಮ್ಮೆ ಇತಿಹಾಸದಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳೇ ಒಂದು ತಿಂಗಳು ಜೈಲು ವಾಸದ ಶಿಕ್ಷೆಗೆ ಗುರಿಯಾದ ಘಟನೆ ಮತ್ತೆ ಇದೇ ರಾಜ್ಯದ ಪೊಲೀಸ್ ಮುಖ್ಯ ಅಧಿಕಾರಿಗಳಿಗೆ ಸುತ್ತಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಬೇಡಿ.


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ 1982 ನೇ ಸಾಲಿನಲ್ಲಿ ಭರ್ತಿಯಾದ ಪುರುಷ ಪೊಲೀಸ್ ನೌಕರರಿಗೆ ಜೇಷ್ಠತೆ ಆಧಾರದಲ್ಲಿ ಅವರ ಹುದ್ದೆಯನ್ನು ನಿರ್ಧರಿಸಲು ರಾಜ್ಯ ಸರ್ಕಾರ, ಗೃಹ ಸಚಿವರು ಹಾಗೂ ಕೆ.ಎ.ಟಿ. ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ ಆಡಳಿತ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳು ಮುಂದಾಗದಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನಿಸುವ ಅಗತ್ಯವಿದೆ.
ಪೋಲಿಸ್ ಇಲಾಖೆಯಲ್ಲಿ ಜೇಷ್ಟತೆ ಆಧಾರದ ಮರುನೇಮಕಾತಿಗೆ ನ್ಯಾಯಾಲಯ ಸೂಚನೆ ನೀಡಿದ್ದರೂ, ಮುಖ್ಯಮಂತ್ರಿಗಳಾದ ತಾವುಗಳು ಖಡಕ್ ಆಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರೂ ಬಡ್ತಿ ಪರಿಶೀಲನೆ, ಕ್ರಮಕ್ಕೆ ಮುಂದಾಗದಿರುವ ಅಧಿಕಾರಿಗಳ ಹುನ್ನಾರ ಗೊತ್ತಾಗುತ್ತಿಲ್ಲ ಎಂಬ ಆರೋಪ ಇದೇ ಇಲಾಖೆ ಮೂಲಗಳಿಂದ ಕೇಳಿ ಬರುತ್ತಿದೆ.

ಅಂದಿನಿಂದಲೂ ಪುರುಷ ಪೊಲೀಸ್ ಸಿಬ್ಬಂದಿಗಳನ್ನು ಕಡೆಗಣಿಸುತ್ತಿರುವುದು ಗಂಭೀರ ಹಾಗೂ ಗಮನೀಯ ವಿಷಯವಾಗಿದೆ. 1982ರ ಸಾಲಿನಿಂದ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಪುರುಷ ಉದ್ಯೋಗಿಗಳಿಗಿಂತ ಮೊದಲೇ 1997 ರಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ..? ಅದರ ರಗಳೆಗೆ ನ್ಯಾಯಾಲದಲ್ಲೂ ತೀರ್ಪು ನೀಡಿ ಸೂಚಿಸಿದ್ದರೂ ಕ್ರಮ ಕೈಗೊಳ್ಳದಿರುವುದು ನ್ಯಾಯಾಂಗ ನಿಂಧನೆಯಲ್ಲವೇ…?


ಇಲ್ಲಿ ಕಿರಿಯ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಬಡ್ತಿ ನೀಡಿದ ಜೊತೆಗೆ ಪುರುಷ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಯಥಾವತ್ತಾದ ಹುದ್ದೆಯಲ್ಲೇ ಮುಂದುವರೆಯುವಂತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿಯೆಂದು ರಾಜ್ಯದ ಪುರುಷ ಪೊಲೀಸ್ ನೌಕರರು ಒತ್ತಾಯಿಸುತ್ತಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲಿ ಗೆದ್ದರೂ ಆದೇಶ ಪಾಲನೆ ಅಧಿಕಾರಿಗಳಿಂದ ಆಗದಿರುವುದು ದುರಂತವಲ್ಲವೇ?
ಹಿಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ನಾಗೇಶ್ ಉಚ್ಚಿಲ್ ಎಂಬುವವರು ಕೆಎಟಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ನ್ಯಾಯಾಲಯವು 2014ರಂದು ಪುರುಷ ಹಾಗೂ ಮಹಿಳೆಯರ ಪುನರ್ ಪರಿಶೀಲನೆ ನಂತರ ಜೇಷ್ಠತೆಯನ್ನು ನಿಗದಿಪಡಿಸಲು ಆದೇಶಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.


ನಂತರ ತುಮಕೂರಿನ ನರಸಿಂಹಯ್ಯ ಅವರು ಇದೇ ನ್ಯಾಯಾಲಯಕ್ಕೆ ಮೊರೆ ಹೋಗಿ ವಿಚಾರಣೆ ನಡೆಸಿದಾಗ ಹಳೆಯ ತೀರ್ಪಿನಂತೆ ಪುನರ್ ಪರಿಶೀಲಿಸಲು 2018ರಂದು ಆದೇಶ ಬಂದಿರುತ್ತದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಕಾನೂನು ಸಲಹೆ ಕೋರಿದ್ದು ಅರ್ಜಿಯನ್ನು ಪರಿಶೀಲಿಸಿದ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ವಿ. ಸುಶೀಲ್ ಅವರು ಜೇಷ್ಠ ತೆಯ ಪುನರ್ ನಿಗದಿಪಡಿಸಲು ನಿರ್ದೇಶನ ನೀಡಿದ್ದರು. ಆದರೆ ಅಂದಿನ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಅವರು ರಾಜ್ಯ ಸರ್ಕಾರದ ಆದೇಶಕ್ಕೆ ಎಳ್ಳುನೀರು ಬಿಟ್ಟಿದ್ದರು.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಜುಲೈ ತಿಂಗಳಿನಲ್ಲಿ ಗುಲ್ಬರ್ಗದ ನಾಗಭೂಷಣ್ ಅವರು ಮತ್ತೆ ಕೆಎಟಿ ಮೊರೆಹೋಗಿದ್ದು ಆಗಲೂ ಸಹ ಜೇಷ್ಠತೆ ಪುನರ್ ನಿಗದಿಪಡಿಸಲು ಆದೇಶಿಸಲಾಗಿತ್ತು. ಕಳೆದ 2020ರಡಿಸೆಂಬರ್ 11ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ ಅರ್ಜಿ ಪರಿಶೀಲಿಸಲು ಕೋರಿದಾಗ ಅಧೀನ ಕಾರ್ಯದರ್ಶಿ ಶ್ಯಾಮ್ ಹೊಳ್ಳ ಅವರು ಮೇಲ್ಮನವಿ ಆಧಾರದಲ್ಲಿ ಪುನರ್ ಪರಿಶೀಲಿಸಿ ಪುರುಷರಿಗೂ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡುವ ಬಗ್ಗೆ ಪರಿಷ್ಕರಿಸುವಂತೆ ಸೂಚಿಸಿದ್ದರು.
ಸರ್ಕಾರ ಕಳೆದ 2 ತಿಂಗಳ ಹಿಂದೆಯೇ ಪೊಲೀಸ್ ನೌಕರರ ಜೇಷ್ಠತೆ ಪರಿಶೀಲನೆಗೆ ಸೂಚಿಸಿದ್ದರೂ ಸಹ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರೀಕ್ಷಕರು & ನಿರ್ದೇಶಕರು ಕ್ರಮ ಕೈಗೊಳ್ಳದಿರುವುದು ಪುರುಷ ಪೊಲೀಸ್ ಸಿಬ್ಬಂದಿಗಳ ತಲೆಕೆಡಿಸಿದೆ. ಈ ಸಂಬಂಧ ಪುರುಷ ಪೊಲೀಸ್ ಸಿಬ್ಬಂದಿಗಳು ರಾಜ್ಯದಲ್ಲೆಡೆ ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯಾಮರಣಕ್ಕೆ ಮನವಿ
ಈ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಲಕ್ಷ್ಮಣ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕಾಗಿ ವಿನಂತಿಸಿದ್ದಾರೆ. ಅವರು ಪೊಲೀಸ್ ಸಿಬ್ಬಂದಿಗಳ ಜೇಷ್ಠತೆ ಸರಿಯಾಗಿಲ್ಲದೇ ಇರುವ ಹಿನ್ನೆಲೆಯಲ್ಲಿ ಇಂತಹ ಮರಣಕ್ಕಾಗಿ ಕೋರಿರುವುದಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಇಂತಹ ಪ್ರಕರಣಗಳು ನಡೆಯುವ ಮುನ್ನ ಹಾಗೂ ಅವಘಡಗಳು ಸಂಭವಿಸುವ ಮುನ್ನ ತವರಿನಲ್ಲಿಯೇ ಇರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಸಂಬಂಧ ಕೂಡಲೇ ಸೂಕ್ತ ಪರಿಶೀಲನೆ ನಡೆಸಿ ಪೊಲೀಸ್ ಇಲಾಖೆಯ ನಿರ್ದೇಶಕರು & ಮಹಾನಿರೀಕ್ಷಕರಿಗೆ ಸೂಚನೆ ನೀಡುವ ಮೂಲಕ ಜೇಷ್ಠತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪುರುಷ ಪೊಲೀಸ್ ಸಿಬ್ಬಂದಿಗಳಿಗೂ ಸಹ ನ್ಯಾಯ ಒದಗಿಸಲು ಕೋರಿದ್ದಾರೆ. ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳನ್ನು ಯಡಿಯೂರಪ್ಪ ಗಮನಿಸುತ್ತಾರೆ ಎಂದು ಪೊಲೀಸ್ ಸಿಬ್ಬಂದಿಗಳು ನಂಬಿದ್ದಾರೆ.
ಅದು ಸಾದ್ಯವೇ…?
ಮುಖ್ಯಮಂತ್ರಗಳು ಗಂಭೀರವಾಗಿ ಗಮನಿಸುವ ಅಗತ್ಯವಿದೆ. ಮತ್ತರ ನ್ಯಾಯಾಲಯ ನಿಂಧನೆ ಆರೋಪದಡಿ ತೀರ್ಪು ಘೋಷಣೆ ಮಾಡುವ ಮುನ್ನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವ ಅಗತ್ಯವಿದೆಯಲ್ಲವೇ…?

Exit mobile version