Site icon TUNGATARANGA

ಹಳಿತಪ್ಪಿರುವ ರಾಜ್ಯ ಸರ್ಕಾರ: ಹೆಚ್.ಡಿ. ಕುಮಾರಸ್ವಾಮಿ

ಮೀಸಲಾತಿಗೆ ಮಂತ್ರಿಗಳೇ ಹೋರಾಟಕ್ಕಿಳಿದಿರುವುದು ಅವರ ದೌರ್ಬಲ್ಯ..!

ಸದನದಲ್ಲಿ ಒಂದು ವರ್ಷದ ಬಜೆಟನ್ನು ಎಲ್ಲಾ ಶಾಸಕರು ಒಪ್ಪಿಕೊಳ್ಳುವುದು ನಿಜ. ಆದರೆ ನಂತರದ ದಿನಗಳಲ್ಲಿ ತಮಗೆ ಇಷ್ಟ ಬಂದವರಿಗೆ ಸಚಿವ ಸಂಪುಟದ ಮೂಲಕ ಅನುದಾನ ಹಂಚಿಕೆ ಮಾಡುವ ಕಾರ್ಯ ಸದನದ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ಸದನಕ್ಕೆ ಗೌರವ ಬರಬೇಕೆಂದರೆ ಎಲ್ಲಾ ಶಾಸಕರು ಒಪ್ಪಿಕೊಂಡಂತೆ ಸರ್ಕಾರದ ಹಣ ಎಲ್ಲೆಡೆ ಎಲ್ಲಾ ಯೋಜನೆಗಳಿಗೆ ಬಳಕೆಯಾಗಬೇಕು. ಆಗ ಸದನಕ್ಕೆ ಗೌರವ ಬರುತ್ತದೆ ಎಂದು ಪರೋಕ್ಷವಾಗಿ ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ಇಡೀ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಂಡವವಾಡುತ್ತಿದೆ. ಶಿವಮೊಗ್ಗ ಬಳಿಯ ಹುಣಸೋಡಿನಲ್ಲಿ ನಡೆದ ಸ್ಫೋಟ ಪ್ರಕರಣ ದೊಡ್ಡದ್ದಾಗಿದ್ದರಿಂದ ಹಾಗೂ ಶಿವಮೊಗ್ಗ ಮಾಧ್ಯಮಗಳ ಕಾರ್ಯದಿಂದ ಬಹುದೊಡ್ಡ ಪ್ರಚಾರ ಪಡೆಯಿತು. ಈಗಲೂ ನಿತ್ಯ ಅಕ್ರಮ ಗಣಿಗಾರಿಕೆ ಮೂಲಕ ಸಾವು ಸಂಭವಿಸುತ್ತಿವೆ. ಅವು ಸದ್ದು ಮಾಡದೇ ಮುಚ್ಚಿಕೊಳ್ಳುತ್ತಿವೆ. ಶಿವಮೊಗ್ಗ ಸ್ಫೋಟ ಪ್ರಕರಣ ಹಾಗೂ ಅಲ್ಲಿನ ಗಣಿಗಾರಿಕೆಗೆ ಸಮಗ್ರ ತನಿಖೆಯ ಅತ್ಯಗತ್ಯವಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಅಕ್ರಮ ಚಟುವಟಿಕೆಗಳಿಗೆ ರಾಜ್ಯಾದ್ಯಂತ ಕಡಿವಾಣ ಹಾಕಿದ್ದೆ.

ಸದ್ಯದಲ್ಲೇ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇಮಕ
ಕಳೆದ ಕೊರೊನಾ ಅವಧಿಯಿಂದ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾನು ಒಂದಿಷ್ಟು ನಿರ್ಲಿಪ್ತನಾಗಿದ್ದು ನಿಜ. ಈಗ ರಾಜ್ಯಾಧ್ಯಂತ ಪಕ್ಷದ ಸಂಘಟನೆಗೆ ಕ್ರಮಕೈಗೊಳ್ಳಲಾಗುವುದು. ಹಿಂದಿದ್ದ ಎಲ್ಲಾ ಜಿಲ್ಲಾ ಸಮಿತಿಗಳನ್ನು ವಜಾ ಮಾಡಲಾಗಿದ್ದು, ನೂತನ ಸಮಿತಿ ರಚನೆಯವರೆಗೆ ಅಡಾಕ್ ಸಮಿತಿ ಕರ್ತವ್ಯ ನಿರ್ವಹಿಸಲಿದೆ. ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಏಳು ವೀಕ್ಷಕರ ತಂಡ ಪ್ರವಾಸ ಮಾಡುತ್ತಿದ್ದು, ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳ ನೇಮಕಕ್ಕೆ ಈ ತಿಂಗಳ ಅಂತ್ಯದೊಳಗೆ ವರದಿ ನೀಡಲಿದ್ದಾರೆ. ರಾಜ್ಯಾವ್ಯಾಪಿ ಎಲ್ಲಾ ಜಿಲ್ಲಾಧ್ಯಕ್ಷರುಗಳ ನೇಮಕಾತಿ ಸದ್ಯದಲ್ಲೇ ನಡೆಯಲಿದೆ.


ಶಿವಮೊಗ್ಗ, ಫೆ.೧೫:
ಜನರ ಪ್ರಸ್ತುತ ಸ್ಥಿತಿಗತಿ, ಪರಿಸ್ಥಿತಿನ್ನು ಅವಲೋಕಿಸಿದಾಗ ಕರ್ನಾಟಕ ರಾಜ್ಯ ಸರ್ಕಾರ ಹಳಿತಪ್ಪಿದೇಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದರು.


ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲಾ ಜಾತಿಗಳು ಹೋರಾಟಕ್ಕಿಳಿಯುವಂತೆ ಮಾಡಿರುವುದು ಎಲ್ಲೋ ಒಂದು ಕಡೆ ಸರ್ಕಾರದ ಲೋಪವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಕಳೆದ ಒಂದು ತಿಂಗಳು ಆಗದ ಆಹಾರ ಮತ್ತು ನಾಗರೀಕ ಸಚಿವ ಐದು ಎಕರೆ ಭೂಮಿ, ಫ್ರೀಜ್ಡ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ನೀಡಿ ಎಂದು ಹೇಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಅವರಿಗೆ ಸರಿಯಾದ ಜ್ಞಾನವಿದೇಯೇ ಎಂದು ಅನುಮಾನ ಮೂಡುತ್ತಿದೆ ಎಂದರು.


ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಬಿಜೆಪಿ ಪಕ್ಷದ ಸರ್ಕಾರವಲ್ಲ. ಯಡಿಯೂರಪ್ಪ ಕುಟುಂಬದ ಸರ್ಕಾರ ಎಂದು ಆ ಪಕ್ಷದ ಮಂತ್ರಿಗಳೇ ಹೇಳುತ್ತಿದ್ದಾರೆ. ಹಿಂದಿನ ನಮ್ಮ ಮೈತ್ರಿ ಸರ್ಕಾರ ಪತನವಾದ ನಂತರ ಈಗಿನ ಸರ್ಕಾರದ ಆಡಳಿತ ನಿಜಕ್ಕೂ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನೇ ಕಸಿದುಕೊಳ್ಳುತ್ತಿದೆ ಎಂದರು.
ಕಳೆದ ೨೦೧೮-೧೯, ೧೯-೨೦ರ ಸಾಲಿನ ಬಜೆಟ್‌ನಲ್ಲಿ ಯಾವುದೇ ಕೊರತೆಯಾಗಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಪ್ರಸ್ತುತ ೨೦-೨೧ರ ಸಾಲಿನ ಬಜೆಟ್‌ನಲ್ಲಿ ಸ್ವಲ್ಪ ಕೊರತೆಯಾಗಬಹುದು. ಅದರೂ ಆ ಅದಾಯದ ಹಣ ಎಲ್ಲಿ ಹೋಯಿತು. ಎಂಬುದು ಅರ್ಥವಾಗದ ಪ್ರಶ್ನೆಯಾಗಿ ಉಳಿದಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಶಿಕಾರಿಪುರ ತಾಲ್ಲೂಕು ನೀರಾವರಿ ವಿಷಯಕ್ಕೆ ೨೮೫ ಕೋಟಿ ಬಿಡುಗಡೆ ಮಾಡಿದ್ದೆ ಅದನ್ನು ಈಗ ಏಕಾಏಕಿ ಸಚಿವ ಸಂಪುಟ ರಚನೆಯಾಗುವ ಪೂರ್ವದಲ್ಲೇ ೧ಸಾವಿರ ಕೋಟಿ. ರೂಗೆ ಬದಲಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು.
ಮೀಸಲಾತಿ ವಿಚಾರದಲ್ಲಿ ಎಲ್ಲಾ ಜಾತಿ, ವರ್ಗಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ. ಆ ಜಾತಿಯ ಸಮೀಕ್ಷೆಯಾನುಸಾರ ಅಲ್ಲಿರುವ ಬಡವರ ಸ್ಥಿತಿ, ಗತಿಗಳ ಅವಲೋಕನ ನಡೆಸಿ ಮೀಸಲಾತಿಯ ಅಗತ್ಯತೆಯನ್ನು ಪರಿಗಣಿಸಬೇಕು. ಸರ್ಕಾರದ ಮಂತ್ರಿಗಳು ಶಾಸಕರೇ ಮೀಸಲಾತಿ ವಿಚಾರದಲ್ಲಿ ಬೀದಿಗಿಳಿದಿರುವುದು ಸರಿಯಲ್ಲ. ಅವರದೇ ಸರ್ಕಾರ ಇರುವಾಗ ಅವರೇ ಸರ್ಕಾರದ ಮುಂದೆ ಕುಳಿತು ಕೆಲಸ ಮಾಡಿಸಬಹುದಿತ್ತಲ್ಲವೇ ಎಂದು ಈಶ್ವರಪ್ಪ ವಿರುದ್ಧ ಹರಿಹಾಯ್ದರು.


ನಿಮ್ಮದೇ ಸರ್ಕಾರವಿದೆ. ನಿಮಗೆ ಸರ್ಕಾರದಿಂದ ಕೆಲಸ ಮಾಡಿಸುವ ಶಕ್ತಿ ಇಲ್ಲವೇ.? ಎಲ್ಲಾ ಜಾತಿಗಳಲ್ಲಿ ಬಡವರು, ನೊಂದವರು ಇದ್ದಾರೆ. ಅವರ ಅವಲೋಕನ ನಡೆಯಬೇಕು. ಮೀಸಲಾತಿ ವಿಚಾರದಲ್ಲಿ ನಡೆಯುವ ಪ್ರತಿಭಟನೆಗಳು ಇಡೀ ಮೀಸಲಾತಿ ವ್ಯವಸ್ಥೆಯನ್ನು ಗೊಂದಲಕ್ಕೆ ದೂಡಬಹುದು. ಸರಿಯಾದ ಹಾಗೂ ಅರ್ಥಗರ್ಭಿತವಾದ ನಿರ್ಧಾರ ಕೈಗೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಸುದ್ದಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಶ್ರೀಕಾಂತ್, ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ರುದ್ರೇಗೌಡ, ಪಾಲಾಕ್ಷಿ, ತ್ಯಾಗರಾಜ್ ಹಾಗೂ ಇತರರಿದ್ದರು.

Exit mobile version