Site icon TUNGATARANGA

ಹುಣಸೋಡು ಸ್ಪೋಟದ ತಪ್ಪಿತಸ್ಥರಿಗೆ ಮುಲಾಜಿಲ್ಲದೇ ಶಿಸ್ತುಕ್ರಮ: ಆಯನೂರು

ಶಿವಮೊಗ್ಗ,ಫೆ.13:
ಹುಣಸೋಡು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಅಚ್ಚರಿಯ ಫಲಿತಾಂಶದ ನಿರೀಕ್ಷೆಯಿದೆ. ತಪ್ಪಿತಸ್ಥರೆಲ್ಲರ ವಿರುದ್ದ ಶಿಸ್ತು ಕ್ರಮ ಜರುಗಲಿದೆ. ಅಲ್ಲಿಯವರೆಗೆ ನಮ್ಮ ಒತ್ತಡ ವಿರುತ್ತದೆ ಎಂದು ವಿಧಾನ ಪರಿಷತ್ ಶಾಸಕ, ಮಾಜಿ ಸಂಸದ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಪ್ರೆಸ್ ಟ್ರಸ್ಟ್ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹುಣಸೋಡು ಸ್ಪೋಟ ಪ್ರಕರಣ ಇಡೀ ರಾಜ್ಯಕ್ಕೆ ಒಂದು ಎಚ್ಚರಿಕೆಯ ಪಾಠವಾಗಿದೆ. ಸದನದಲ್ಲಿ ನಾನು ಈ ಬಗ್ಗೆ ವಿಸ್ತಾರವಾಗಿ ಚರ್ಚೆಮಾಡಿದ್ದೇನೆ. ಈ ಹಿನ್ನಲೆಯಲ್ಲಿ ತನಿಖೆ ಕೂಡ 2 ಹಂತದಲ್ಲಿ ಆರಂಭವಾಗಿದೆ. ಇದರ ನಂತರ ನ್ಯಾಯಾಂಗ ತನಿಖೆಯು ನಡೆಯಬಹುದು. ಒಟ್ಟಾರೆ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳಿಗೂ ಕೂಡ ಈ ಘಟನೆ ಬಿಸಿ ಮುಟ್ಟಿಸಿರುವುದಂತೂ ನಿಜ ಎಂದರು.

ಹಂಬಲದ ರಾಜಕಾರಣಿ:
ನಾನು ಹಂಬಲದ ರಾಜಕಾರಣಿ, ಬದಲಾವಣೆಯನ್ನು ಬಯಸುವವನು ಗಟ್ಟಿ ಧ್ವನಿಗಳ ಮೂಲಕವೇ ಸಮಸ್ಯೆಗಳ ಸುಧಾರಣೆ ಸಾಧ್ಯ ಎಂದುಕೊಂಡವನು. ಹಾಗಾಗಿಯೇ ಅನೇಕ ಬಾರಿ ಆಡಳಿತ ಪಕ್ಷದ ವಿರುದ್ಧವಾಗಿಯೇ ಮಾತನಾಡುವಾಗ ಮುಜುಗರಕ್ಕೆ ಒಳಗಾಗಿದ್ದೇನೆ. ಮಾಧ್ಯಮವು ಸೇರಿದಂತೆ ನನ್ನನ್ನು ನೋಡುವ ಬಗೆಯೇ ಬೇರೆಯಾಗಿದೆ. ಆಡಳಿತ ಪಕ್ಷದ ಒತ್ತಡದ ನಡುವೆಯೂ ನಾನು ಕಾರ್ಮಿಕರ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಇದಕ್ಕೆ ಸಂವಿಧಾನದ ಬಗ್ಗೆ ಇರುವ ಗೌರವವು ಕಾರಣವಾಗಿದೆ ಎಂದು ಆಯನೂರು ಮಂಜುನಾಥ್ ತಮ್ಮ ಅಂತರಂಗದ ಮಾತುಗಳನ್ನು ಹಂಚಿಕೊಂಡರು.
ನನ್ನ ಅಂತರಾಳದ ಮಾತುಗಳು ಕೇವಲ ಕಂಠದಿಂದ ಬರುವುದಿಲ್ಲ. ಅದು ಒಳಗಿನಿಂದ ಬರುತ್ತದೆ. ಹಾಗಾಗಿಯೇ ಅನೇಕರು ಇವರೇನು ರಾಜಕಾರಣಿಯೇ, ಹೋರಾಟಗಾರರೇ, ಬಂಡಾಯಗಾರರೇ, ಅನ್ವೇಷಕರೆ ಎಂಬ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳು ನನ್ನೊಳಗಿನಿಂದಲೂ ಹುಟ್ಟಿಕೊಳ್ಳುತ್ತವೆ. ಹೇಳಿ ಕೇಳಿ ಶಿವಮೊಗ್ಗ ಹೋರಾಟದ ಜಿಲ್ಲೆ. ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ವೈಚಾರಿಕ ಸಂಘರ್ಷ ಇದ್ದೇ ಇದೆ. ನಾನು ಕೂಡ ೧೯೭೪-೭೫ ರಿಂದ ಹೋರಾಟದಿಂದಲೇ ಬಂದವನು. ಜೈಲುವಾಸ ಕೂಡ ಅನುಭವಿಸಿದವನು. ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಜನ ಸಾಮಾನ್ಯರಿಗೆ ರಕ್ಷಣೆ ಸಿಗಬೇಕು ಎಂದು ಶಾಸಕನಾಗಿ, ಸಂಸದನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಯೋಚಿಸಿದವನು. ಹಾಗಾಗಿ ಹೋರಾಟದ ಜನಸ್ಪಂದನೆಯ ಗಟ್ಟಿ ಧ್ವನಿ ಎತ್ತುವ ಎಲ್ಲಾ ಬಾಣಗಳು ತಮ್ಮ ಬತ್ತಳಿಕೆಯಲ್ಲಿವೆ. ಹಾಗಾಗಿ ನಾನು ನಿಷ್ಠುರವಾದಿಯಾಗಿದ್ದೇನೆ ಮತ್ತು ಇದು ನನಗೆ ಇಷ್ಟವಾದವು ಆಗಿದೆ ಎಂದರು.


ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದಲೂ ಕೂಡ ಇದು ತನಿಖೆಯಾಗುತ್ತಿದೆ. ಪ್ರಮುಖವಾಗಿ ಸ್ಪೋಟಕಗಳು ಎಲ್ಲಿಂದ ಬಂದವು ಹೇಗೆ ಬಂದವು ಎಂಬುದು ಒಂದು ಯಕ್ಷ ಪ್ರಶ್ನೆಯೇ ಆಗಿದೆ. ಏನೇ ಆಗಲಿ ಒಂದು ತಾಂತ್ವಿಕ ಅಂತ್ಯ ಕಾಣುತ್ತದೆ ಎಂದು ಹೇಳಿದರು.
ಶಿವಮೊಗ್ಗ ತಾಲ್ಲೂಕಿನ ಈ ಭಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಅಧಿಕೃತ ಕಲ್ಲು ಕ್ರಶರ್‌ಗಳಿವೆ. ಆದರೆ, ಈ ಕ್ರಶರ್‌ಗಳಿಗೆ ಕಲ್ಲು ಪೂರೈಕೆ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಅಲ್ಲೇ ಉತ್ತರ ಸಿಗುತ್ತದೆ. ಕ್ರಶರ್‌ಗಳ ಸುತ್ತಮುತ್ತ ಇರುವ ಕ್ವಾರೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ನೂರಾರು ಅಡಿ ಆಳಕ್ಕೆ ಅವು ಇಳಿದುಕೊಂಡಿವೆ. ಈ ಕ್ವಾರೆಗಳನ್ನು ಸಿಡಿಸಲು ಸಿಗುವ ಸ್ಪೋಟಕ ವಸ್ತುಗಳ ಬಗ್ಗೆಯೇ ತನಿಖೆ ಹೆಚ್ಚಾಗಿ ನಡೆಯುತ್ತದೆ ಎಂದರು.
ಇಲ್ಲಿ ರಾಜಕಾರಣಿಗಳ ಬೆಂಬಲ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಯೇ ತನಿಖೆ ದಿಕ್ಕು ತಪ್ಪುತ್ತದೆ ಎಂಬುದನ್ನು ನಾನು ಹೇಳಲಾರೆ. ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ಒಟ್ಟಾರೆ ಹುಣಸೋಡು ಪ್ರಕರಣ ಅಕ್ರಮ ಕ್ವಾರೆಗಳ ಬಗ್ಗೆ ಬೆಳಕು ಚಲ್ಲಿದ್ದಂತೂ ನಿಜ ಎಂದರು.
ಕಲ್ಲು ಗಣಿಗಾರಿಕೆ ಕಾನೂನಿನ ಚೌಕಟ್ಟಿನಲ್ಲಿರಬೇಕು. ಇಲ್ಲದೇ ಹೋದರೆ ಅದನ್ನು ಯಾವುದೇ ಪಕ್ಷದವರು ಮಾಡಿದರು ಕೂಡ ತಪ್ಪು ತಪ್ಪೇ. ಇದಕ್ಕೆ ಅಧಿಕಾರಿಗಳು ಕೂಡ ಜವಾಬ್ದಾರರೇ ಆಗಿರುತ್ತಾರೆ. ಇದೊಂದು ವಿಧ್ವಂಸಕ ಕೃತ್ಯವೇ ಸರಿ. ಈ ಬಗ್ಗೆ ಈಗಾಗಲೇ ನಾನು ಧ್ವನಿ ಎತ್ತಿದ್ದೇನೆ ಮತ್ತು ಎತ್ತುತ್ತಲೇ ಇರುತ್ತೇನೆ ಎಂದರು.
ಅಕ್ರಮ ಗಣಿಗಾರಿಕೆಗೆ ಬಿಜೆಪಿ ರಾಜಕಾರಣಿಗಳೇ ಇದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಮೌನವಾದರಷ್ಟೆ. ಇದರ ಹಿಂದೆ ಹೌದು ಎಂಬ ಮನೋಭಾವ ಅವರಲ್ಲಿಯೂ ಇದ್ದಂತೆ ಕಂಡಿತು. ಹೇಳಲಾಗದ ಸ್ಥಿತಿ ಅವರದಾಗಿತ್ತಾ… ಎಂದು ಪ್ರಶ್ನೆ ಮೂಡಿಸಿತು.
ಶಿವಮೊಗ್ಗದಲ್ಲಿ ಹಲವು ಅಕ್ರಮ ಚಟುವಟಿಕೆಗಳಿವೆ ಎಂಬುದು ನಿಜ. ನಿರಂತರ ಜ್ಯೋತಿ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎನ್ನುವುದು ನಿಜ. ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕಳಪೆಯಾಗಿದೆ ಎನ್ನುವುದು ನಿಜ ಮತ್ತು ಕಾರ್ಮಿಕರ,ಶಿಕ್ಷಕರ, ಜನಸಾಮಾನ್ಯರ ಸಮಸ್ಯೆಗಳಿವೆ ಎನ್ನುವುದು ಕೂಡ ಸತ್ಯವೇ ಆಗಿದೆ. ಎಲ್ಲಾ ವಿಷಯಗಳ ಬಗ್ಗೆ ನಾನಂತು ಧ್ವನಿ ಎತ್ತುತ್ತಲೆ ಇರುತ್ತೇನೆ ಎಂದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ನಾಗರಾಜ್ ನೇರಿಗೆ ಇದ್ದರು. ಗಿರೀಶ್ ಉಮ್ರಾಯ್ ಸ್ವಾಗತಿಸಿದರು.

ಈಶ್ವರಪ್ಪರ ಬಗ್ಗೆ ಹೇಳಿದ್ದಲ್ಲ…!
ಸರ್ಕಾರದ ಭಾಗವಾಗಿರುವ ಸಚಿವರು ಚಳವಳಿಗಳ ಹುಟ್ಟು ಹಾಕಬಾರದು. ಚಳವಳಿಗೆ ಉತ್ತರ ಹೇಳಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುವುದು ಸಂವಿಧಾನದ ಮಾತಾಗಿದೆ. ಈ ಮಾತನ್ನೇ ತಾವು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಸಮಯದಲ್ಲಿ ಹೇಳಿದ್ದು, ಆದರೆ ಅದು ಹೇಗೊ ಏನೋ ಸಚಿವ ಈಶ್ವರಪ್ಪನವರು ಜಾತಿಗಳ ಕಟ್ಟಿಕೊಂಡು ಚಳವಳಿ ನಡೆಸುತ್ತಿದ್ದಾರೆ. ಅದಕ್ಕೆ ಆಯನೂರು ಮಂಜುನಾಥ್ ಈ ರೀತಿ ಹೇಳಿದ್ದಾರೆ ಎಂಬ ಉತ್ತರ ನೋಡಿ ನಿಜಕ್ಕೂ ಕಷ್ಟವಾಯಿತು. ಆದರೆ ತಾವು ಈಶ್ವರಪ್ಪರನ್ನು ಕುರಿತು ಹೇಳಿದ ಮಾತು ಇದಲ್ಲ. ಸಾರ್ವತ್ರಿಕವಾಗಿ ವಂದನಾ ನಿರ್ಣಯದ ಕುರಿತು ಮಾತನಾಡಿದ್ದು ಎಂದರು.

Exit mobile version