Site icon TUNGATARANGA

ಅಡಿಕೆ ಸಂಶೋಧನೆಗೆ ತಜ್ಞರ ಸಮಿತಿ ಅಸ್ತಿತ್ವಕ್ಕೆ : ಆರಗ ಜ್ಞಾನೇಂದ್ರ


ಶಿವಮೊಗ್ಗ: ಅಡಿಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಪ್ರಯತ್ನಗಳು ಮುಂದುವರೆದಿದ್ದು, ಇದರೊಂದಿಗೆ ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಜ್ಞರ ಜೊತೆಗೆ ಕೃಷಿ ವಿವಿ.ಗಳ ಕುಲಪತಿಗಳು, ಪ್ರಗತಿಪರ ತೋಟಗಾರಿಕೆ ಬೆಳಗಾರರು ಸೇರಿದಂತೆ ಐದು ಜನರ ಸಮಿತಿಯೊಂದನ್ನು ರಚಿಸಿ ಸಭೆಯು ನಿರ್ಣಯ ಕೈಗೊಂಡಿದೆ ಎಂದು ರಾಜ್ಯ ಅಡಿಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಹೇಳಿದರು.
ಅವರು ಇಂದು ಮಲೆನಾಡು ಪ್ರದೇಶಾಭಿವೃಧ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಅಡಿಕೆ ಕಾರ್ಯಪಡೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವೈಜ್ಞಾನಿಕ ಸಂಶೋಧನೆಗಳನ್ನಾಧರಿಸಿ ಅಡಿಕೆ ಕ್ಯಾನ್ಸರ್ ನಿವಾರಕ ಅಂಶಗಳನ್ನು ಹೊಂದಿದೆ ಎಂಬುದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಬಲವಾಗಿ ವಿಷಯ ಮಂಡಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವಿದೆ ಎಂದವರು ನುಡಿದರು.
ಅಡಿಕೆ ಬೆಳೆಗಾರರ ಅತಂಕವನ್ನು ದೂರ ಮಾಡಲು ಕಾರ್ಯಪಡೆ ಸಕ್ರಿಯವಾಗಿದೆ. ಪ್ರಗತಿಪರ ರೈತರು, ವಿವಿಧ ತೋಟಗಾರಿಕೆ ಬೆಳೆಗಾರರ ಸಂಘಗಳೂ ಕೂಡ ಸೇರಿವೆ. ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಹಾಗೂ ಇಲ್ಲಿನ ಅಡಿಕೆಗೆ ಉತ್ಪನ್ನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ದರ ನಿಗಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದ ಅವರು, ಎಂ.ಎಸ್.ಪಿ. ಯೋಜನೆಯನ್ನು ಅಡಿಕೆಗೂ ವಿಸ್ತರಿಸಬೇಕು. ಇದರಿಂದಾಗಿ ವಿದೇಶದಿಂದ ಆಮದಾಗುವ ಅಡಿಕೆ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ ಎಂದವರು ನುಡಿದರು.
ಪ್ರಾದೇಶಿಕವಾಗಿ ಅಡಿಕೆಯ ಮಾದರಿಯನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಅದರ ವರದಿ ಬರುವವರೆಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣದ ತೀರ್ಪನ್ನು ಕಾಯ್ದಿರಿಸಬೇಕು. ಅಲ್ಲದೇ ಅದರ ವಿಸ್ತೃತ ವಿಚಾರಣೆಗಾಗಿ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಸದರಿ ಟಾಸ್ಕ್‌ಫೋರ್ಸ್‌ನ ಚಟುವಟಿಕೆಗಳಿಗಾಗಿ ಮುಂದಿನ ಬಜಟ್‌ನಲ್ಲಿ 10ಕೋಟಿ ರೂ.ಗಳನ್ನು ಕಾಯ್ದಿರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ 3.50ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದವರು ನುಡಿದರು.
ಅಡಿಕೆ ಕಾರ್ಯಪಡೆಯು ಕೃಷಿ ಮತ್ತು ತೋಟಗಾರಿಕೆ ವಿವಿಗಳ ಸಹಯೋಗದಲ್ಲಿ ನಡೆಯುವ ಕೌಶಲ್ಯಾಧಾರಿತ ತರಬೇತಿಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಅಡಿಕೆಯ ಪರ್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಅನೇಕರು ಸಕ್ರಿಯರಾಗಿದ್ದಾರೆ. ವಾಣಿಜ್ಯ ಕ್ಷೇತ್ರದಲ್ಲಿ ಬೇರೆ-ಬೇರೆ ವಿಧಾನಗಳಲ್ಲಿ ಅಡಿಕೆ ಪರಿಚಯಿಸುವುದನ್ನು ಕಾರ್ಯಪಡೆಯು ಉತ್ತೇಜಿಸಲಿದೆ. ಸಿರ್ಸಿಯ ಗುರುಮೂರ್ತಿಯವರು ಅಡಿಕೆಯ ಪರ್ಯಾಯ ಉತ್ಪನ್ನಗಳನ್ನು ಹಾಗೂ ಬಳಸಬಹುದಾದ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಕೈಗೊಳ್ಳುವ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಅಡಿಕೆಯನ್ನು ಬಳಸಲು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅಡಿಕೆಯ ಪರ್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನ ನಿರಂತರವಾಗಿರಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಜಿಲ್ಲೆಯ ಅನಾನಸ್ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಅಡಿಕೆಯನ್ನು ಸೇರಿಸುವಂತೆ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಲಾಲ್‌ಬಾಗ್‌ನ ಉಪನಿರ್ದೇಶಕ ಪ್ರಸಾದ್ ಸೇರಿದಂತೆ ಅಡಿಕೆ ಕಾರ್ಯಪಡೆಯ ಸದಸ್ಯರುಗಳು ಉಪಸ್ಥಿತರಿದ್ದರು.

ಸಭೆಯ ಚರ್ಚಾಂಶಗಳು :

ಅಡಿಕೆ ಸಿಪ್ಪೆಯನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ತ್ಯಾಜ್ಯ ಹೆಚ್ಚಳವಾಗಿ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಅದರಿಂದ ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. _ಕೆ.ಎಸ್.ಗುರುಮೂರ್ತಿ, ಅಧ್ಯಕ್ಷರು, ಮ.ಪ್ರ.ಅ.ಪ್ರಾಧಿಕಾರ.

ಸುಮಾರು ೯೩ರೀತಿಯ ಅಡಿಕೆಯ ಮಾದರಿಯನ್ನು ಸಂಗ್ರಹಿಸಲಾಗಿದೆ. ಅಧ್ಯಯನ ದೃಷ್ಟಿಯಿಂದ ಅದನ್ನು ಬಳಸಿಕೊಳ್ಳಬಹುದಾಗಿದೆ.
ಅಡಿಕೆಯ ಸಿಪ್ಪೆಯನ್ನು ಅಲ್ಪಾವಧಿಯಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ಸಂಶೋಧನೆ ಪ್ರಗತಿಯಲ್ಲಿದೆ.
ಮಂಜುನಾಥ್ ನಾಕ್, ಕುಲಪತಿಗಳು, ಕೃ.ಮತ್ತು ತೋ.ವಿವಿ. ಶಿವಮೊಗ್ಗ.

ತಾಳೆಬೆಳೆ ಸಂಸ್ಕರಣೆಗಾಗಿ ಭದ್ರಾವತಿಯಲ್ಲಿ ಕೈಗಾರಿಕೆಯನ್ನು ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. – ರಾಜ್ಯ ಅಡಿಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ.

ಅಮೇರಿಕಾ ಸಂಸ್ಥೆಯ ವರದಿಯೊಂದರಲ್ಲಿ ಹಾಗೂ ಚೀನಾ ದೇಶದ ಸಂಶೋಧನಾ ಕೃತಿಯಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ಗುರುತಿಸಲಾಗಿದೆ. ಸದಸ್ಯರು, ರಾಜ್ಯ ಅಡಿಕೆ ಕಾರ್ಯಪಡೆ.

Exit mobile version