ಶಿವಮೊಗ್ಗ, ಫೆ.೦೯:
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ದೇವಾಂಗ ಜನಾಂಗದ ಶೇ.೯೯ರಷ್ಟು ಜನತೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ರಂಗಗಳಲ್ಲಿ ಹಿಂದುಳಿದಿದ್ದು, ತಳಮಟ್ಟದ ಸಮುದಾಯವಾಗಿದೆ. ಈ ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟದ ಬಗ್ಗೆ ತಜ್ಞರಿಂದ ಸಮಗ್ರವಾಗಿ ಪರಿಶೀಲನೆ ನಡೆಸಿ ಆ ವರದಿಯನುಸಾರ ಮೀಸಲಾತಿಯನ್ನು ಘೋಷಿಸಬೇಕೆಂದು ಅಖಿಲ ಕರ್ನಾಟಕ ದೇವಾಂಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹಾಗೂ ಜಿ.ಪಂ.ನ ಮಾಜಿ ಸದಸ್ಯ ಈಸೂರು ಬಸವರಾಜ್ ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ.
ಈ ಜನಾಂಗದಲ್ಲಿ ಇಲ್ಲಿಯವರೆಗೆ ವಿಧಾನ ಸಭೆ, ವಿಧಾನ ಪರಿಷತ್, ಸಚಿವ ಸ್ಥಾನ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲೀ ಯಾರೂ ಇಲ್ಲ. ದುರಂತವೆಂದರೆ ಈ ಜನಾಂಗದ ಯುವಕ, ಯುವತಿಯರ ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲ ಎಂಬುದನ್ನು ತಾವುಗಳು ಗಮನಿಸಬೇಕೆಂದು ವಿನಂತಿಸಿದ್ದಾರೆ.
ದೇವಾಂಗ ಜನಾಂಗವು ಹೆಸರಿಗೆ ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ಇದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅತಿ ಹೆಚ್ಚು ವಂಚಿತವಾಗಿರುವ ಸಮಾಜದ ಕಟ್ಟ ಕಡೆಯ ಜನಾಂಗವಾಗಿದೆ. ರೈತರು ಮತ್ತು ನೇಕಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ರೈತ ಊಟ ನೀಡಿದರೆ ನೇಕಾರ ಬಟ್ಟೆ ಕೊಟ್ಟು ಎಲ್ಲರ ಮಾನ ಕಾಪಾಡಿದ್ದಾನೆ. ಈಗಿರುವಾಗ ರೈತರಷ್ಟು ಕನಿಷ್ಠ ಅವಕಾಶಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದಿದ್ದಾರೆ.
ಇಡೀ ರಾಜ್ಯದಲ್ಲಿ ೩೦ ಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿರುವ ಈ ಜನಾಂಗದಲ್ಲಿ ಆರ್ಥಿಕವಾಗಿ ಒಂದಿಷ್ಟು ಸಬಲರು ಎನ್ನುವಷ್ಟು ಸಂಖ್ಯೆ ಬೆರಳಿಕೆಯಷ್ಟಿದೆ. ಆರ್ಥಿಕ ಸೌಲಭ್ಯಗಳು ಶೈಕ್ಷಣಿಕ ಅನುಕೂಲತೆಗಳಿಗೆ ಒಂದು ದಿನವೂ ಬೇಡದ ನಮ್ಮ ಜನಾಂಗದ ಸದ್ಯದ ಪರಿಸ್ಥಿತಿಯನ್ನು ತಾವುಗಳು ಗಂಭೀರವಾಗಿ ಗಮನಿಸುವ ಮೂಲಕ ತಜ್ಞರ ಸಮಿತಿ ರಚಿಸಿ ಇಡೀ ರಾಜ್ಯದಲ್ಲಿರುವ ದೇವಾಂಗ ಸಮಾಜದ ಸಮೀಕ್ಷೆ ನಡೆಸಿ ಅದರ ವರದಿಯನುಸಾರ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿದ್ದಾರೆ.
ತಾವುಗಳು ಮುಖ್ಯಮಂತ್ರಿಗಳಾದಂತಹ ದೇವರ ದಾಸಿಮಯ್ಯ ಜಯಂತಿ ಆಚರಣೆ, ಆ ಜಯಂತಿಯ ದಿನ ರಜೆ ಘೋಷಣೆ ಅಂತೆಯೇ ಗಾಯಿತ್ರಿ ಪೀಠದ ಅಭಿವೃದ್ಧಿಗಾಗಿ ಉದಾರ ನೆರವು ನೀಡಿರುವುದನ್ನು ನಮ್ಮ ಸಮಾಜ ಸದಾ ಸ್ಮರಿಸುತ್ತದೆ. ಆದರೆ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಸಮಾಜದ ಬಡವರ ತಳಮಟ್ಟದ ಜನರ ಬದುಕನ್ನು ಸರಿಪಡಿಸದ ಹೊರತು ಸಮಾಜ ಉದ್ದಾರವಾಗಲಾರದು. ನಮ್ಮ ಸಮಾಜದ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಉನ್ನತ ಸ್ಥಾನ ಪಡೆಯಲು ವಿಶೇಷ ಮೀಸಲಾತಿ ನೀಡುವುದು ಅತ್ಯಗತ್ಯವಾಗಿದೆ.
ತಾವುಗಳು ನಮ್ಮ ಸಮಾಜದ ಸಾಮಾನ್ಯ ಜನರ ಅಳಲಿಗೆ ಸ್ಪಂದಿಸುವ ಮೂಲಕ ಪರಿಶೀಲನೆ ನಡೆಸಿ ಈ ಸೌಲಭ್ಯವನ್ನು ಕಲ್ಪಿಸಿ ಕೊಡಲು ಕೋರುತ್ತಿದ್ದೇವೆ. ತಮ್ಮನ್ನು ಸಮಾಜ ಪೂಜ್ಯನೀಯ ಸ್ಥಾನದಲ್ಲಿ ಗೌರವಿಸುತ್ತಿದೆ ಹಾಗೂ ಗೌರವಿಸುತ್ತದೆ ಎಂದು ಹೇಳಿರುವ ಈಸೂರು ಬಸವರಾಜ್ ೧೫ ದಿನಗಳೊಳಗೆ ಸರ್ವೇ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಸಮಾಜದ ಸಮಸ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.