ಸಾಗರ : ಬ್ರಿಟೀಷರು ಸಹ ರಸ್ತೆಗೆ ಮೊಳೆ ಹೊಡೆದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿರಲಿಲ್ಲ. ಆದರೆ ಹಿರಿಯರ ತ್ಯಾಗ ಬಲಿದಾನದ ಮೂಲಕ ದೊರೆತ ಪ್ರಜಾತಂತ್ರ ವ್ಯವಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ರಸ್ತೆಗೆ ಮೊಳೆ ಹೊಡೆಯುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ಸಂವಿಧಾನ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರ ವಿರೋಧಿ ಸರ್ಕಾರ ಮತ್ತೊಂದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶದಿಂದ ಹೇಳಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮೋದಿ ನೇತೃತ್ವದ ಸರ್ಕಾರದಷ್ಟು ಪ್ರಜಾತಂತ್ರ ವಿರೋಧಿ ಸರ್ಕಾರ ಮತ್ತೊಂದಿಲ್ಲ ಎನ್ನುವುದು ಪದೇಪದೇ ಸಾಬೀತಾಗುತ್ತಿದೆ. ಹಕ್ಕು ಕೇಳುವ ಜನರನ್ನು, ರೈತರ ಧ್ವನಿ ಹತ್ತಿಕ್ಕುವುದು ಎಂದರೆ ಅದಕ್ಕಿಂತ ಕೆಟ್ಟ ರಾಜಕಾರಣ ಮತ್ತೊಂದಿಲ್ಲ. ಈ ಸರ್ಕಾರ ಮುಂದುವರೆದರೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಜನರಿಗೆ ವಿಷ ಹಾಕುತ್ತಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಇಂತಹ ಸರ್ಕಾರ ಕೆಳಗೆ ಇಳಿಸಲು ಹೋರಾಟ ಅನಿವಾರ್ಯ. ನಾವು ಹೋರಾಟ ಜೈಲು ಅನ್ಯಾಯ ಬಯಲು ಎನ್ನುವ ಹೋರಾಟದ ಮೂಲಕ ರೈತರು, ಎಲ್ಲ ವರ್ಗದ ಏಳಿಗೆಗಾಗಿ ಶ್ರಮಿಸಿದ್ದೇವೆ. ಆದರೆ ಮೋದಿಯವರು ಅಚ್ಛೇದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಲಿ ಹೇಳುತ್ತಿದ್ದಾರೆ. ಆದರೆ ದೇಶದ ಯಾವ ವರ್ಗವೂ ಅಭಿವೃದ್ದಿಯಾಗಿಲ್ಲ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸಿದಾಗ ಮಾತ್ರ ನಾವು ಪಡೆದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸ್ಥಳೀಯ ಶಾಸಕರಿಗೆ ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಗ್ರಾಮ ಪಂಚಾಯ್ತಿಗೊಂದು ಬಾರ್ ಮತ್ತು ರೆಸ್ಟೋರೆಂಟ್ ತೆಗೆಯುವಲ್ಲಿಯೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಸಾಗರ ಪ್ರಜ್ಞಾವಂತರ ಕ್ಷೇತ್ರವಾಗಿದ್ದು, ಹಾಲಿ ಶಾಸಕರ ಅಧಿಕಾರ ಅವಧಿ ಮುಗಿಯುವಷ್ಟರಲ್ಲಿ ಸಾಗರ ಹೋಗಿ ಬಾರ್ ಕ್ಷೇತ್ರವಾದರೂ ಅಚ್ಚರಿ ಪಡಬೇಕಾಗಿಲ್ಲ. ಕೆರೆಹಬ್ಬ ಸೇರಿದಂತೆ ಬೇರೆಬೇರೆ ಹಬ್ಬ ಆಚರಿಸಲಿ. ನಮ್ಮದೇನು ಅಭ್ಯಂತರವಿಲ್ಲ. ಅಂಗವಿಕಲರು, ವಿಧವೆಯರು, ವೃದ್ದಾಪ್ಯವೇತನ ಸಿಗದೆ ಫಲಾನುಭವಿಗಳು ಹಸಿವಿನಿಂದ ಬಳಲುತ್ತಿದ್ದಾರೆ. ಇದನ್ನು ಅರ್ಹರಿಗೆ ತಲುಪಿಸುವಲ್ಲಿ ಶಾಸಕರು ಪೂರ್ಣ ವಿಫಲವಾಗಿದ್ದಾರೆ ಎಂದು ದೂಷಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಪ್ರಶ್ನಿಸುವ, ಮಾತನಾಡುವ ಹಕ್ಕು ಕಿತ್ತುಕೊಳ್ಳುತ್ತಿದೆ. ರೈತರು ಕಳೆದ ಎಪ್ಪತ್ತು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕೇವಲ ಐದು ಕಿ.ಮೀ. ದೂರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಮಸ್ಯೆ ಕೇಳಲು ಸ್ಥಳಕ್ಕೆ ಹೋಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಭಾವನೆಗಳ ಜೊತೆ ಆಟವಾಡುವ ಮೂಲಕ ಅಧಿಕಾರ ದರ್ಪ ಮೆರೆಯುತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಜಾಸ್ತಿಯಾಗಿರುವುದರಿಂದ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದೇಶದ್ರೋಹಿಗಳು ಎಂದು ಕರೆಯುವವರು ಅತ್ಯಂತ ನಿಕೃಷ್ಟರು ಎಂದು ದೂರಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ೨೦೧೧ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಉತ್ಪಾದನೆ ಮತ್ತು ಕೃಷಿ ಸಂವರ್ಧನೆಗೊಳಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿ ಅಧ್ಯಯನ ನಡೆಸಿ ಕೃಷಿ ಬಗ್ಗೆ ಆಸಕ್ತಿ ತೋರಿಸಿದ್ದರು. ಆದರೆ ಪ್ರಧಾನಿಯಾದ ಮೇಲೆ ಕೃಷಿಕರ ಬದುಕಿಗೆ ಕೊಳ್ಳಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಬಗ್ಗೆ ಯಾವತ್ತೂ ಕಾಳಜಿ ಇರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ಕಾಂಗ್ರೇಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ನಗರ ಬ್ಲಾಕ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಕುಮಾರಿ, ಪ್ರಮುಖರಾದ ಎಲ್.ಟಿ.ತಿಮ್ಮಪ್ಪ ಹೆಗಡೆ, ಮಕ್ಬೂಲ್ ಅಹ್ಮದ್, ರಫೀಕ್ ಬಾಬಾಜಾನ್, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಅಶೋಕ್ ಬೇಳೂರು, ವೆಂಕಟೇಶ್ ಮೆಳವರಿಗೆ, ಪ್ರಶಾಂತ್, ಪ್ರವೀಣ ಬಣಕಾರ್, ಅಬ್ದುಲ್ ಹಮೀದ್, ಎನ್.ಲಲಿತಮ್ಮ, ಕೆ.ಹೊಳೆಯಪ್ಪ, ಜ್ಯೋತಿ ಕೋವಿ, ಪರಿಮಳ, ಚಂದ್ರಶೇಖರ ಗೂರಲಕೆರೆ, ಲಕ್ಷ್ಮಣ್ ಸಾಗರ್ ಇನ್ನಿತರರು ಹಾಜರಿದ್ದರು. ಇದಕ್ಕೂ ಮೊದಲು ಕಾಂಗ್ರೇಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಸೈಕಲ್ ಜಾಥಾ, ಎತ್ತಿನಗಾಡಿಯಲ್ಲಿ ಗ್ಯಾಸ್ ಸಿಲೆಂಡರ್ ಇರಿಸಿ ಬೆಲೆ ಏರಿಕೆ ವಿರುದ್ದ ದಿಕ್ಕಾರ ಕೂಗಲಾಯಿತು.