ಶಿವಮೊಗ್ಗ: ಬೆಳಗಾವಿ ಕರ್ನಾಟಕದ್ದೇ ಆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ ಆದರೆ ಮರಾಠ ಪ್ರಾಧಿಕಾರಕ್ಕೆ ಕೆಲವರು ವಿರೋಧ ವ್ಯಕ್ತ ಪಡಿಸುವುದು ಸರಿಯಲ್ಲ. ಪ್ರಾಧಿಕಾರದ ರಚನೆಗೆ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿಗಳ ತೀರ್ಮಾನ ಸ್ವಾಗತಾರ್ಹ ಎಂದು ಕ್ಷತ್ರೀಯ ಮರಾಠ ಮೀಸಲಾತಿ ಅಭಿಯಾನದ ಅಧ್ಯಕ್ಷ ಪಿ.ವಿಜೇಂದ್ರ ಜಾಧವ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರು ಕನ್ನಡಿಗರೇ ಆಗಿದ್ದಾರೆ. ಮರಾಠಿಗರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2-ಎ ಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. ಸರ್ಕಾರ ಆ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮರಾಠ ಪ್ರಾಧಿಕಾರ ರಚನೆ ಮಾಡಿರುವುದು ಸ್ವಾಗತ. ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಇದನ್ನು ರದ್ದುಗೊಳಿಸಬಾರದು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಬಹುಸಂಖ್ಯಾತ ಮರಾಠಿಗರಿದ್ದರೂ ಕೂಡ ರಾಜಕೀಯವಾಗಿ, ಆರ್ಥಿಕವಾಗಿ ಪಾರುಪಥ್ಯೆ ನಡೆಸಿಲ್ಲ. ವಿಧಾನ ಸಭೆಯ 32 ಕ್ಷೇತ್ರಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ ಒಬ್ಬ ಮರಾಠಿಗರು ಆಯ್ಕೆಯಾಗಿಲ್ಲ. ಪ್ರಾಧಿಕಾರ ರಚನೆಯಿಂದ ಕನ್ನಡ ನಾಡಿಗೆ ಯಾವ ಅನ್ಯಾಯವಾಗಿದೆ ಎಂದು ಇದನ್ನು ವಿರೋಧಿಸುತ್ತಿರುವ ವಾಟಾಳ್ ನಾಗರಾಜ್ ಸೇರಿದಂತೆ ಇತರ ಕನ್ನಡ ಸಂಘಟನೆಗಳು ತಿಳಿಸಬೇಕು ಎಂದರು.
ನಮ್ಮನ್ನು ನಾಡ ದ್ರೋಹಿಗಳೆಂದು ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ ನಾವು ಕನ್ನಡ ನಾಡಿನಲ್ಲೇ ಇದ್ದೇವೆ ಕನ್ನಡ ಭಾಷೆಯನ್ನೇ ಮಾತನಾಡುತ್ತಿದ್ದೇವೆ. ಮರಾಠಿಗರು ಉನ್ನತ ಉದ್ಯೋಗದಲ್ಲೂ ಇಲ್ಲ, ರಾಜಕಾರಣಿಗಳೂ ಆಗಿಲ್ಲ. ಅದರ ಬದಲು ಕೂಲಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಿದ್ದಾರೆ. ರಿಕ್ಷಾ ಚಾಲಕರಿದ್ದಾರೆ. ಬೀದಿ ಬದಿ ಹೋಟೆಲ್‌ಗಳಿದ್ದಾರೆ. ಹೀಗಿದ್ದು ಕರ್ನಾಟಕದ ಮರಾಠಿಗರನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರುರಾವ್ ಗಾರ್ಗೆ, ಭವಾನಿರಾವ್ ಮೋರೆ, ರಮೇಶ್‌ಬಾಬು ಜಾಧವ್, ದಿನೇಶ್ ಚೌಹ್ವಾಣ್, ಚೂಡಾಮಣಿ ಪವಾರ್, ಸೇರಿದಂತೆ ಹಲವರು ಇದ್ದರು.