Site icon TUNGATARANGA

ಕಸ್ತೂರಬಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ/ಶಿಕ್ಷಣದ ಜೊತೆಗೆ ಸುಸಂಸ್ಕೃತರಾಗಿ :  : ಜಿ.ಎಸ್.ನಾರಾಯಣ ರಾವ್

ಶಿವಮೊಗ್ಗ d 04 : ಸುಶಿಕ್ಷಿತರ ಜೊತೆಗೆ ಸುಸಂಸ್ಕೃತ ಯುವ ಸಮೂಹ ಸಮಾಜಕ್ಕೆ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಶಿಕ್ಷಣ ಸಮಿತಿ, ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಪಡೆದವರು ಕಸ ಎಸೆದು ಶಿಕ್ಷಣ ಇಲ್ಲದವರು ಅದನ್ನು ಶುಚಿ ಮಾಡುವುದಾದರೆ ಶಿಕ್ಷಣಕ್ಕೆ ಸಿಕ್ಕ ಬೆಲೆಯಾದರು ಏನು ಎಂಬ ಪ್ರಶ್ನೆ ಮೂಡುತ್ತದೆ.ಹಾಗಾಗಿ ಸುಸಂಸ್ಕೃತ ಸೌಜನ್ಯತೆ ತುಂಬಾ ಮುಖ್ಯ. 

ಮಕ್ಕಳಿಗೆ ಎನ್ಇಎಸ್ ಸಂಸ್ಥೆ ಸುಸಂಸ್ಕೃತಿಯನ್ನು ಕಲಿಸುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ನೈತಿಕತೆಯನ್ನು,ಮಾನವೀಯ ಮೌಲ್ಯಗಳನ್ನು ಕಲಿಸುವ ತುರ್ತಿದೆ. 

ಸಂಸ್ಕೃತಿ ಸಂಸ್ಕಾರಗಳಿಂದ ಭಾರತ ಬಲಿಷ್ಟವಾಗಿದೆ.ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವನ್ನು ಸಹಜವಾಗಿ ಎದುರಿಸಿ. ತೀರ್ಪುಗಾರರಿಗೆ  ಅಭಿಮಾನದ ಕೊಡುಗೆ ನೀಡಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಕ್ಕಳಿಗೆ ಇಂತಹ ವೇದಿಕೆಗಳು ಶಾಲಾ ಹಂತದಲ್ಲಿಯೇ ದೊರಕಬೇಕಿದೆ. ಇದರಿಂದ ಪಠ್ಯದ ಜೊತೆಗೆ ಸೃಜನಶೀಲತೆ ಎಂಬುದು ಆಕಾರ ಪಡೆಯಲಿದೆ ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ವೆಂಕಟೇಶ, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಎಸ್.ಪಂಡರಿನಾಥ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಯೋಗೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version