Site icon TUNGATARANGA

ಹಾರ್ಟ್ ಇದ್ದೋರಿಗಷ್ಟೇ ಅಟ್ಯಾಕಾ?, ಸಣ್ ಮಕ್ಕಳಿಗೂ ಅಟ್ಯಾಕ್ ಯಾಕ್ರೀ? ಗಜೇಂದ್ರ ಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಓದಿ

ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)

ವಾರದ ಅಂಕಣ-22

ಹೃದಯಾಘಾತ ಎಂಬ ಅಚ್ಚ ಕನ್ನಡದ ಸ್ವಚ್ಛ ಭಾಷೆಯ ಹಾರ್ಟ್ ಅಟ್ಯಾಕ್ ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಅದಕ್ಕೆ ನಾನಾಕರಣಗಳಿವೆ ಮುಖ್ಯವಾಗಿ ಹಾರ್ಟ್ ಅಟ್ಯಾಕ್ ಯಾಕೆ ಹೇಗೆ ಎಂಬ ವೈಜ್ಞಾನಿಕ ಅಂಶಗಳನ್ನು ಹೊರಗಿಟ್ಟು ಯೋಚಿಸಿದಾಗ ಹಾರ್ಟ್ ಇದ್ದವರಿಗೆ ಮಾತ್ರ ಅಟ್ಯಾಕ್ ಆಗುತ್ತಾ? ಇಲ್ಲದವರು ಎಷ್ಟು ಜನ ಇಲ್ಲ. ಹೃದಯ ಕೇವಲ ದೇಹದ ಒಂದು ಭಾಗವಲ್ಲ. ಅದು ದೇಹದ ಅತಿ ಮುಖ್ಯ ಪ್ರೀತಿ, ದಯೆ, ಮಾನವೀಯ ನೆಲಗಟ್ಟಿನ ರೂವಾರಿ ಎನ್ನಲಾಗುತ್ತದೆ ಅಲ್ಲವೇ? ಇದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣ. ಒಂದಿಷ್ಟು ನೋವಿನಲ್ಲೂ ನಗುವ, ಒಂದಿಷ್ಟು ತಿಳಿದುಕೊಳ್ಳುವ ಒಂದು ಸಣ್ಣ ವಿಷಯಲಹರಿ.


ಇತ್ತೀಚಿನ ದಿನಮಾನಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಆಯಿತು. ಆ ಮಗುವಿಗೆ ಎರಡು ಅಥವಾ ಮೂರು ಸ್ಟಂಟ್ ಹಾಕಲಾಯಿತು. ಓಪನ್ ಸರ್ಜರಿ ಆಯ್ತು. ಆ ಮಗು ಹೃದಯಘಾತದಿಂದ ಮರಣ ಹೊಂದಿತು ಎಂಬ ಸಾಕಷ್ಟು ಮಾತುಗಳನ್ನು, ವಿಷಯಗಳನ್ನು ನಾವು ನಿರಂತರವಾಗಿ ಕೇಳುತ್ತಲೇ ಇದ್ದೇವೆ. ಹೃದಯ ಇದ್ದವರಿಗೆ ಅಷ್ಟೇ ಹಾರ್ಟ್ ಅಟ್ಯಾಕ್ ಬರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರೀತಿಯೆಂಬ ಹೃದಯವನ್ನು ಕೇವಲ ಒಂದು ಅಂಗವಾಗಿ ಪರಿಗಣಿಸದೆ ಅದರಲ್ಲಿನ ನೈಜತೆ, ಭಾವನೆ, ಅಭಿಲಾಷೆ, ಪ್ರೀತಿ, ವಾತ್ಸಲ್ಯ, ಕನಿಕರದಂತಹ ಸೃಜನಶೀಲ ಚಹರೆಯನ್ನು ಗಮನಿಸುವ ಅಗತ್ಯವಿದೆ ಅಲ್ಲವೇ?
ಹೃದಯಕ್ಕೊಂದು ವಿಶೇಷ ಚಿತ್ರವನ್ನೇ ನೀಡಿರುವ ನಮ್ಮ ನಡುವಿನ ಸಮಾಜ ಕೈಯಲ್ಲೇ ಹೃದಯವನ್ನು ತೋರಿಸುತ್ತಾರೆ. ಫೆಬ್ರುವರಿ 24ಕ್ಕೆ ಮಾತ್ರ ಸೀಮಿತವಾಗದ ಹೃದಯದ ಭಾವನಾ ಭಾಷೆ ಸದಾ ಕಾಲ ಎಲ್ಲರೊಂದಿಗೆ ನಕ್ಕು ನಲಿದಾಡುತ್ತದೆ. ಆದರೆ ಬದುಕ ಕೊನೆಯ ಕ್ಷಣ ಹೃದಯವನ್ನು ಕೇವಲ ಅಂಗವಾಗಿ ಪರಿಗಣಿಸುವ ಅನಿವಾರ್ಯತೆ ಹೆಚ್ಚಿದೆ ಅಲ್ಲವೇ?


ಇತ್ತೀಚಿನ ದಿನಮಾನಗಳಲ್ಲಿ ತಿನ್ನುವ ಆಹಾರ ಪದಾರ್ಥ, ಬದುಕುವ ರೀತಿ, ದೈಹಿಕ ಕಸರತಿಲ್ಲದ ವಾತಾವರಣ ಇಂತಹ ಅವಘಡಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ನಾವು ನಮ್ಮ ನಡುವೆ ಈಗ ಬೆಳೆಯುತ್ತಿರುವ ಮಕ್ಕಳನ್ನು ಗಮನಿಸಿದ್ದೇವೆ. ಹೆಗಲ ತುಂಬಾ ಪುಸ್ತಕದ ರಾಶಿ ಹೊತ್ತುಕೊಂಡು ಎದ್ದ ತಕ್ಷಣ ಸ್ನಾನ ಮಾಡಿ ಗಪಗಪನೇ ನಾಲ್ಕುತುತ್ತು ತಿಂದು ಮತ್ತೊಂದು ಬಾಕ್ಸ್ ಕಟ್ಟಿಕೊಂಡು ಶಾಲೆಗೆ ಹೋದರೆ ನಂತರ ಸಂಜೆಯ ತನಕ ಅದೇ ಪುಸ್ತಕದ ನಡುವೆ ಕಾಲ ಕಲಿಯುವ ಅನಿವಾರ್ಯತೆ ಹೆಚ್ಚಿದೆ. ಆಟ ಆಡುವ, ಕುಣಿದಾಡುವ ನಕ್ಕು ನಲಿದಾಡುವ ಅವಶ್ಯಕತೆ ಹೆಚ್ಚಾಗಿದ್ದರೂ ಸಹ ಅದಕ್ಕೆ ಕಲಿಕೆ ನಡುವಿನ ಸಮಯದ ಮಿತಿ ಎಲ್ಲರನ್ನೂ ಕೇವಲ ಗೊಂಬೆಗಳನ್ನಾಗಿ ಇಲ್ಲವೇ ಮನುಷ್ಯತ್ವವನ್ನು ಮರೆತ ಯಂತ್ರವನ್ನಾಗಿ ರೂಪಿಸಿರುವುದು ಇಂತಹ ಅಟ್ಯಾಕ್ ಗಳಿಗೆ ಕಾರಣ ಎನ್ನಲಾಗುತ್ತದೆ ಅಲ್ಲವೇ?
ಹಿಂದೆ ಇದೇ ಹೃದಯಾಘಾತ, ಸಕ್ಕರೆ ಕಾಯಿಲೆಯತಹ  ಕಾಯಿಲೆಗಳನ್ನು ಅನುವಂಶಿಕವಾಗಿ ಬರುತ್ತದೆ ಎನ್ನುತ್ತಿದ್ದರು. ತಲೆಯ ಮೇಲಿನ ಕೂದಲು ಉದುರಿ ಬಾಂಡ್ಲಿಯಾಗುವುದು ಸಹ ಅನುವಂಶೀಯತೆ ಎನ್ನಲಾಗುತ್ತಿತ್ತು. ಆದರೆ ಈಗ ಬದಲಾಗಿದೆ. ಏಕೆಂದರೆ ನಮ್ಮ ನಡುವಿನ ಜಂಕ್ ಫುಡ್ ಹಾವಳಿ ಹಾಗೂ ಆಹಾರ ಸೇವನೆಯ ವಿಧಿ ವಿಧಾನವೇ ಬದಲಾಗಿರುವುದು, ದೈಹಿಕ ಕಸರತ್ತು ಮರೆಯಾಗಿರುವುದು ಎಂದರೆ ತಪ್ಪಾಗಲಿಕ್ಕಿಲ್ಲ.
ಕಳೆದ ವಾರದ ಹಿಂದೆ ಒಂಬತ್ತನೇ ತರಗತಿ ಓದುತ್ತಿದ್ದ ಅತ್ಯಂತ ಚುರುಕಿನ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಶಾಲಾ ಬಸ್ ನಲ್ಲಿ ಹೋಗುವಾಗ ಕಂಡ ಅಪಘಾತ ದೃಶ್ಯವನ್ನು ನೋಡಿ ಬಸ್ನಲ್ಲಿಯೇ ಕುಸಿದು ಬಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದಾಗ ಅವಳಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿದರು. ಆ ಕಂದಮ್ಮ ಹೇಗೆ ತಾನೇ ನನಗೆ ಹೃದಯದ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಲು ಸಾಧ್ಯ? ಪೋಷಕರಿಗಾದರೂ ಹೇಗೆ ಈ ಬಗ್ಗೆ ಮಾಹಿತಿ ಸಿಗಬೇಕು.


ಈಗ ನಿತ್ಯ ನಾವು ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನು ಮಾಡಿಸುವ ಅನಿವಾರ್ಯತೆ ಬಂದದ್ದಾರರೂ ಏಕೆ? ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನಲ್ಲಿ ಒತ್ತಡದ ಬದುಕಿನ ನಡುವೆ ಆರೋಗ್ಯ ಸಮಸ್ಯೆಗಳು ಸಹಜವಾಗಿದ್ದು, ಆಸ್ಪತ್ರೆಗಳ ಸಂಖ್ಯೆ ಗಣನೀಯವಾಗಿತ್ತು ಎಂಬುದು ಸರಿಯಷ್ಟೇ. ಶಿವಮೊಗ್ಗದಂತಹ ನಗರದ ಗಲ್ಲಿ ಗಲ್ಲಿಗಳಲ್ಲಿ ಈಗ  ಆಸ್ಪತ್ರೆಗಳ ರಾಶಿಯೇ ಕಾಣಿಸುತ್ತದೆ. ಅಲ್ಲಿ ಒಂದೊಂದಕ್ಕೆ ಒಂದೊಂದು ಕಾರಣ ಇರುತ್ತವಲ್ಲವೇ? ಶಿವಮೊಗ್ಗ ಒಂದು ಬಗೆಯಲ್ಲಿ ಆಸ್ಪತ್ರೆಗಳ ತವರು ಮನೆ ಆಗಿರುವುದು ಸರಿಯೇ ಅಥವಾ ದುರಂತವೇ ಎಂಬುದು ನಮ್ಮ ನಡುವೆ ಹುಟ್ಟಿಕೊಂಡ ಬಹುದೊಡ್ಡ ಪ್ರಶ್ನೆ. ಕೂಡಲೇ ಚಿಕಿತ್ಸೆ ಸಿಗುತ್ತದೆ ಎಂಬುದು ಸರಿಯನ್ನಬಹುದಾದರೆ ಇಷ್ಟೊಂದು ಆಸ್ಪತ್ರೆಗಳು ಬೇಕಿತ್ತಾ ಎಂಬುದು ಮತ್ತೊಂದು ಪ್ರಶ್ನೆ.


ಸಕ್ಕರೆ ಕಾಯಿಲೆ ಎಂಬುದು ಅಷ್ಟು ದೊಡ್ಡ ವಿಷಯವೇನು ಆಗಿರಲಿಲ್ಲ ಅದೊಂದು ಸಹಜ ಹಾಗೂ ದೈಹಿಕ ಬದಲಾವಣೆಗಳ ಮೂಲಕ ಜೊತೆಗೆ ಆಹಾರ ಪದಾರ್ಥಗಳ ಸೇವನೆಯಿಂದ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅಂದಿನ ದಿನಮಾನಗಳಲ್ಲಿ ಪಡೆಯುತ್ತಿದ್ದರು. ಆದರೆ ಈಗ ಮಧುಮೇಹ ಸಕ್ಕರೆ ಕಾಯಿಲೆ ಎಂದೇ ಕರೆಸಿಕೊಳ್ಳುವ ಶುಗರ್ ಎಂಬುದು ಅತಿ ದೊಡ್ಡ ವಿಷಯವಾಗಿದೆ. ಕೆಲವೆಡೆ ಇದೇ ಹೆಸರಲ್ಲಿ ಲಕ್ಷ ಲಕ್ಷ , ಕೋಟಿ ಕೋಟಿ ಬಾಚುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆರೋಗ್ಯದ ಬಗ್ಗೆ ಹಾಗೂ ದೈಹಿಕ ಅಂಗಗಳ ಬಗ್ಗೆ ಅಷ್ಟೇನೂ ತಿಳುವಳಿಕೆ ಇಲ್ಲದ ಜನ ವೈದ್ಯರೆಂಬ ದೇವರನ್ನು ನಂಬುತ್ತಾರೆ. ಇದರ ನಡುವೆ ಇರುವ ಕೆಲವೇ ಕೆಲವು ಹಣ ಬಾಕ ವೈದ್ಯರ ಸಮೂಹ ಇದೇ ವಿಷಯವನ್ನು ಅತ್ಯಂತ ದೊಡ್ಡದಾಗಿ ಬೆಟ್ಟ ಮಾಡಿ ಬೆದರಿಸಿ ನಿರಂತರವಾಗಿ ಚಿಕಿತ್ಸೆಗೆ ಬರುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.
ಜಮೀನು ಮತ್ತಿತರ ವಿವಾದಗಳಲ್ಲಿ ಹೇಗೆ ರೈತರು ಕೋರ್ಟಿಗೆ ವರ್ಷಗಟ್ಟಲೆ ಸುತ್ತಿ ಸುತ್ತಿ ಸಾಯುತ್ತಾರೋ ಅದೇ ತರ ಈಗ ಆಸ್ಪತ್ರೆಗಳ ಹಾವಳಿ ಆಗಿದೆಯಾ? ನ್ಯಾಯಾಲಯದಲ್ಲಿ ಗೆದ್ದರೆ ಸೋಲುತ್ತಾನೆ. ಸೋತರೆ ಸಾಯುತ್ತಾನೆ ಎಂಬ ವಾಕ್ಯವನ್ನು ಒಪ್ಪಿಕೊಳ್ಳುತ್ತಾರೋ ಅದೇ ಬಗೆಯಲ್ಲಿ ಆರೋಗ್ಯದ ವಿಷಯದಲ್ಲಿ ಜನಸಾಮಾನ್ಯರು ಬೆದರಿಕೆ ಹಾಗೂ ಹೆದರಿಕೆಯಿಂದ ಬಾಳಬೇಕಾದ ಅನಿವಾರ್ಯತೆ ಬಂದಿರುವುದು ನಮ್ಮ ನಡುವಿನ ದುರಂತವಲ್ಲವೇ ?

Exit mobile version