Site icon TUNGATARANGA

ಅನುದಾನವನ್ನು ಬಳಸಿಕೊಂಡು ಶ್ರೀಕನಕದಾಸ ಸಮುದಾಯ ಭವನವನ್ನು ವಿಳಂಬ ಮಾಡದೇ ಆದಷ್ಟು ಬೇಗ ಲೋಕಾರ್ಪಣೆ ಮಾಡಿ:ಸಚಿವ ಬೈರತಿ ಸುರೇಶ್ ಕುರುಬ ಸಮಾಜದ ಮುಖಂಡರಿಗೆ ಮನವಿ

ಶಿವಮೊಗ್ಗ,ನ.30: ಮುಖ್ಯಮಂತ್ರಿಗಳ ಅನುದಾನವೂ ಸೇರಿದಂತೆ ಜನಪ್ರತಿನಿಧಿಗಳ ಅನುದಾನವನ್ನು ಬಳಸಿಕೊಂಡು ಶ್ರೀಕನಕದಾಸ ಸಮುದಾಯ ಭವನವನ್ನು ವಿಳಂಬ ಮಾಡದೇ ಆದಷ್ಟು ಬೇಗ ಲೋಕಾರ್ಪಣೆ ಮಾಡಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕುರುಬ ಸಮಾಜದ ಮುಖಂಡರಿಗೆ ಮನವಿ ಮಾಡಿದರು.

ಅವರು ಇಂದು ಬಾಲರಾಜ್ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಗಳಿಂದ ಸುಮಾರು 3.5 ಕೋಟಿ ಹಣವನ್ನು ನಾನು ಕೊಡಿಸುತ್ತೇನೆ. ಅಲ್ಲದೇ ವೈಯುಕ್ತಿಕವಾಗಿಯೂ ನಾನು ಹಣ ನೀಡುತ್ತೇನೆ. ಹಾಗೆಯೇ ಸಂಸದರು, ಶಾಸಕರು ಕೂಡ ತಮ್ಮ ಪಾಲಿನ ಅನುದಾನವನ್ನು ನೀಡುತ್ತಾರೆ. ಅದೆಲ್ಲವನ್ನು ಬಳಸಿಕೊಳ್ಳಿ ಎಂದರಲ್ಲದೆ ವೇದಿಕೆ ಮೇಲಿದ್ದ ಎಲ್ಲಾ ಶಾಸಕರಿಗು ವಿಧಾನಪರಿಷತ್ ಸದಸ್ಯರಿಗೂ ಜಿಲ್ಲಾ ಮುಖ್ಯಮಂತ್ರಿ ಮಧು ಬಂಗಾರಪ್ಪನವರಿಗು ಸಲಹೆ ನೀಡಿ ಈ ಸಮುದಯಕ್ಕೆ ನಿಮ್ಮ ಅನುದಾನದಲ್ಲಿ ಹಣವನ್ನು ನೀಡಿ ಸಹಕರಿಸಿ ಎಂದು ಮನವಿ ಮಾಡಿದ್ದು ವಿಶೇಷವಾಗಿತ್ತು.

ಅಭಿವೃದ್ಧಿ ಎಂಬುವುದು ಬಹಳ ಮುಖ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ಕೊರತೆಯಿಲ್ಲ. ಮುಖ್ಯಮಂತ್ರಿ ಎಲ್ಲ ವರ್ಗದ ಜನರಿಗೆ ನೆರವು ನೀಡುತ್ತಾರೆ. ಅವರ ಪಂಚ ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿವೆ. 4 ಮುಖ್ಯಮಂತ್ರಿಗಳನ್ನು ನೀಡಿದ ಶಿವಮೊಗ್ಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ ಎಂದರು.

ಇದೇ ಮೊದಲ ಬಾರಿಗೆ ರಾಜ್ಯದ ಮಹಾನಗರಪಾಲಿಕೆಗಳ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಿದ್ದೇವೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಅಭಿವೃದ್ಧಿಗೂ ಕೂಡ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿಗಳ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಇಬ್ಬರು ಕೂಡ ದಾನಿಗಳೇ ಆಗಿದ್ದಾರೆ. ಈ ಇಬ್ಬರು ವೈಯುಕ್ತಿಕವಾಗಿಯೂ ಹಣ ನೀಡುತ್ತಾರೆ. ಶಾಸಕ ಚನ್ನಬಸಪ್ಪ ನವರು ಕೂಡ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷ ಬೇಧ ಮರೆತು ನಾವೆಲ್ಲರು ಸೇರಿ ಅಭಿವೃದ್ಧಿಗೆ ಸಹಕರಿಸೋಣ ಎಂದ ಅವರು, ಕಾರ್ಯಕ್ರಮಕ್ಕೆ ಕೆ.ಎಸ್.ಈಶ್ವರಪ್ಪನವರನ್ನು ಕರೆದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮಾತನಾಡಿ, ಸಚಿವ ಬೈರತಿ ಸುರೇಶ್ ಅವರು ಅನುದಾನ ಕೊಡಲು ಮಾತು ಕೊಟ್ಟಿದ್ದರು. ಅದರಂತೆ ಈಗ ಕೊಡಲು ಒಪ್ಪಿದ್ದಾರೆ. ಮುಖ್ಯಮಂತ್ರಿಗಳು ಕೂಡ ಮನವಿ ಮಾಡಿದ್ದೇವೆ.  ಎಲ್ಲರ ಸಹಾಯದಿಂದ ಸಮಾಜದ ದೇಣಿಗೆಯನ್ನು ಸೇರಿಸಿಕೊಂಡು ಒಂದು ಒಳ್ಳೆಯ ಸಮುದಾಯ ಭವನವನ್ನು ಆದಷ್ಟು ಬೇಗ ನಿರ್ಮಿಸಿ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇದೊಂದು ಪುಣ್ಯದ ಕೆಲಸವಾಗಿದೆ. ಈ ಹಿಂದೆ 5 ಕೋಟಿ ರೂ. ಅನುದಾನ ಆಗಿತ್ತು. ಕಾರಣಾಂತರದಿಂದ ಅದು ಬಿಡುಗಡೆಯಾಗಿಲ್ಲ. ಅದಕ್ಕಾಗಿ ಕ್ಷಮೆ ಕೇಳುವೆ. ಈಗ ಸಂಸದರ ಅನುದಾನದಿಂದ 50 ಲಕ್ಷ ರೂ. ಹಣವನ್ನು ನೀಡುತ್ತೇನೆ. ಕುರುಬ ಸಮಾಜಕ್ಕೆ ವಿಶೇಷವಾದ ಗೌರವವಿದೆ. ಹಾಲಿನಂತ ಮನಸ್ಸು ಹಾಲುಮತದದವರದ್ದು, ಎಲ್ಲರೂ ಸೇರಿ ಸಮುದಾಯ ಭವನ ನಿರ್ಮಿಸಿ ಒಳ್ಳೆಯದಾಗಲಿ ಎಂದರು.

ಶಾಸಕರುಗಳಾದ ಡಿ.ಎಸ್.ಅರುಣ್, ಬಲ್ಕಿಷ್‍ಬಾನು, ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪನವರು ಮಾತನಾಡಿ, ತಮ್ಮ ತಮ್ಮ ಪಾಲಿನ ಅನುದಾನವನ್ನು ಸಮುದಾಯ ಭವನಕ್ಕೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಸಾನಿಧ್ಯವನ್ನು ಜಡೇ ದೇವರು ಮಠದ ಸ್ವಾಮಿ ಅಮೋಘ ಸಿದ್ದೇಶ್ವರಾನಂದರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್.ಎಂ.ಮಂಜುನಾಥಗೌಡ, ಎಸ್.ಕೆ.ಮರಿಯಪ್ಪ, ಎಚ್.ಎಸ್.ಸುಂದರೇಶ್, ಎಂ.ಶ್ರೀಕಾಂತ್, ಕೆ.ಎಂ.ರಾಮಚಂದ್ರಪ್ಪ, ಎಂ.ವೀರಣ್ಣ, ಕೆ.ರಂಗನಾಥ್, ಡಾ.ಶರತ್ ಮರಿಯಪ್ಪ, ಯೋಗೀಶ್, ರಂಗನಾಥ್, ರೇಖಾ ರಂಗನಾಥ್, ಎಸ್.ಪಿ.ಶೇಷಾದ್ರಿ, ಈಕ್ಕೇರಿ ರಮೇಶ್, ಶ್ರೀನಿವಾಸ್‍ಕರಿಯಣ್ಣ, ನಗರದ ಮಹಾದೇವಪ್ಪ, ಕಬಾಡಿ ರಾಜಣ್ಣ, ಬಿ.ಎಂ.ಸಂತೋಷ್ ಗೋಣಿ ಮಾಲತೇಶ್, ಹಾಲಪ್ಪ, ಮಾಲತೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version