Site icon TUNGATARANGA

ಜಿಲ್ಲಾ ಕುರುಬರ ಸಂಘದ ವತಿಯಿಂದ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಶ್ರೀ ಕನಕದಾಸ ಸಮುದಾಯ ಭವನ ನಿರ್ಮಾಣ ನ. 30 ರಂದು ಭೂಮಿ ಪೂಜೆ: ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್

ಶಿವಮೊಗ್ಗ: ಜಿಲ್ಲಾ ಕುರುಬರ ಸಂಘದ ವತಿಯಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್ ಜಾಗದಲ್ಲಿ ಸುಮಾರು ೧೨ ಕೋಟಿ ರೂ. ವೆಚ್ಚದಲ್ಲಿ ಶ್ರೀ ಕನಕದಾಸ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ನ. ೩೦ರಂದು ಬೆಳಗ್ಗೆ ೧೦.೩೦ಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕು ಎಂಬುದು ಸಂಘದ ಬಹುದಿನದ ಕನಸಾಗಿತ್ತು. ಇದೀಗ ನೆರವೇರುವ ಕಾಲ ಬಂದಿದೆ. ಕಾಗಿನೆಲೆ ಕ್ಷೇತ್ರದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಜಡೇದೇವರ ಮಠದ ಸ್ವಾಮಿ ಅಮೋಘ ಸಿದ್ದೇಶ್ವರಾನಂದರು ಭೂಮಿ ಪೂಜೆಯ ಸಾನಿಧ್ಯ ವಹಿಸುವರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕೀಶ್ ಬಾನು, ಧನಂಜಯ ಸರ್ಜಿ, ಕುರುಬರ ಸಂಘದ ಅಧ್ಯಕ್ಷ ಪಿ. ಮೈಲಾರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ರಆಜ್ಯ ಕುರುಬರ ಸಂಘದ ಅಧ್ಯಕ್ಷ ಎಂ. ಈರಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿರುವರು ಎಂದರು.


ಸಮುದಾಯ ಭವನವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಕೇವಲ ಕುರುಬ ಜಾತಿಗೆ ಮಾತ್ರ ಸೀಮಿತವಾಗದೇ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಕೈಗೆಟುಕುವ ದರದಲ್ಲಿ ಸಮುದಾಯ ಭವನ ಬಾಡಿಗೆ ನೀಡಲಾಗುವುದು. ಈಗಾಗಲೇ ಸಮುದಾಯ ಭವನಕ್ಕೆ ಈ ಮೊದಲು ೫೦ ಲಕ್ಷ ರೂ. ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೩ ಕೋಟಿ ರೂ. ಅನುದಾನ ನೀಡಿದ್ದಾರೆ. ಉಳಿದ ಹಣವನ್ನು ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಸಹಕಾರದೊಂದಿಗೆ ಸಂಗ್ರಹಿಸಿ ನಿರ್ಮಿಸಲಾಗುವುದು. ಎಲ್ಲಾ ರೀತಿಯಿಂದಲೂ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದರು.


ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಇದು ಬಹುದಿನದ ಕನಸು. ಈಗ ನನಸಾಗುವ ಕಾಲ ಬಂದಿದೆ. ಸಮುದಾಯ ಭವನವನ್ನು ವಿಶೇಷವಾಗಿ ನಿರ್ಮಿಸಲಾಗುವುದು. ಇದರಿಂದ ಬಂದ ಹಣವನ್ನು ಸಮಾಜದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ವಲ್ಪ ಭಾಗ ಮೀಸಲಾಗಿಡಲಾಗುವುದು. ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇರೆ ಕಡೆ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ. ರಂಗನಾಥ್, ಮೂಡ್ಲಿ ರಾಮಕೃಷ್ಣ, ಶರತ್ ಮರಿಯಪ್ಪ, ಹನುಮಂತಪ್ಪ, ನವುಲೆ ಈಶ್ವರಪ್ಪ, ಹೊನ್ನಪ್ಪ, ಮಾಲತೇಶ್, ಪ್ರಭು, ಕೃಷ್ಣಮೂರ್ತಿ, ಪಾಲಾಕ್ಷಿ, ಇಕ್ಕೇರಿ ರಮೇಶ್, ಸಿದ್ದಪ್ಪ, ಲಕ್ಷ್ಮಣ್, ಗಣೇಶ್, ರಾಘವೇಂದ್ರ, ಕೇಶವ, ಚಂದ್ರಣ್ಣ, ಅನಿಲ್, ಚೇತನ್ ಮಧು ಇದ್ದರು.

Exit mobile version