Site icon TUNGATARANGA

ಕೆಲವು ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ: ನ್ಯಾಯಾಧೀಶ ಎಸ್. ನಟರಾಜ್

ಸಾಗರ :n 28: ಕೆಲವು ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಸಿಬೆಳೆಸಲು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂದು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಎಸ್. ನಟರಾಜ್ ತಿಳಿಸಿದರು.
ತಾಲ್ಲೂಕಿನ ಕೊಪ್ಪ-ಮಳ್ಳ ಗ್ರಾಮದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೊಪ್ಪ ಕಾಗೋಡುದಿಂಬ ಮಳ್ಳ ನಾರಗೋಡು ಗ್ರಾಮಸ್ಥರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕನ್ನಡ ಮಾತನಾಡುವುದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತದೆ. ಪೋಷಕರು ಸಹ ಮಕ್ಕಳ ಮೇಲೆ ಇಂಗ್ಲೀಷ್ ಮಾತನಾಡಲು ಒತ್ತಡ ಹಾಕುತ್ತಾರೆ. ಕನ್ನಡ ಭಾಷೆ ಬೆಳೆಸಲು ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು. ಆಂಗ್ಲ ಭಾಷೆಯನ್ನು ವ್ಯವಹಾರಕ್ಕೆ ಬಳಸಿಕೊಳ್ಳಬೇಕು. ಮಾತೃಭಾಷೆ ಕನ್ನಡವನ್ನು ಬೆಳೆಸಬೇಕು ಎಂದ ಅವರು, ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ಮದ್ಯಪಾನದಂತಹ ದುಶ್ಚಟವನ್ನು ತೊರೆದವರಿಗೆ ಸನ್ಮಾನಿಸುವ ಉತ್ತಮ ಕೆಲಸ ಈ ವೇದಿಕೆಯಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿ. ಮದ್ಯಪಾನ ಕುಟುಂಬದ ಶಾಂತಿಯನ್ನು ನಾಶ ಮಾಡುತ್ತದೆ. ಮದ್ಯಪಾನದಿಂದ ದೂರವಿದ್ದು ಸನ್ಮಾರ್ಗಯುತ ಬದುಕು ನಡೆಸಿ ಎಂದು ಸಲಹೆ ನೀಡಿದರು.


ಹಿರಿಯ ನ್ಯಾಯವಾದ ಎಂ.ಎಸ್.ಗೌಡರ್ ಮಾತನಾಡಿ, ಪ್ರಸ್ತುತ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬಹಿಷ್ಕಾರ ಪದ್ದತಿ ಜೀವಂತವಾಗಿದೆ. ಕಟ್ಟು ಒಳಪೆಟ್ಟು ನೀಡುವ ಮೂಲಕ ಕುಟುಂಬವನ್ನು ಖಿನ್ನತೆಗೆ ಒಳಪಡಿಸುತ್ತದೆ. ಬಹಿಷ್ಕಾರ ಪದ್ದತಿ ಒಂದರ್ಥದಲ್ಲಿ ಸಿವಿಲ್ ಡೆತ್ ಇದ್ದಂತೆ. ಮಲೆನಾಡಿನ ಹಳ್ಳಿಗಳಲ್ಲಿ ಇಂದಿಗೂ ಕೊಟ್ಟು ಕೊಡುವ ಪದ್ದತಿ ಜಾರಿಯಲ್ಲಿರುವುದು ನಾಗರೀಕ ಸಮಾಜ ನಾಚಿಕೆಪಡುವಂತೆ ಆಗಿದೆ. ಕಟ್ಟು ಪದ್ದತಿ ನಿಲ್ಲಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ಕಾನೂನು ಸೇವಾ ಸಮಿತಿಗೆ ದೂರು ನೀಡಿದರೆ ನ್ಯಾಯಾಲಯ ಅವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸುತ್ತದೆ ಎಂದರು.


ವೇದಿಕೆಯಲ್ಲಿ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಮಾದೇಶ್ ಎಂ.ವಿ., ಸರ್ಕಾರಿ ಅಭಿಯೋಜಕ ಚಂದ್ರಶೇಖರ್ ಎಚ್.ಎಸ್., ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಈ., ನ್ಯಾಯವಾದಿ ಕೆ.ವಿ.ಪ್ರವೀಣ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಸ್ಪಾಕ್ ಅಹ್ಮದ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಮದ್ಯವರ್ಜನೆಗೊಳಿಸಿದವರನ್ನು ಸನ್ಮಾನಿಸಲಾಯಿತು. ಕುಮಾರಸ್ವಾಮಿ ಕೊಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಆವಿನಹಳ್ಳಿ ನಿರೂಪಿಸಿದರು.

Exit mobile version