Site icon TUNGATARANGA

ಸಹಕಾರ ಸಂಘಗಳ ಚುನಾವಣೆಗಳು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯಬೇಕು :ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ

ಶಿವಮೊಗ್ಗ,ನ.೨೭:ಸಹಕಾರ ಸಂಘಗಳ ಚುನಾವಣೆಗಳು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.


ಅವರು ಇಂದು ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ,ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಉಪವಿಭಾಗದಲ್ಲಿ ಚುನಾವಣೆ ನಡೆಯುವ ಸಹಕಾರ ಸಂಘಗಳ ರಿಟರ್ನೀಂಗ್ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಆಯೋಜಿಸಿದ್ದ ಒಂದು ದಿನದ ಚುನಾವಣೆ ಪೂರ್ವ ಸಿದ್ಧತಾ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಸಹಕಾರ ಚುನಾವಣೆಗಳು ರಾಜಕೀಯ ಪ್ರೇರಿತವಾಗಬಾರದು. ಈ ಚುನಾವಣೆಗಳ ಪ್ರಕ್ರಿಯೆಗಳು ಆರು ತಿಂಗಳ ಮೊದಲೇಯಾಗಬೇಕು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಇಲ್ಲಿ ಬಹಳ ಮುಖ್ಯ, ಸಮಗ್ರವಾಗಿ ಸದಸ್ಯರ ಪಟ್ಟಿ ತಯಾರಾಗಬೇಕು. ಒಂದು ವರ್ಷದ ಮೊದಲು ಸದಸ್ಯರಾದವರಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯನ್ನು ಕಸಿದುಕೊಳ್ಳುವಂತಹ ಸಂಗತಿಗಳು ನಡೆಯಬಾರದು. ಯಾವುದೇ ರಾಜಕಾರಣಿಗಳ ಪ್ರವೇಶ ಸಲ್ಲದು. ಇದು ಪಕ್ಷಾತೀತವಾಗಿರುತ್ತದೆ. ಯಾವುದೇ ರಾಜಕೀಯ ಪಕ್ಷದ ಚಿಹ್ನೆಗಳು ವ್ಯಕ್ತಿಗಳ ಗುರುತು ಇರುವುದಿಲ್ಲ ಎಂದರು.


ಸಹಕಾರ ಸಂಘಗಳ ಚುನಾವಣೆಗಳಲ್ಲಿ ಹಲವು ಬಾರಿ ದೂರುಗಳು ಬಂದಿರುತ್ತವೆ. ನ್ಯಾಯಾಲಯದ ಮೆಟ್ಟಿಲು ಸಹ ಏರಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಕಾನೂನಿಗೆ ತೊಂದರೆಯಾಗದಂತೆ ಚುನಾವಣಾ ವಿಧಿ ವಿಧಾನಗಳನ್ನು ನಡೆಸಬೇಕು. ಈ ಹಿನ್ನಲೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, ಸಂಬಂಧಪಟ್ಟವರು ಈ ಬಗ್ಗೆ ಮನನ ಮಾಡಿಕೊಂಡು ಚುನಾವಣೆ ಪ್ರಕ್ರಿಯೆಗಳು ಶಾಂತಿಯುತವಾಗಿ, ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಇದೊಂದು ವಿಶೇಷ ತರಬೇತಿ ಶಿಬಿರವಾಗಿದೆ. ಚುನಾವಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು ನಿಯಮಗಳು, ಈ ತರಬೇತಿ ಶಿಬಿರದಿಂದ ತಿಳಿಯುತ್ತವೆ. ಸಹಕಾರ ಸಂಘಗಳ ಚುನಾವಣೆಗಳೆಂದರೆ ರಾಜಕೀಯ ಚುನಾವಣೆಗಳು ಅಲ್ಲ. ಇಲ್ಲಿ ಎಲ್ಲ ಪಕ್ಷದವರು ಇರುತ್ತಾರೆ. ಪರಸ್ಪರ ಸ್ನೇಹದಿಂದ, ವಿಶ್ವಾಸದಿಂದ ಚುನಾವಣೆಗಳನ್ನು ಎದುರಿಸಬೇಕು. ಸೋಲುಗೆಲುವು ನಂತರದ ಮಾತು ಎಂದರು.
ಕಾರ್ಯಕ್ರಮದಲ್ಲಿ ಜಿ.ಕೆ.ರಾಮಪ್ಪ ಮತ್ತು ಶಾಂತರಾಜು ತರಬೇತಿ ನೀಡಿದರು. ಸಹಕಾರಿ ಯೂನಿಯನ್ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಹೆಚ್.ಯು.ಸುರೇಶ್ ವಾಟಗೋಡು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ.ವೀರಮ್ಮ, ಎಸ್.ಎಲ್.ನಿಖಿಲ್, ಉಪಾಧ್ಯಕ್ಷ ಹೆಚ್.ಎಸ್.ಸಂಜೀವ್‌ಕುಮಾರ್ ಸೇರಿದಂತೆ ಹಲವರಿದ್ದರು. ಸಿಇಓ ಯಶವಂತ್‌ಕುಮಾರ್ ಸ್ವಾಗತಿಸಿದರು.

Exit mobile version