Site icon TUNGATARANGA

ಸಾಗರ ; ಮಂಗನ ಕಾಯಿಲೆ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಸಾಗರ n 27 : ಮಂಗನ ಕಾಯಿಲೆ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ೨೦೨೬ಕ್ಕೆ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಕಂಡು ಹಿಡಿಯಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.


ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಎಫ್‌ಡಿ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಸಭೆ ನಡೆಸಿ ಅವರು ಮಾತನಾಡುತ್ತಾ ಮಂಗನಕಾಯಿಲೆಯಿಂದ ಯಾರೂ ಸಾಯಬಾರದು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ಮಂಗನ ಕಾಯಿಲೆಗೆ ಈತನಕ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಕಾಯಿಲೆ ಹರಡದಂತೆ ತಡೆದರೆ ಯಾರಿಗೂ ತೊಂದರೆ ಆಗುವುದಿಲ್ಲ. ಕೆಎಫ್‌ಡಿಗೆ ವ್ಯಾಕ್ಸಿನ್ ಕಂಡು ಹಿಡಿಯುವುದು ನಮ್ಮ ಮುಂದಿರುವ ಪ್ರಮುಖ ಗುರಿಯಾಗಿದೆ. ದೆಹಲಿಗೆ ಹೋಗಿ ಈ ಸಂಬಂಧ ಪ್ರಯತ್ನ ನಡೆಸಲಾಗಿತ್ತು. ಹಳೆಯ ವ್ಯಾಕ್ಸಿನ್‌ನಿಂದ ಯಾವುದೇ ಪ್ರಯೋಜನ ಇಲ್ಲದೆ ಇರುವುದರಿಂದ ಅದನ್ನು ಉಪಯೋಗಿಸದಂತೆ ಸೂಚನೆ ನೀಡಲಾಗಿದೆ. ಹೊಸ ವ್ಯಾಕ್ಸಿನ್ ಕಂಡು ಹಿಡಿಯಲು ಹೈದರಾಬಾದ್‌ನ ಸಂಸ್ಥೆಯೊಂದಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು ಸಿ.ಎಸ್.ಆರ್. ಫಂಡ್‌ನಿಂದ ಹತ್ತು ಕೋಟಿ ಕೊಡಲು ಸಿದ್ದತೆ ನಡೆದಿದೆ. ವ್ಯಾಕ್ತಿನ್ ತಯಾರಿಕೆ ಪ್ರಾರಂಭವಾಗಿದ್ದು ೨೦೨೬ಕ್ಕೆ ಕೊಡುವುದಾಗಿ ಸಂಸ್ಥೆ ತಿಳಿಸಿದೆ. ವ್ಯಾಕ್ಸಿನ್ ಇದ್ದರೆ ಯಾರೂ ಯಾರೂ ಆತಂಕಕ್ಕೆ ಒಳಗಾಗುವುದಿಲ್ಲ. ೨೦೨೫ರಲ್ಲಿ ಕೆಎಫ್‌ಡಿ ಹರಡದಂತೆ ಅಗತ್ಯ ನಿಗಾವಹಿಸಲಾಗುತ್ತದೆ ಎಂದರು.


ಕೆಎಫ್‌ಡಿ ಸಂಶೋಧನಾ ಘಟಕ ವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗುವಂತೆ ಸ್ಥಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಂದಿಗೋಡು ಕಾಯಿಲೆ ಕುರಿತು ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಹಂದಿಗೋಡು ಕಾಯಿಲೆ ಕುರಿತು ಸಹ ಚರ್ಚೆ ನಡೆಸಲಾಗುತ್ತದೆ.


ಕೋವಿಡ್ ಕಾಲದ ಅಕ್ರಮ ಕುರಿತು ಎಸ್‌ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಎಸ್.ಐ.ಟಿ ವರದಿ ಬಂದ ನಂತರ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಸಚಿವ ಸಂಪುಟ ಸಭೆ ಗುರುವಾರ ಅಥವಾ ಶುಕ್ರವಾರ ನಡೆಯಲಿದೆ. ಕೋವಿಡ್ ಕಾಲದ ಭ್ರಷ್ಟಾಚಾರ ವ್ಯವಸ್ಥಿತ ತನಿಖೆ ಆಗಬೇಕು. ಯಾರ ಮೇಲೂ ದ್ವೇಷ ಸಾಧಿಸಬೇಕು ಎಂಬುದು ತನಿಖೆಯ ಉದ್ದೇಶವಲ್ಲ. ಜಸ್ಟಿಸ್ ಕುನ್ನಾ ಅವರ ವರದಿಯಲ್ಲಿ ಕೆಲವು ಅಂಶಗಳು ಬಹಿರಂಗವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕ್ರಮದ ಜೊತೆಗೆ ಎಸ್.ಐ.ಟಿ. ತನಿಖೆ ಸಹ ಸರ್ಕಾರದ ಹಂತದಲ್ಲಿ ನಡೆಯುತ್ತದೆ ಎಂದರು.


ರಾಜ್ಯದಲ್ಲಿ ನಡೆದ ಉಪ ಚುನಾವಣೆ ಜೆಡಿಎಸ್ ಮತ್ತು ಬಿಜೆಪಿಗೆ ಜನ ನೀಡಿದ ಉತ್ತರವಾಗಿದೆ. ನೀವು ಇನ್ನೂ ಉತ್ತಮ ಕೆಲಸ ಮಾಡಿ ಎಂದು ಜನರೇ ನಮಗೆ ಹೆಚ್ಚು ಬೆಂಬಲ ನೀಡಿದ್ದಾರೆ. ಸುಳ್ಳು ಪ್ರಚಾರ ಮಾಡಿ, ಆಧಾರ ರಹಿತ ಆರೋಪ ಮಾಡಿಕೊಂಡು ಬಿಜೆಪಿ ಮತ್ತು ಜೆಡಿಎಸ್ ತಿರುಗಿದ್ದರು. ಅವರ ಅಪಪ್ರಚಾರಕ್ಕೆ ಜನರು ಕಿವಿಕೊಡಲಿಲ್ಲಿ. ಈಗ ಜೆಡಿಎಸ್ ಮತ್ತು ಬಿಜೆಪಿಯಲ್ಲೆ ಒಡಕು ಉಂಟಾಗಿದೆ. ಮುಂದೆ

ಏನಾಗುತ್ತದೆಯೋ ಗೊತ್ತಿಲ್ಲ. ಮುಂದೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಎಷ್ಟು ಜನ ಹೊರಗೆ ಬರುತ್ತಾರೋ ಗೊತ್ತಿಲ್ಲ. ಯಾರು ಕೋಮುವಾದವನ್ನು ಬದಿಗಿಟ್ಟು, ಸಾಮಾಜಿಕ ನ್ಯಾಯದ ಬಗ್ಗೆ ಬದ್ದತೆ ಇದ್ದವರು ಬಂದರೆ ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಪ್ರಮುಖರಾದ ಪಲ್ಲವಿ, ಸುಂದರೇಶ್, ರವಿಕುಮಾರ್, ಲಕ್ಷ್ಮೀ, ಡಾ. ಹರ್ಷವರ್ಧನ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

Exit mobile version