Site icon TUNGATARANGA

ಪಾಲಿಕೆ ವಿರುದ್ದ ಸಾರ್ವಜನಿಕರ ಅರೋಪವೇನು ? ಇಂಜಿನಿಯರ್‌ಗಳು ಕಣ್ಣಿದ್ದು ಕುರುಡರಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಸಂಘ ಸಂಸ್ಥೆಗಳು ಎಚ್ಚರಿಕೆ

ಶಿವಮೊಗ್ಗ: ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಗಾತ್ರದ ಹೊಂಡಗಳು ಬಿದ್ದಿದ್ದು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಮಹಾನಗರ ಪಾಲಿಕೆ ಸಾರ್ವಜನಿaಕರಿಗೆa ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿ ಸಂದರ್ಭದಲ್ಲಿ ಅನೇಕ ಕಡೆ ರಸ್ತೆಯನ್ನು ಅಗೆದಿದ್ದು, ಹಾಗೆಯೇ ಬಿಟ್ಟಿದ್ದಾರೆ. ಇಂಟರ್‌ಲಾಕ್ ಹಾಕಿದ್ದು, ರಸ್ತೆಗಿಂತ ಒಂದು ಅಡಿ ಕೆಳಗೆ ಹೋಗಿದ್ದು, ಇದು ಸ್ಮಾರ್ಟ್ಸಿಟಿಯ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ನಗರದ ಎಲ್.ಎಲ್.ಆರ್. ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸಾಗರ ರಸ್ತೆ, ಸೇರಿದಂತೆ ಹಲವೆಡೆ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯಗಳಿಗೆ ಬೀಗಮುದ್ರೆ ಹಾಕಿದ್ದಾರೆ. ಹಾಗೆಯೇ ಕನ್ಸರ್ ವೆನ್ಸಿಗಳನ್ನು ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದರೂ ಅದರ ಉದ್ದೇಶ ಈಡೇರಿಲ್ಲ. 

ನಗರದ ನೆಹರು ರಸ್ತೆ, ದುರ್ಗಿಗುಡಿ ಮೊದಲಾದ ಕಡೆ 12ಕ್ಕೂ ಹೆಚ್ಚು ಕನ್ಸರ್ ವೆನ್ಸಿಗಳು ಸರಿಯಾಗಿ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಶೌಚಾಲಯಗಳು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿಲ್ಲ. ದ್ವಿಚಕ್ರವಾಹನ ನಿಲುಗಡೆಗಾಗಿ ಈ ಕನ್ಸರ್ ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಫುಟ್‌ಪಾತ್‌ಗಳು ಬಹುತೇಕ ಬೀದಿ ಬದಿ ವ್ಯಾಪಾರಸ್ಥರು ಅತಿಕ್ರಮಣ ಮಾಡಿದ್ದಾರೆ. ಫುಟ್‌ಪಾತ್‌ಗಳಿಗೆ ಹಾಕಿದ ಲಾಕಿಂಗ್ ಟೈಲ್ಸ್ ಗಳು ಕಿತ್ತು ಹೋಗಿ ಗುಂಡಿ ಬಿದ್ದು, ಓಡಾಡದಂತಾಗಿದೆ. 

ನೂರಾರು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಿದ ಸ್ಮಾಟ್‌ಸಿಟಿ ಯೋಜನೆ ಶೇ. 75 ರಷ್ಟು ಹಳ್ಳ ಹಿಡಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ನಗರ ನೀರು ಸರಬರಾಜು ಮಂಡಳಿಯು ನಗರದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿ ತೋಡುತ್ತಿದ್ದು, ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದು, ದ್ವಿಚಕ್ರವಾಹನ ಸವಾರರಿಗೆ ಅಪಘಾತಕ್ಕೆ ಕಾರಣವಾಗುತ್ತಿದೆ. ಪೈಪ್‌ಲೈನ್ ಸರಿಪಡಿಸಲು ತೆಗೆದ ಗುಂಡಿಗಳನ್ನು ಎರಡು ತಿಂಗಳಾದರೂ ಮುಚ್ಚುವುದಿಲ್ಲ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಗರದಲ್ಲಿ ಇದೆಯೋ ಅಥವಾ ಸತ್ತು ಹೋಗಿದೆಯೋ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಾಲಿಕೆ ವಾರ್ಡ್ ಇಂಜಿನಿಯರ್‌ಗಳು ಕಣ್ಣಿದ್ದು ಕುರುಡರಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೇ ವರ್ಷ ಕಳೆದಿದ್ದು, ಅಧಿಕಾರಿಗಳದ್ದೇ ಅಂಧಾ ದರ್ಬಾರ್ ಆಗಿದೆ. ಕೂಡಲೇ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅನೇಕ ಸಂಘ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Exit mobile version