ಶಿವಮೊಗ್ಗ,ನ.22: ರಾಜ್ಯ ಸರ್ಕಾರ ರೇಷನ್ ಕಾರ್ಡ್ ಬಗ್ಗೆ ಗೊಂದಲ ಮೂಡಿಸಿದ್ದು, ಬಡವರು ಪರಿತಪಿಸುವಂತಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಪಿಎಲ್ ಕಾರ್ಡ್‍ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೊಂದಲ ಹುಟ್ಟಿಸುತ್ತಿದೆ. ಗೊಂದಲ ಪರಿಹಾರ ಮಾಡುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡಬೇಕಾಗಿದೆ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಮುನಿಯಪ್ಪನವರು ವಾರದಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಬಗೆಹರಿಸದಿದ್ದರೆ ಬಡವರನ್ನು ಸಂಘಟಿಸಿ ರಾಷ್ಟ್ರಭಕ್ತರ ಬಳಗದಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿರು.
ರಾಜ್ಯ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿದಾರರ ಕಾರ್ಡ್ ರದ್ದುಮಾಡಿದರೆ ಬೇಸರವಿಲ್ಲ. ಆದರೆ ಬಡವರ ಕಾರ್ಡ್‍ನ ಸುದ್ದಿಗೆ ಬಂದರೆ ಪರಿಣಾಮ ಸರಿಇರುವುದಿಲ್ಲ. ಬಡವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ವೃದ್ಧಾಪ್ಯ ವೇತನ, ರೇಷನ್, ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳಿಗೆ ರೇಷನ್ ಕಾರ್ಡ್ ರದ್ದುಮಾಡುವುದರಿಂದ ತೊಂದರೆಯಾಗಲಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಗಮನಹರಿಸಬೇಕು. ನಮ್ಮ ಜಿಲ್ಲೆಯಲ್ಲಿ 3.80ಲಕ್ಷ ಬಿಪಿಎಲ್ ಕಾರ್ಡ್‍ಗಳಿವೆ,2 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್‍ಗಳು ರದ್ದಾಗಿವೆ. ಕೇಂದ್ರ ಸರ್ಕಾರದ ನೀತಿಯಿಂದ ನಮಗೆ ಸಮಸ್ಯೆ ಆಗಿದೆ ಎಂದು ಕೇಂದ್ರದ ಮೇಲೆ ತಪ್ಪು ಹೊರಿಸುತ್ತಿದ್ದಾರೆ. ಶ್ರೀಮಂತರನ್ನು ಹುಡುಕಿ ನಿಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಿ, ಆದರೆ ಬಡವರ ಹೊಟ್ಟೆ ಮೇಲೆ ಏಕೆ ಹೊಡೆಯುತ್ತಿರ ಎಂದು ಪ್ರಶ್ನೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ ಈ ಸ್ವತ್ತು ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದು ಕಮಿಷನರ್‍ಗೆ ಗೊತ್ತಿದೆಯೂ ಇಲ್ಲವೂ ಗೊತ್ತಿಲ್ಲ. ಅಧಿಕಾರಿಗಳು ದುಡ್ಡು ಹಂಚಿಕೊಂಡು ಆರಾಮಾಗಿದ್ದಾರೆ. ಆದರೆ ಜನರು ಮಾತ್ರ ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ ಚಿಕಿತ್ಸಾ ದರದ ಮೇಲೂ ಹೆಚ್ಚು ಮಾಡಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದರ ಸೂಚನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮೇಲೆ ವಿನಾಕಾರಣ ಎಫ್‍ಐಆರ್ ಹಾಕಿದರು. ಇಲ್ಲಿಯವರೆಗೂ ಏಕೋ ಆರೆಸ್ಟ್ ಮಾಡಿಲ್ಲ, ನಾನು ಕೂಡ ಆರೆಸ್ಟ್ ಮಾಡಲಿ ಅಂತ ಕಾಯುತ್ತಿದ್ದೇನೆ. ನಾನು ಎಲ್ಲಿಯೂ ಮುಸ್ಲಿಂರನ್ನು ಕೊಲ್ಲಿ ಎಂದು ಹೇಳಿಲ್ಲ. ಆದರೆ ಆ ಪರಿಸ್ಥಿತಿ ಬರುವುದೆಂಬ ಎಚ್ಚರಿಕೆ ನೀಡಿದ್ದೇ. ಮಲ್ಲಿಕಾರ್ಜುನ ಖರ್ಗೆಯವರು ಕೊಲ್ಲಿ ಎಂದು ನೇರವಾಗಿ ಹೇಳಿದ್ದರೂ ಕೂಡ ಎಫ್‍ಐಆರ್ ಇನ್ನೂ ಹಾಕಿಲ್ಲ ಎಂದು ಪ್ರಶ್ನೆ ಮಾಡಿದರು.
ವಕ್ಫ್‍ನ ವಿವಾದಗಳು ಮುಗಿದಂತೆ ಕಾಣುತ್ತಿಲ್ಲ, ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಕ್ಫ್ ಕಾಯಿದೆಗೆ ಕಾಂಗ್ರೆಸ್‍ನವರು ಬೆಂಬಲ ಕೊಡುತಿಲ್ಲ, ಮುಸ್ಲಿಂರಿಗೆ ಅನುಕೂಲವಾದರೆ ಅವರಿಗೆ ಹಾಲು ಕುಡಿದಷ್ಟು ಸಂತೋಷವಾಗುತ್ತದೆ. ವಕ್ಫ್ ಎನ್ನುವ ಪದವೇ ಈ ದೇಶದಲ್ಲಿ ಇರಬಾರದು. ಅದನ್ನು ಕಿತ್ತುಹಾಕಬೇಕು. ರೈತರು, ದೇವಸ್ಥಾನ ಮಠ ಮಂದಿರದ ಆಸ್ತಿಗಳು ಉಳಿಯಬೇಕು. ಒಂದು ವೇಳೆ ಕಾಂಗ್ರೆಸ್‍ನವರ ಶಾಲಾ ಕಾಲೇಜುಗಳು ವಕ್ಫ್ ಆಸ್ತಿ ಎಂದಾದರೆ ಅವರು ಬಿಟ್ಟುಕೊಡುತ್ತಾರ ಎಂದು ಪ್ರಶ್ನೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ 24*7 ನೀರಿನ ಸಮಸ್ಯೆ ತಲೆದೋರಿದ್ದು, ಹಳೆ ಪೈಪ್‍ನಲ್ಲಿ ನೀರು ಬಿಡುತ್ತಿಲ್ಲ, ಹೊಸ ಪೈಪ್‍ಗಳನ್ನು ಅಳವಡಿಸುವ ಕಾಮಗಾರಿ ಇನ್ನೂ ಮುಗಿಸಿಲ್ಲ. ಇದರಿಂದ ಸಾವಿರಾರು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ನಗರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ. ತೆರಿಗೆ ದುಡ್ಡ ಏನಾಯಿತು? ಬೊಮ್ಮನಕಟ್ಟೆಯ ಆಶ್ರಯ ಮನೆಗಳಿಗೆ ಖಾತೆ ಮಾಡಿಕೊಡಲು ಸಾವಿರಾರು ರೂ. ಲಂಚ ಕೇಳುತ್ತಿದ್ದಾರೆ. ಬಡವರು ಏನೂ ಮಾಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಪಾಲಿಕೆ ಬಗೆಹರಿಸದಿದ್ದರೆ ಮುಂದಿನ ಸೋಮವಾರದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.