ಶಿವಮೊಗ್ಗ,ನ.22: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮತಗಳಿಗಾಗಿ ತುಷ್ಠೀಕರಣ ಮಾಡುತ್ತ ಬಂದಿದ್ದು, ದೇಶದ ಧ್ವಜದಲ್ಲಿ ಕೇಸರಿ ಬಿಳಿ ಹಸಿರು ಇದ್ದರು ಸಹ ಹಸಿರನ್ನು ಮಾತ್ರ ಪ್ರೀತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಲೇವಡಿ ಮಾಡಿದ್ದಾರೆ.
ಅವರು ಇಂದು ರಾಜ್ಯ ಬಿಜೆಪಿಯ ಕರೆಯ ಮೇರೆಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕಿಗಾಗಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅನ್ವರ್ ಮಾಣಿಪ್ಪಾಡಿಯವರು ವಕ್ಫ್ ಹೆಸರಲ್ಲಿ ಲೂಟಿಯಾಗಿದೆ. ತನಿಖೆಯಾಗಬೇಕೆಂದು ವರದಿ ನೀಡಿದ್ದರು. ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 9 ಲಕ್ಷ ಎಕರೆಗೂ ಹೆಚ್ಚಿನ ಭೂಮಿ ವಕ್ಫ್ ಮಾಡಲಾಗಿದೆ ಯಾವುದೇ ಮಾನದಂಡವಿಲ್ಲದೆ ಮಾಡಲಾಗಿದೆ.
ರೈಲ್ವೆ, ರಕ್ಷಣಾ ಇಲಾಖೆಯಂತಹ ದೊಡ್ಡ ಇಲಾಖೆಗಳ ಆಸ್ತಿ ಬಿಟ್ಟರೆ ಈಗ ವಕ್ಫ್ ಮಂಡಳಿಯೇ ಅತಿ ದೊಡ್ಡ ಆಸ್ತಿ ಹೊಂದಿದ ಸಂಸ್ಥೆಯಾಗಿದೆ.ಗುಜರಾತ್ ಸಮೀಪ ದ್ವೀಪಗಳನ್ನು ಕಬಳಿಸಲಾಗಿದೆ. ರೈತರ ಭೂಮಿ ಸರ್ವೆ ಮಾಡಿ ಕೊಡಲು ರಾಜ್ಯ ಸರ್ಕಾರಕ್ಕೆ ಸಮಯವಿಲ್ಲ. ಆದರೆ ವಕ್ಫ್ ಭೂಮಿ ಸುಮಾರು 27 ಸಾವಿರ ಹೆಕರೆ ಸರ್ವೆ ಮಾಡಿ ಕೊಡಲು ತ್ವರಿತವಾಗಿ ಕ್ರಮಕೈಗೊಳ್ಳಲಾಗಿದೆ. ಇದು ರೈತರಿಗೆ, ಜನ ಸಾಮಾನ್ಯರಿಗೆ ಮಾಡುವ ದೊಡ್ಡ ದ್ರೋಹವಾಗಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ ಮಾತನಾಡಿ, ದೇಶ ವಿಭಾಜನೆಯಾದಾಗ ಪಾಕಿಸ್ಥಾನಕ್ಕೆ ಭಾರತದ ಜಾಗ ಮತ್ತು ಆರ್ಥಿಕ ನೆರವು ನೀಡಲಾಗಿತ್ತು. ಪಾಕಿಸ್ತಾನಕ್ಕೆ ಹೋದವರ ಆಸ್ತಿ ಇಲ್ಲಿ ಉಳಿದಿದ್ದರೆ ಅದು ಸರ್ಕಾರದ ಆಸ್ತಿಯಾಗುತ್ತದೆ. ವಕ್ಫ್ ಆಸ್ತಿಯಾಗುವುದಿಲ್ಲ. ಈಗ ಅದನ್ನು ವಕ್ಫ್ ಆಸ್ತಿ ಮಾಡಿಕೊಂಡಿದ್ದಾರೆ. ಮೋದಿಯವರು ಸಂಸದೀಯ ಜಂಟಿ ಸಮಿತಿ ರಚನೆ ಮಾಡಿ, ವಕ್ಫ್ ಕಾಯಿದೆಯ ಬಗ್ಗೆ ವ್ಯಾಪಕ ಚರ್ಚೆಗೆ ಅವಕಾಶ ನೀಡಿದ್ದಾರೆ. ಜನಜಾಗೃತಿ ಮೂಡಿಸುತ್ತಿದ್ದಾರೆ. ಧಾರ್ಮಿಕ ಕಾರಣಗಳಿಂದ ವಕ್ಫ್‍ಗೆ ದಾನ ಮಾಡಿದ ಆಸ್ತಿಯನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ಆದರೆ ವಕ್ಫ್ ಕಾಯ್ದೆಯ ದುರ್ಬಳಕೆ ಮಾಡಿ ಖಾಸಗಿ ಜಮೀನನ್ನು ವಕ್ಫ್ ಆಸ್ತಿ ಮಾಡಿದಾಗ ಸಹಜವಾಗಿ ವಿರೋಧಿಸುತ್ತಾರೆ. ವಕ್ಫ್ ಕಮಿಷನರ್ ಇದು ತನ್ನ ಆಸ್ತಿ ಎಂದು ನಿರ್ಣಯಿಸಿದರೆ ಸುಪ್ರೀಂ ಕೋರ್ಟ್‍ನಲ್ಲೂ ಪ್ರಶ್ನೆ ಮಾಡುವಾಗಿಲ್ಲ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ವಿಶೇಷ ಅಧಿಕಾರ ಹೊಂದಿದ ವಕ್ಫ್ ಕಾಯ್ದೆಯನ್ನು ಬದಲಿಸಲು ಮೋದಿ ಹೊರಟಿದ್ದಾರೆ ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ನಮ್ಮ ಶಿವಮೊಗ್ಗದಲ್ಲೇ ಪ್ರಾರ್ಥನೆಗಾಗಿ ಅವಕಾಶ ನೀಡಿದ ಜಾಗವನ್ನು ವಕ್ಫ್ ಆಸ್ತಿ ಮಾಡಿಕೊಂಡಿದ್ದಾರೆ. ವಿನಾಯಕ ಚಿತ್ರಮಂದಿರ ಬಳಿ ಇದ್ದ ಪಾಲಿಕೆ ಆಸ್ತಿಯನ್ನು ಕೂಡ ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ರಾಜ್ಯ ಸರ್ಕಾರ ಕರ್ನಾಟಕವನ್ನು ವಕ್ಫ್ ಆಸ್ತಿ ಮಾಡಲು ಹೊರಟಿದೆ. ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ಹೋದಲೆಲ್ಲ ಹೊಡೆಯುತ್ತಾರೆ ಎಂದು ಹೇಳುವುದಿಲ್ಲ, ಆದರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಿಂದೆ ರೈತರು ಸರ್ಕಾರದ ವಿರುದ್ಧ ಚಳುವಳಿ ಹಮ್ಮಿಕೊಂಡಿದ್ದರು. ಅಧಿಕಾರಿಗಳನ್ನು ಸಾಲ ವಸೂಲಾತಿಗೆ ಬಂದಾಗ ಕಟ್ಟಿಹಾಕುತ್ತಿದ್ದರು. ಅದೇ ಗತಿ ನಿಮಗೂ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.
ಚನ್ನವೀರ ದೇಸಿಕೇಂದ್ರ ಸ್ವಾಮಿ ತೊಗರ್ಸಿ ಮಠ ಅವರು ಮಾತನಾಡಿ, ಸರ್ಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಮಠ ಮಂದಿರಗಳ ಆಸ್ತಿಗಳು ವಕ್ಫ್ ಆಸ್ತಿಯಾಗಲು ಹೇಗೆ ಸಾಧ್ಯ. ನೂರಾರು ವರ್ಷಗಳ ಇತಿಹಾಸವಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ನಡೆದರೆ, ಯಾವುದೇ ಸಂದರ್ಭದಲ್ಲೂ ಎಲ್ಲಾ ಮಠಾಧೀಶರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿಳಕಿ ಶ್ರೀಗಳು, ಸೊರಬ ಜಡೆ ಮಠದ ಶ್ರೀಗಳು, ಶಿರಾಳಕೊಪ್ಪ ವಿರಕ್ತ ಮಠದ ಶ್ರೀಗಳು, ಹಾರನಹಳ್ಳಿ ರಾಮಲಿಂಗೇಶ್ವರ ಶ್ರೀಗಳು, ಶೈಣ ಭಗತ್ ಶ್ರೀಗಳು, ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪದ ಮಹಾಂತ ಶ್ರೀಗಳು,ಚೌಕಿ ಮಠದ ನೀಲಕಂಡ ಶ್ರೀಗಳು, ಶಿಕಾರಿಪುರದ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು, ಜಲ್ಲಪ್ಪ ಮಠದ ಶ್ರೀಗಳು ಸೇರಿದಂತೆ ಹಲವಾರು ಮಠದ ಶ್ರೀಗಳು ಹಾಗೂ ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಡಿ.ಎಸ್.ಅರುಣ್, ಮಾಜಿ ಶಾಸಕ ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಜ್ಞಾನೇಶ್ವರ್, ರತ್ನಾಕರ್ ಶೆಣೈ, ವೀರಭದ್ರಪ್ಪ ಪೂಜಾರ್, ಸುರೇಖಾ ಮುರಳೀಧರ್, ರಶ್ಮಿ ಶ್ರೀನಿವಾಸ್, ಶಾಂತಾ ಸುರೇಂದ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.