ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಮಾಗಮ-೨೦೨೪ ’ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ನ. ೨೩ರಂದು ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಹಾಗೂ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ಎನ್. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿ, ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಅನೇಕರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಸ್ವಂತ ಉದ್ದಿಮೆಗಳನ್ನು ನಡೆಸುತ್ತಿರುವವರ ಒತ್ತಾಸೆಯಂತೆ ನಮ್ಮೆಲ್ಲ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಸವಿಯುವುದರ ಜೊತೆಗೆ ನಮಗೆ ವಿದ್ಯೆ ಕಲಿಸಿ ನಿವೃತ್ತರಾದ ಗುರುಗಳು ಮತ್ತು ಪ್ರಾಚಾರ್ಯರನ್ನು ಭೇಟಿ ಮಾಡುವುದು ಮತ್ತು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ‍್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಕ್ರಿಯಾಶೀಲವಾಗಿ ಆಚರಿಸಲು ಮತ್ತು ನಾವು ವಿದ್ಯೆ ಕಲಿತ ಕಾಲೇಜಿಗೆ ನಮ್ಮಿಂದ ಆದಷ್ಟು ಅಳಿಲು ಸೇವೆ ಮಾಡುವ ಉದ್ದೇಶದಿಂದ ಹಳೆಯ ವಿದ್ಯಾರ್ಥಿಗಳು ಒಂದೆಡೆ ಕಾಲೇಜಿನಲ್ಲಿ ಸೇರುತ್ತಿದ್ದಾರೆ ಎಂದರು.
ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಿರುವ ಸಾಧಕರನ್ನು ಗುರುತಿಸಿ ಅವರನ್ನು ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಅತಿಥಿಗಳನ್ನಾಗಿ ಕರೆಯುವುದು ಹಾಗೂ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಈ ಕಾರ‍್ಯಕ್ರಮಕ್ಕೆ ಈಗಾಗಲೇ ೪೦೦ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಲು ತಮ್ಮ ಹೆಸರನ್ನು ಸ್ವ ಇಚ್ಚೇಯಿಂದ ನೋಂದಾಯಿಸಿದ್ದು, ಅವರಿಂದ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ ಮತ್ತು ಪರಸ್ಪರ ಒಬ್ಬರೊನ್ನೊಬ್ಬರು ಪರಿಚಯ ಮಾಡಿಕೊಳ್ಳುವ ಸಂವಾದ ಸಹ ನಡೆಯಲಿದೆ ಎಂದರು..
ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಕಾರ‍್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಘದ ಗೌರವಾಧ್ಯಕ್ಷರಾದ ಡಿ.ಹೆಚ್. ಶಂಕರಮೂರ್ತಿ, ಕುವೆಂಪು ವಿವಿ ಕುಲಸಚಿವರಾದ ಮಂಜುನಾಥ್ ಎ.ಎಲ್., ಡಾ. ಗೋಪಿನಾಥ್ ಎಸ್.ಎಂ. ಆಗಮಿಸಲಿದ್ದು, ಸಂಘದ ನಿಕಟ ಪೂರ್ವ ಅಧ್ಯಕ್ಷೆ ಡಾ. ವಾಗ್ದೇವಿ ಹೆಚ್.ಎಂ., ಉಪಾಧ್ಯಕ್ಷ ಕೆ.ಬಿ. ಅಶೋಕ್ ನಾಯ್ಕ್, ಸಹಕಾರ್ಯದರ್ಶಿ ಉಮೇಶ್ ಶಾಸ್ತ್ರಿ ಉಪಸ್ಥಿತರಿದ್ದು, ಪ್ರೊ. ರಾಜೇಶ್ವರಿ ಎನ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ‍್ಯದರ್ಶಿ ಡಾ. ನಾಗರಾಜ ಪರಿಸರ, ಪ್ರಮುಖರಾದ ಉಮೇಶ್ ಶಾಸ್ತ್ರಿ, ಡಾ. ಲತಾ ಕೆ.ಪಿ., ನಾಗರಾಜ್ ಎಸ್. ನೇರಿಗೆ, ಶ್ರೀಧರ್ ಉಪಸ್ಥಿತರಿದ್ದರು.