ಶಿವಮೊಗ್ಗ ನವೆಂಬರ್ 20, : ವಿಶ್ವ ಶೌಚಾಲಯ ದಿನದ ಅಂಗವಾಗಿ ನ.19 ರಿಂದ ಡಿ.10 ರವರೆಗೆ ಜಿಲ್ಲೆಯಾದ್ಯಂತ ‘ನಮ್ಮ ಶೌಚಾಲಯ ನಮ್ಮ ಗೌರª’ ಎಂಬ ವಿಶೇಷ ಆಂದೋಲನವನ್ನು ಏರ್ಪಡಿಸಲಾಗಿದ್ದು ಎಲ್ಲರೂ ಈ ಆಂದೋಲನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಕೋರಿದರು.
ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ‘ನಮ್ಮ ಶೌಚಾಲಯ ನಮ್ಮ ಗೌರª’ ಆಂದೋಲನ ಕುರಿತಾದ ಪೋಸ್ಟರ್‌ನ್ನು ಅವರು ಇತರೆ ಅಧಿಕಾರಿಗಳು ಮತ್ತು ಫಲಾನುಭವಿಗಳೊಂದಿಗೆ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದೇ ವೇಳೆ ವೈಯಕ್ತಿಕ ಶೌಚಾಲಯ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಮೂಲಕ ಶಿಘ್ರವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ತಿಳಿಸಿದರು.
ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಶ್ವ ಶೌಚಾಲಯ ಮತ್ತು ವಿಶ್ವಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ ‘ನಮ್ಮ ಶೌಚಾಲಯ-ನಮ್ಮ ಗೌರವ’ ಎಂಬ ಶೀರ್ಷಿಕೆ ಹಾಗೂ ‘ಅಂದದ ಶೌಚಾಲಯ-ಆನಂದದ ಜೀವನ’ ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಆಂದೋಲನ ಆಯೋಜಿಸಲಾಗುತ್ತಿದೆ. ವಿಶೇಷ ಆಂದೋಲನದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ವೈಯಕ್ತಿಯ ಶೌಚಾಲಯ ಸೌಂದರ್ಯೀಕರಣ ಸ್ಪರ್ಧೆ: ಶೌಚಾಲಯ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು ಹಾಗೂ ಗೃಹ ಶೌಚಾಲಯಗಳನ್ನು ನಿರಂತರವಾಗಿ ಬಳಸುವ ಫಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪರ್ಧೆ ಆಯೋಜಿಸಿ ಅತ್ಯುತ್ತಮ ವೈಯಕ್ತಿಕ ಗೃಹಶೌಚಾಲಯಗಳನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು. ಸಮುದಾಯ ಶೌಚಾಲಯಗಳನ್ನು ಶುಚಿತ್ವಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅವುಗಳ ಸೌಂದರ್ಯೀಕರಣಕ್ಕೆ ಸ್ವರ್ಧೆ ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಥಮ ರೂ.8000, ದ್ವಿತೀಯ 6000, ತೃತೀಯ 5000, ನಾಲ್ಕನೇ 3000 ಮತ್ತು ಐದನೇ ಬಹುಮಾನ 2000 ನಗದು ಬಹುಮಾನ ನೀಡಲಾಗುವುದು.
ತಾಲ್ಲೂಕು ಮಟ್ಟದಲ್ಲಿ ವಿಜೇತರಿಗೆ ಪ್ರಥಮ ರೂ.5000, ದ್ವಿತೀಯ 3000, ತೃತೀಯ 2000 ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಕೆ.ಆರ್, ಸಹಾಯಕ ಕಾರ್ಯದರ್ಶಿ, ಶಿವಮೊಗ್ಗ ಇಓ ಅವಿನಾಶ್ ಇತರೆ ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.