Site icon TUNGATARANGA

ಸಾಗರ: ಸಹಕಾರಿ ಚಳುವಳಿಯ ಭದ್ರಬೇರು ಕರ್ನಾಟಕದಲ್ಲಿದೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಸಾಗರ : ಕನ್ನಡ ನೆಲ ಸಹಕಾರಿ ಚಳುವಳಿಯ ತವರು. ಸಹಕಾರಿ ಚಳುವಳಿಯ ಭದ್ರಬೇರು ಕರ್ನಾಟಕದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಇಲ್ಲಿನ ವಿನೋಬ ನಗರದಲ್ಲಿ ಭಾನುವಾರ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ನಿರ್ಮಿಸಲಾಗಿರುವ ಅಕ್ಷಯ ಬೆಳ್ಳಿಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.


ಸಹಕಾರಿ ಕ್ಷೇತ್ರ ಜಾತಿಮತ ಪಂಥವನ್ನು ಮೀರಿದ್ದಾಗಿದೆ. ನಾನು ಸಹ ಶಿಕಾರಿಪುರದ ವೀರಶೈವ ಸಹಕಾರ ಸಂಘದ ಅಧ್ಯಕ್ಷನಾಗುವ ಮೂಲಕ ಸಹಕಾರ ಜೀವನ ಆರಂಭಿಸಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಕರ್ನಾಟಕದಲ್ಲಿ ೧೯೦೫ರಲ್ಲಿ ಸಹಕಾರ ಚಳುವಳಿ ಪ್ರಾರಂಭವಾಯಿತು. ಸಹಕಾರಿ ಕ್ಷೇತ್ರ ಅತ್ಯಂತ ವಿಸ್ತಾರವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಸಹಕಾರಿ ಸಂಸ್ಥೆಯೊಂದು ಉನ್ನತ ಸ್ಥಾನಕ್ಕೆ ಹೋಗುತ್ತಿದೆ ಎಂದರೆ ಸ್ಥಳೀಯವಾಗಿ ಹೆಚ್ಚು ಜನರಿಗೆ ಅನುಕೂಲವಾಗುತ್ತಿದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬಹುದು. ಅಕ್ಷಯಸಾಗರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.


ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಪಂಚದಲ್ಲಿ ಅತಿಹೆಚ್ಚು ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಕ್ಷೇತ್ರಕ್ಕೆ ಅತಿಹೆಚ್ಚ ಸಾಲ ಸೌಲಭ್ಯ ನೀಡಿರುವ ಹೆಗ್ಗಳಿಕೆ ಸಹಕಾರಿ ಕ್ಷೇತ್ರದ್ದಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಅಭ್ಯುದಯಕ್ಕೆ ಅತಿಹೆಚ್ಚು ಒತ್ತು ನೀಡಿದ್ದರು. ಭ್ರಷ್ಟಾಚಾರ ಇಲ್ಲದೆ ಇದ್ದರೆ ಸಹಕಾರಿ ಕ್ಷೇತ್ರ ಅತಿ ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಅಕ್ಷಯಸಾಗರ ಸೌಹಾರ್ದ ಉದಾಹರಣೆಯಾಗಿದೆ ಎಂದು ಹೇಳಿದರು.


ಸಂಸ್ಥೆಯ ದಿನವಹಿ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಸಂಸ್ಥೆಯೊಂದು ೧೫೦ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ ಎಂದರೆ ಸಂಸ್ಥೆಯ ಆರ್ಥಿಕ ಶಕ್ತಿ ಸದೃಢವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅಗತ್ಯ ಸಂದರ್ಭದಲ್ಲಿ ಸಾಲಸೌಲಭ್ಯವನ್ನು ಸಹಕಾರಿ ಸಂಸ್ಥೆಗಳು ನೀಡುತ್ತವೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಅನೇಕ ದಾಖಲೆ ಕೇಳಿ ಅಲೆದಾಡಿಸುತ್ತಾರೆ. ಸಹಕಾರಿ ಸಂಸ್ಥೆಯನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.


ಶ್ರೀಶೈಲಪೀಠದ ೧೦೦೮ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಾತಿ, ಲಿಂಗ, ವರ್ಣ, ವರ್ಗ ಸಮಾನತೆಗಿಂತ ಆರ್ಥಿಕ ಸಮಾನತೆ ಅತಿಮುಖ್ಯವಾಗಿದೆ. ಎಲ್ಲ ರಂಗಗಳು ಸಕ್ರಿಯಗೊಳ್ಳಬೇಕಾದರೆ ಆರ್ಥಿಕ ಸಮಾನತೆ ಮೊದಲು ಬರಬೇಕು. ದೇಶದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಸಹಕಾರಿ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಶ್ರೀಮಂತರಿಂದ ಹಣವನ್ನು ಠೇವಣಿಯಾಗಿ ಪಡೆದು, ಬಡವರಿಗೆ ಸಾಲ ರೂಪದಲ್ಲಿ ನೀಡಿ ಅವರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಸಹಕಾರಿ ಕ್ಷೇತ್ರ ಮಾಡುತ್ತಿದೆ. ಬೆಳ್ಳಿಹಬ್ಬದಂತಹ ಸಂದರ್ಭದಲ್ಲಿ ಸುಸಜ್ಜಿತ ಭವನ ಸಮಾಜಕ್ಕೆ ನೀಡುತ್ತಿರುವುದು ಅಭಿನಂದಾರ್ಹ ಸಂಗತಿ ಎಂದು ಹೇಳಿದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬದಲಾದ ದಿನಮಾನಗಳಲ್ಲಿ ಸೌಹಾರ್ದತೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತಾನೊಬ್ಬ ಸುಖವಾಗಿದ್ದರೆ ಸಾಕು ಎನ್ನುವ ಯೋಚನೆ ಜನರ ಮನಸ್ಸಿನಲ್ಲಿದೆ. ಎಲ್ಲರೂ ಚೆನ್ನಾಗಿರಬೇಕು ಎಂದು

ಬಯಸುವುದು ಸೌಹಾರ್ದ ಸಹಕಾರಿ ಸಂಸ್ಥೆಗಳು ಎನ್ನುವುದು ಗಮನಾರ್ಹ ಸಂಗತಿ. ಅಕ್ಷಯ ಸಾಗರ ಸೌಹಾರ್ದತೆ ಮನೋಭಾವ ಬಿತ್ತುವ ಕೆಲಸ ಮಾಡಿಕೊಂಡು ಬರುತ್ತಿದೆ. ಇಪ್ಪತ್ತೈದು ವರ್ಷಗಳ ನೆನಪಿಗಾಗಿ ಅತ್ಯಂತ ಸುಂದರವಾದ ಬೆಳ್ಳಿಭವನ ನಿರ್ಮಿಸಿರುವುದು ಸಂಸ್ಥೆಯ ಆರ್ಥಿಕ ದೃಢತೆಗೆ ಸಾಕ್ಷಿಯಾಗಿದೆ ಎಂದರು.


ವೇದಿಕೆಯಲ್ಲಿ ಮಳಲಿಮಠದ ಶ್ರೀಗಳು, ಜಡೆಮಠದ ಶ್ರೀಗಳು, ಕೋಣಂದೂರು ಬ್ರಹನ್ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು, ಕ್ಯಾಸನೂರು ಮಠದ ಶ್ರೀಗಳು, ಮಾಜಿ ಸಚಿವ ಹರತಾಳು ಹಾಲಪ್ಪ, ನಂಜನಗೌಡ್ರು, ಎ.ಆರ್.ಪ್ರಸನ್ನಕುಮಾರ್, ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಬಿ.ಎ.ಇಂದೂಧರ ಗೌಡ, ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಎಂ.ಎಚ್.ಗೌಡ್ರು, ಬಸಪ್ಪ ಗೌಡ್ರು ಕೆರೋಡಿ, ಜಗದೀಶ್ ಒಡೆಯರ್, ಎಂ.ಎಸ್.ಗೌಡರ್ ಇನ್ನಿತರರು ಹಾಜರಿದ್ದರು. ನಂದಿನಿ ಬಸವರಾಜ್ ಪ್ರಾರ್ಥಿಸಿದರು. ಅಕ್ಷಯಸಾಗರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಜಿ.ದಿನೇಶ್ ಬರದವಳ್ಳಿ ಸ್ವಾಗತಿಸಿದರು. ಟಿ.ಡಿ.ಮೇಘರಾಜ್ ಪ್ರಾಸ್ತಾವಿಕ ಮಾತನಾಡಿದರು. ಲೋಕನಾಥ್ ಬಿಳಿಸಿರಿ ವಂದಿಸಿದರು. ಸಮನ್ವಯ ಕಾಶಿ ನಿರೂಪಿಸಿದರು. ನಂತರ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version