Site icon TUNGATARANGA

ಸರ್ಕಾರಿ ಶಾಲೆಗಳಲ್ಲಿ ಓದುವುದೇ ಒಂದು ಹೆಮ್ಮೆ ದಶಮಾನೋತ್ಸವದ ಸಂಭ್ರಮದಲ್ಲಿ :ಶಾಸಕಿ ಬಲ್ಕೀಷ್ ಬಾನು

ಶಿವಮೊಗ್ಗ: ನ.15 :

ಸರ್ಕಾರಿ ಶಾಲೆಗಳಲ್ಲಿ ಓದುವುದೇ ಒಂದು ಹೆಮ್ಮೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಹೇಳಿದರು.

ಅವರು ಇಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದಶಮಾನೋತ್ಸವದ ಸಂಭ್ರಮದಲ್ಲಿ ಜಿಲ್ಲಾ ಭಾರತ್ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಸಾಂಸ್ಕೃತಿಕ, ಕ್ರೀಡೆ, ರೆಡ್‌ಕ್ರಾಸ್, ರೇಂಜರ್ಸ್ ಹಾಗೂ ಇತರ ವೇದಿಕೆಗಳ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕಾಲೇಜುಗಳೆಂಬ ಕೀಳರಿಮೆ ಇಂದು ಮರೆಯಾಗಬೇಕಾಗಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಅತ್ಯುತ್ತಮ ಮಟ್ಟದ ಶಿಕ್ಷಣ ಸಿಗುತ್ತಿದೆ. ಅದರಲ್ಲೂ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿ, ಧರ್ಮದವರಿಗೆ ಸರ್ಕಾರಿ ಕಾಲೇಜುಗಳ ವರದಾನವಾಗಿವೆ. ಎಲ್ಲಾ ಸೌಲಭ್ಯಗಳು ಕೂಡ ಹೆಚ್ಚುತ್ತಿವೆ. ಇವನ್ನು ಬಳಸಿಕೊಂಡು ನಮ್ಮ ವಿದ್ಯಾರ್ಥಿಗಳು ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಅದರಲ್ಲೂ ವಿದ್ಯಾರ್ಥಿನಿಯರು ಆಕರ್ಷಣೆಗಳಿಗೆ ಒಳಗಾಗಬೇಡಿ, ಬದುಕು ಬಹಳ ದೊಡ್ಡದಿದೆ. ಅದರಲ್ಲೂ ಸ್ವಾಭಿಮಾನ ಬಿಡಬೇಡಿ. ಸರಿ ತಪ್ಪುಗಳನ್ನು ನಿರ್ಧರಿಸಿಕೊಳ್ಳುವ ವಯಸ್ಸು ನಿಮ್ಮದು. ತಂದೆ ತಾಯಿ ಮತ್ತು ಗುರುವಿನ ಋಣಗಳನ್ನು ಮರೆಯಬೇಡಿ. ಎಂತಹ ಸಂದರ್ಭ ಬಂದರೂ ವ್ಯಾಸಂಗದಿಂದ ದೂರವಾಗಬೇಡಿ ಎಂದರು.

ಮಂಕುತಿಮ್ಮನ ಕಗ್ಗದ ಖ್ಯಾತ ವ್ಯಾಖ್ಯಾನಕಾರ ಜಿ.ಎಸ್. ನಟೇಶ್ ಮಾತನಾಡಿ, ಬೆಳಕು ನಮ್ಮ ದುಃಖಗಳನ್ನು ಮರೆಸುತ್ತದೆ. ನಮ್ಮ ಗುರಿ ಯಾವಾಗಲೂ ದೊಡ್ಡದಿರಬೇಕು. ಗುರಿಯ ಹಿಂದೆ ಗುರುಗಳು ಇದ್ದಾರೆ ಎನ್ನುವುದನ್ನು ಮರೆಯಬಾರದು. ಬದುಕನ್ನು ರೂಪಿಸಲು ನಮಗೆ ಸಂಕಲ್ಪ ಮುಖ್ಯ. ನಮಗೆ ಬಂದಿರುವ ಅವಕಾಶಗಳನ್ನು ನಾವು ಗೆಲ್ಲಬೇಕು. ಆತ್ಮವಿಶ್ವಾಸ ಹೆಚ್ಚಿದಾಗ ಮಾತ್ರ ಸ್ವಾವಲಂಬಿ ಬದುಕನ್ನು ಕಟ್ಟಕೊಳ್ಳಲು ಸಾಧ್ಯ ಎಂದರು.

ಸರ್ಕಾರಿ ಕಾಲೇಜುಗಳೆಂಬ ಕೀಳರಿಮೆ ಬೇಡ. ಶೈಕ್ಷಣಿಕ, ಸಾಮಾಜಿಕ ಶಿಸ್ತನ್ನು ಇದು ಕಲಿಸುತ್ತದೆ. ಶಿಕ್ಷಣ ಜ್ಞಾನದ ಜೊತೆಗೆ ಮೌಲ್ಯವನ್ನು ಬಿತ್ತಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಅದರಲ್ಲೂ ನಮ್ಮ ವಿದ್ಯಾರ್ಥಿನಿಯರು ಎಲ್ಲಾ ವಿಷಯದಲ್ಲೂ ಅಚ್ಚುಕಟ್ಟಾಗಿರುತ್ತಾರೆ. ಹಾಗಾಗಿ ಪ್ರತಿವರ್ಷ ಫಲಿತಾಂಶ ಬಂದಾಗ ವಿದ್ಯಾರ್ಥಿನಿಯರೇ ಮೇಲುಗೈ ಎಂಬುದನ್ನು ನಾವು ನೋಡುತ್ತೇವೆ. ನೀವು ಎಷ್ಟೇ ಎತ್ತರಕ್ಕೆ ಏರಿದರೂ ಕಲಿಸಿದ ಗುರುಗಳನ್ನು ಮರೆಯಬೇಡಿ, ಸ್ವಾರ್ಥವಿಲ್ಲದ ಸೇವೆ ಸಲ್ಲಿಸುವುದು ಅಪ್ಪ ಅಮ್ಮನ ಜೊತೆಗೆ ಗುರುಗಳು ಮಾತ್ರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಯು.ಎಸ್. ರಾಜಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಒ.ಎಂ. ಉಮಾಶಂಕರ್, ಜಿ.ಸಿ. ಪ್ರಸಾದ್ ಕುಮಾರ್, ಡಾ. ರಂಗನಾಥರಾವ್ ಹೆಚ್. ಕರಾಡ, ಡಾ. ನವೀನ್, ಬಿ.ಹೆಚ್. ವಾಸಪ್ಪ, ಬಸವರಾಜಪ್ಪ, ಉಮಾಪತಿ, ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಮಾಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲ. ಕಳೆದ 10 ವರ್ಷಗಳಿಂದ ಯಾವ ಸರ್ಕಾರಗಳು ಕೂಡ ಕಾಲೇಜಿಗೆ ಸ್ವಂತ ಕಟ್ಟಡ ನೀಡಿಲ್ಲ. ಭರವಸೆಗಳು ಮಾತ್ರ ಆಗಿವೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್,, ಡಾ. ಧನಂಜಯ ಸರ್ಜಿ ಅವರ ಸಹಕಾರದೊಂದಿಗೆ ಈ ಕಾಲೇಜಿಗೆ ನಿವೇಶನ ನೀಡಲು ಪ್ರಯತ್ನಿಸುವೆ.

-ಬಲ್ಕೀಶ್ ಬಾನು

Exit mobile version