Site icon TUNGATARANGA

ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ರೂ. 5ಲಕ್ಷ ಪರಿಹಾರ ನೀಡುವಂತೆ ಮನವಿ

ಸಾಗರ : ಬೆಂಗಳೂರು ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವನಶ್ರೀ ವಿದ್ಯಾಸಂಸ್ಥೆ ಮುಖ್ಯಸ್ಥ ಮಂಜಪ್ಪ ಎಂಬುವರನ್ನು ಬಂಧಿಸಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ರೂ. ೫ ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಮಂಜಪ್ಪ ಎಂಬುವವರು ಪಟ್ಟಣದ ವರದಹಳ್ಳಿ ರಸ್ತೆಯಲ್ಲಿರುವ ವನಶ್ರೀ ವಸತಿ ಶಾಲೆಯ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಶಾಲೆಗೆ ಹೊರರಾಜ್ಯ ಮತ್ತು ನಮ್ಮ ರಾಜ್ಯದ ಬೇರೆಬೇರೆ ಭಾಗಗಳಿಂದ ಬಡ ಮಕ್ಕಳನ್ನು ಕರೆದುಕೊಂಡು ಬಂದು ಊಟ ವಸತಿ ಶಿಕ್ಷಣ ಕೊಡುವ ನೆಪದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


ಹಿಂದೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದ ಮಂಜಪ್ಪ ಪ್ರತಿಷ್ಟಿತ ಸಮುದಾಯದವರಾಗಿದ್ದು ರಾಜಕೀಯವಾಗಿ, ಆರ್ಥಿಕವಾಗಿ, ಪ್ರಬಲವಾಗಿದ್ದು ಬೇಗ ಬಚಾವಾಗಿ ಹೊರಗೆ ಬಂದಿದ್ದಾರೆ. ಇತ್ತೀಚೆಗೆ ಅದೇ ಚಾಳಿಯನ್ನು ಮುಂದುವರೆಸಿಕೊಂಡು ಬಂದಿದ್ದು ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಸುಮಾರು ನಾಲ್ಕು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿರುವುದು ತಿಳಿದು ಬಂದಿದೆ. ಇಂತಹ ಪ್ರಕರಣಗಳು ಇವನ ವಸತಿ ಶಾಲೆಯಲ್ಲಿ ಸಾಕಷ್ಟು ನಡೆದಿದೆ ಎಂದು ಮನವಿಯಲ್ಲಿ ದೂರಲಾಗಿದೆ.


ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಪೋಷಕರು ಬಂದು ಗಲಾಟೆ ಮಾಡಿದಾಗ ಪೊಲೀಸರು ಬಂಧಿಸುತ್ತಾರೆ ಎಂದು ಹೆದರಿ ಮಂಜಪ್ಪ ಪರಾರಿಯಾಗಿರುತ್ತಾರೆ. ಈತನಕ ಮಂಜಪ್ಪ ಎಲ್ಲಿದ್ದಾನೆ ಎಂಬ ಸುಳಿವು ಸಹ ಇರುವುದಿಲ್ಲ. ದಲಿತ ಹೆಣ್ಣುಮಕ್ಕಳ ಶೋಷಣೆ ಮಾಡುತ್ತಿರುವ ಮಂಜಪ್ಪನನ್ನು ಗಲ್ಲಿಗೇರಿಸಬೇಕು. ನೊಂದ ಬಾಲಕಿಯ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಚಾಲಕ ನಾಗರಾಜ್, ನಾರಾಯಣ ಮಂಡಗಳಲೆ, ಲಲಿತಮ್ಮ, ಶಿವಪ್ಪ, ನಾರಾಯಣ ಅರಮನೆಕೇರಿ, ಗೋಳಗೋಡು ನಾರಾಯಣ, ಮಂಜು ಖಂಡಿಕಾ, ನಾಗರತ್ನ, ಚಂದ್ರಪ್ಪ, ಮುರುಗೆಶ್, ರಾಮಣ್ಣ ಹಸಲರು ಇನ್ನಿತರರು ಹಾಜರಿದ್ದರು

Exit mobile version