Site icon TUNGATARANGA

ಮಹಾತ್ಮರ ಸತ್ಸಂಗದಿಂದ ಪಾಪಕರ್ಮ ದೂರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಮಹಾತ್ಮರ ದಿವ್ಯಸತ್ಸಂಗದಿಂದ ನಮ್ಮ ಪಾಪ ಕರ್ಮಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್‌ ವತಿಯಿಂದ ಇಲ್ಲಿನ ವಿನೋಬನಗರ ಕಲ್ಲಳ್ಳಿಯ ಬಸವಮಂಟಪದಲ್ಲಿ ಸೋಮವಾರ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಲಿಂಗೈಕ್ಯಗೊಂಡ ಸುಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಶರಣಮೇಳ ಒಂದು ಪವಿತ್ರ ಮೇಳವಾಗಿದ್ದು, ಅದು ನಮ್ಮ ಜನ್ಮಾಂತರಗಳ ಪಾಪಕರ್ಮಗಳನ್ನು ಶುದ್ಧೀಕರಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿ, ಆಧ್ಯಾತ್ಮಪೂರ್ಣ ಸಂದೇಶಗಳನ್ನು ನಮ್ಮ ಯುವಜನಾಂಗಕ್ಕೆ ತಿಳಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಸುಭದ್ರಗೊಳಿಸುವ ಕಾರ್ಯ ಮಾಡುತ್ತಿದೆ’ ಎಂದದರು.

ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ  ಡಾ.ಗಂಗಾದೇವಿ ಮಾತಾಜಿ ಮಾತನಾಡಿ,  ‘ಗುರುಬಸವಣ್ಣನವರ ತಪೋಸ್ಥಾನ, ವಿದ್ಯಾಭೂಮಿ ಹಾಗೂ ಲಿಂಗೈಕ್ಯ ಸುಕ್ಷೇತ್ರವಾದ ಕೂಡಲಸಂಗಮದಲ್ಲಿ ೩೭ ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ ಶರಣಮೇಳವು ಭಕ್ತಿ ಹಾಗೂ ಜ್ಞಾನವನ್ನು ಪ್ರಧಾನವಾಗಿ ಪ್ರಸರಿಸುವ ಕಾರ್ಯ ಮಾಡುತ್ತಿದೆ. ದೇಶದ ಗಮನ ಸೆಳೆದಿರುವ ಶರಣಮೇಳ ಜನಸಮುದಾಯದಲ್ಲಿ ಬಸವತತ್ವದ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಸುಸಂಸ್ಕೃತಿಯ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಬಸವಣ್ಣನವರು ಲಿಂಗೈಕ್ಯಗೊಂಡ ಕ್ಷೇತ್ರ ಕೂಡಲಸಂಗಮ ಅವಿಮುಕ್ತ ಕ್ಷೇತ್ರವಾಗಿ ನಮ್ಮೆಲ್ಲರ ಬದುಕನ್ನು ಪಾವನಗೊಳಿಸುವುದರ ಮೂಲಕ ಪರಮಾತ್ಮನ ಸಾಕ್ಷಾತ್ಕಾರದತ್ತ ಕೊಂಡೊಯ್ಯುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಹಿರಿಯ ಸಮಾಜ ಮುಖಂಡ ಕಾಚಿನಕಟ್ಟೆ ಸತ್ಯನಾರಾಯಣ್, ರಾಷ್ಟ್ರೀಯ ಬಸವದಳ ಟ್ರಸ್ಟ್ ಗೌರವಾಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಮೂಲಿಮನಿ, ಶರಣ ಬಾಳಾನಂದ ಮುಂತಾದವರಿದ್ದರು.

ಟ್ರಸ್ಟ್‌ ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸಾನ್ವಿ ವಚನ ನುಡಿನಮನ ಸಲ್ಲಿಸಿದರು.

Exit mobile version