Site icon TUNGATARANGA

ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ :ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್

ಸೊರಬ: ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ ಎಂದು ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು. 

ಸೋಮವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಛಲವಾದಿ ಸಮಾಜದ ವತಿಯಿಂದ ಹಮ್ಮಿಕೊಂಡ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಅವರು ನೀಡಿದರು. 

ಗೃಹಿಣಿಯಾಗಿದ್ದ ಓಬವ್ವ ತನ್ನ ಸಾಹಸ ಮತ್ತು ಧೈರ್ಯದ ಮೂಲಕ ಒನಕೆ ಹಿಡಿದು ಶತ್ರು ಸೈನ್ಯದ ಸೈನಿಕರನ್ನು ಸೆದೆಬಡಿದರು. ಇದು ದೇಶದ ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಶತ್ರುಗಳ ಎದುರು ಉಗ್ರವಾಗಿ ನಿಂತು ಅನುಕರಣೀಯವಾದ ಧೈರ್ಯವನ್ನು ತೋರಿದರು. ಒನಕೆ ಓಬವ್ವನ ಧೈರ್ಯ ಮತ್ತು ಸಾಹಸ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗೆ ಮಾದರಿಯಾಗಿದೆ ಎಂದರು. 

ಸಿಪಿಐ ಎಲ್. ರಾಜಶೇಖರ್ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಒನಕೆ ಓಬವ್ವ ಒಂದು ಜಾತಿಗೆ ಸೀಮಿತರಲ್ಲ. ಯಾವುದೇ ಆಸ್ಥಾನದ ರಾಣಿಯಾಗಿರದೇ ಸಾಮಾನ್ಯ ಮಹಿಳೆಯಾಗಿ, ಕೋಟೆಯ ಕಾವಲುಗಾರನ ಪತ್ನಿಯಾಗಿ ತೋರಿದ ಧೈರ್ಯ ಅವಿಸ್ಮರಣೀಯವಾದುದು. ಅವರ ಧೈರ್ಯ, ಸಾಹಸ ಮತ್ತು ಆದರ್ಶಗಳನ್ನು ಮಹಿಳೆಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಚಿತ್ರದುರ್ಗದ ಸಮೀಪದ ಅಗಸನಕಲ್ಲು ಎಂಬ ಗ್ರಾಮದಲ್ಲಿ ಒಬವ್ವನನ್ನು ಪೂಜನೀಯವಾಗಿ ಗೌರವಿಸಲಾಗುತ್ತಿರುವುದನ್ನು ಕಾಣಬಹುದಾಗಿದೆ ಎಂದರು. 

ವೀರ ವನಿತೆ ಒನಕೆ ಓಬವ್ವ ಅವರ ಜೀವನ ಮತ್ತು ಸಾಹಸದ ಕುರಿತು ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಉಪನ್ಯಾಸ ನೀಡಿದರು. ಛಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ತಾಲೂಕು ಛಲವಾದಿ ಸಮಾಜದ ಮಂಜಪ್ಪ ಹಸವಿ, ತಾಲೂಕು ಕಚೇರಿಯ ಶಿರಸ್ತೆದಾರ್ ಎಸ್. ನಿರ್ಮಲಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಗುರುರಾಜ್, ದಲಿತ ಮುಖಂಡ ಶ್ಯಾಮಣ್ಣ ತುಡನೀರು, ತಾಲೂಕು ಕಚೇರಿಯ ನಾಗರತ್ನಾ, ವಿಕ್ರಂ ಹೆಬ್ದಾರ್, ಬಿ.ಜೆ. ವಿನೋದ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸುರೇಶ್ ಸ್ವಾಗತಿಸಿ, ಬಿ.ಜೆ. ವಿನೋದ್ ವಂದಿಸಿ, ಎಸ್. ರಾಘವೇಂದ್ರ ನಿರೂಪಿಸಿದರು.

Exit mobile version