Site icon TUNGATARANGA

ನ.6 ರಂದು ನಿರ್ಮಲತುಂಗಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಗೆ ಚಾಲನೆ : ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ,ನ.೯: ರಾಷ್ಟ್ರೀಯ ಸ್ವಾಭಿಮಾನಿ ಆಂಧೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ಹಮ್ಮಿಕೊಂಡಿರುವ ನಿರ್ಮಲತುಂಗಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಗೆ ನ.೬ರಂದು ಶೃಂಗೇರಿಯಲ್ಲಿ ಚಾಲನೆ ನೀಡಿದ್ದು, ಈ ಪಾದಯಾತ್ರೆಯು ಇಂದು ಸಂಜೆ ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾದಯಾತ್ರೆಗೆ ಅಶೋಕ್ ವೃತ್ತದಲ್ಲಿ ಸ್ವಾಗತಿಸಲಾಗುವುದು ನಂತರ ಪಾದಯಾತ್ರೆಯು ಎಲ್‌ಎಲ್‌ಆರ್ ರಸ್ತೆ ಮೂಲಕ ಗೋಪಿವೃತ್ತದಿಂದ ದೈವಜ್ಞ ಕಲ್ಯಾಣ ಮಂದಿರಕ್ಕೆ ಸಾಗುವುದು. ಅಲ್ಲಿ ವಾಸ್ತವ್ಯ ಇರುವುದು ಎಂದರು.
ನ.೧೦ ರ ಭಾನುವಾರದಂದು ಬೆಳಿಗ್ಗೆ ೮.೩೦ ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ

ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಪ್ರಭುದ್ಧರ ಸಭೆ ನಡೆಯಲಿದೆ. ಅಂದು ಸಂಜೆ ೬.೦೦ ಗಂಟೆಗೆ ಕೋರ್ಪಳಯ್ಯನ ಮಂಟಪದ ಬಳಿ ತುಂಗಾ ಆರತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೂಡಲಿ ಸಂಸ್ಥಾನ ಮಠದ ಶ್ರೀ ಅಭಿನವ ಶಂಕರಭಾರತಿ ಶ್ರೀಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ತುಂಗಾ- ಭದ್ರಾ ನದಿಗಳನ್ನು ಶುದ್ಧೀಕರಿಸಿ ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಪೂರ್ವ ಭಾವಿ ಸಭೆಗಳು ನಡೆದಿವೆ. ಈ ಸಭೆಯಲ್ಲಿ ಇಲ್ಲಿನ ಶಾಲಾ- ಕಾಲೇಜು ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಅಭಿಪ್ರಾಯಗಳನ್ನೂ ಸಹ ಸಂಗ್ರಹಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ತುಂಗಾ- ಭದ್ರಾ ನದಿಗಳ ಉಳಿಸುವುದು ಎಲ್ಲರ ಜವಾಬ್ದಾರಿ ಎಂದರು..


ನ.೧೧ ರ ಸೋಮವಾರಂದು ಎನ್‌ಇಎಸ್ ಮೈದಾನದಲ್ಲಿ ಯುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಜಾಗೃತಿಗಾಗಿ ಪಾದಯಾತ್ರೆಯಲ್ಲಿ ನಡೆಯಲಿದ್ದು, ಪಾದಯಾತ್ರೆಯು ಶಿವಮೊಗ್ಗ ಜನತೆಯಿಂದ ಚಟ್ನಹಳ್ಳಿಯವರೆಗೆ ನಡೆಯಲಿದೆ. ಅಲ್ಲಿಂದ ಮುಂದೆ ಗ್ರಾಮಪಂಚಾಯಿತಿಯವರು ನಡೆಸಲಿದ್ದು, ಹೊಳಲೂರಿನಲ್ಲಿ ಅಂದು ಸಂಜೆ ತಲುಪಲಿದೆ ಎಂದರು.
ಪಕ್ಷಬೇಧ ಮರೆತು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನ ಪಾಲ್ಗೊಳ್ಳುವಿಕೆಯೂ ಬಹಳ ಮುಖ್ಯವಾಗಿದ್ದು, ಮೂರು ಹಂತದಲ್ಲಿ ಶ್ರೀಶೈಲದವರೆಗೆ ಪಾದಯಾತ್ರೆ ನಡೆಸಬೇಕೆಂಬ ಗುರಿಯಿದೆ. ಸದ್ಯಕ್ಕೆ ಕಿಷ್ಕಿಂದೆವರೆಗೆ ಅಭಿಯಾನ ನಡೆಯಲಿದೆ. ಸಚಿವರು, ಸಂಸದರೊಂದಿಗೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ನದಿಯ ಪಾವಿತ್ರತ್ಯತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಒಟ್ಟಾರೆ ಶಿವಮೊಗ್ಗದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಪರಿಸರದ ಉಳಿವೆ ನಮ್ಮೆಲ್ಲರ ಉಳಿವು. ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲವನ್ನು ಬಿಟ್ಟು ಹೋಗಬೇಕು ಎಂದರು.


ನಿರ್ಮಲ ತುಂಗಾಭದ್ರಾ ಅಭಿಯಾನದ ಸಂಚಾಲಕ ಗಿರೀಶ್ ಪಟೇಲ್ ಮಾತನಾಡಿ, ಜಲಜಾಗೃತಿ -ಜನಜಾಗೃತಿ ಪಾದಯಾತ್ರೆ ಶೃಂಗೇರಿಯಿಂದ ಆರಂಭಿಸಿ ನಾಲ್ಕು ದಿನ ಕಳೆದಿದೆ. ಶುಕ್ರವಾರ(ನ.೮) ದಂದು ಯಾತ್ರೆ ತೀರ್ಥಹಳ್ಳಿಗೆ ತಲುಪಿದೆ. ಜಲ ಜಾಗೃತಿ ಪಾದಯಾತ್ರೆಗೆ ಪ್ರತಿ ಗ್ರಾಮ ಪಂಚಾಯಿತಿಗಳು ಸೇರಿ ಯಾತ್ರೆ ಸಾಗಿದ ದಾರಿಯುದ್ದಕ್ಕು ಜನರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಪಾದಯಾತ್ರೆ ಸಾಗಿದ ಎಲ್ಲಾ ಕಡೆ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ತೀರ್ಥಹಳ್ಳಿಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಸಾವಿರ ಜನರು ಪಾಲ್ಗೊಂಡಿದ್ದರು. ಇಲ್ಲಿ ವಿಶೇಷವಾದ ಅನುಭವ ಈ ಯಾತ್ರೆ ಕಟ್ಟಿಕೊಟ್ಟಿದೆ. ಆರಂಭದಲ್ಲಿ ಕೆಲವು ಗೊಂದಲಗಳಿದ್ದವು. ಆದರೆ, ಸಹಸ್ರಾರು ಸಂಖ್ಯೆಯಲ್ಲಿ ಯಾತ್ರೆಗೆ ಉತ್ತೇಜನ ನೀಡಿದ್ದಾರೆ. ಯಾತ್ರೆಯೊಂದಿಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಜಲಜಾಗೃತಿ -ಜನಜಾಗೃತಿ ಪಾದಯಾತ್ರೆ ಸಫಲವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಂ.ಶಂಕರ್, ಎಸ್. ಶಿವಕುಮಾರ್, ಸುರೇಖಾ ಮುರುಳೀಧರ್, ಜಗದೀಶ್, ಶ್ರೀನಾಗ್ ಇದ್ದರು.

Exit mobile version