Site icon TUNGATARANGA

ಜೆ.ಎನ್.ಎನ್.ಸಿ.ಇ: ʼಸಿಗ್ಮಾ-2024ʼ ಉದ್ಘಾಟನೆ ತಂತ್ರಜ್ಞಾನ ಆಧಾರಿತ ಕೌಶಲ್ಯತೆ ವೃದ್ಧಿಸಲಿ:  ಎಂ.ಎ.ಶ್ರೀವತ್ಸ ಅಭಿಪ್ರಾಯ


ಶಿವಮೊಗ್ಗ: ತಂತ್ರಜ್ಞಾನದಿಂದ ಸಿಗುವ ಆವಿಷ್ಕಾರಿ ವಿಚಾರಗಳನ್ನು ಬಳಸಿಕೊಂಡು ತಮ್ಮ ಕೌಶಲ್ಯತೆಯನ್ನು ವೃದ್ಧಿಸಿಕೊಳ್ಳುವತ್ತ ಯುವ ಸಮೂಹ ಹೆಚ್ಚು ಕೇಂದ್ರಿಕರಿಸಬೇಕಿದೆ ಎಂದು ಬೆಂಗಳೂರಿನ ಇಂಟಲ್‌ ಟೆಕ್ನಾಲಜಿಸ್‌ ಸಂಸ್ಥೆಯ ಸಿಸ್ಟಂ ಪ್ರೊಗ್ರಾಮರ್‌  ಎಂ.ಎ.ಶ್ರೀವತ್ಸ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣ ‘ಸಿಗ್ಮಾ-2024’ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಸ್ವತಂತ್ರ ಚಿಂತನೆಯ ಮಹತ್ವವನ್ನು ಯುವ ಸಮೂಹ ಅರಿಯಬೇಕಿದೆ. ಕೃತಕ ಬುದ್ದಿಮತ್ತೆ ಮತ್ತು ಜಾಟ್‌ ಜಿಪಿಟಿ ಅಂತಹ ಸರ್ಚ್‌ ಎಂಜಿನ್‌ಗಳಿಂದ ಎಂತಹ ಮಾಹಿತಿ ಪಡೆಯಬಹುದು ಎಂಬ ಕಾಲಘಟ್ಟದಲ್ಲಿ ಸಿಲುಕಿದ ಯುವಸಮೂಹ, ಹೊಸತನದ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಅಂತಹ  ಯಂತ್ರಾಧಾರಿತ ಕಲಿಕೆಯ ಸಿಮಿತತೆಯಿಂದ ಹೊರಬಂದು ನಾವೀನ್ಯಯುತ ಪ್ರಾಯೋಗಿಕ ಕಲಿಕೆ ಹಾಗೂ ಜ್ಞಾನದ ವಿಕಸನಕ್ಕೆ ಪುಷ್ಟಿ ನೀಡಲು ಇಂತಹ ವಿಚಾರ ಸಂಕಿರಣಗಳು ಬೇಕಿದೆ.

ಸ್ವಯಂ ಸಂಶೋಧನೆಯ ಮೂಲಕ ಪಡೆದುಕೊಂಡ ವೈಯಕ್ತಿಕ ಜ್ಞಾನವು ಹೆಚ್ಚು ಕಾಲ ಉಳಿಯುವುದಲ್ಲದೆ, ನಿಜವಾದ ಪರಿಣತಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಡೆಡ್‌ಲಾಕ್‌ ನಂತಹ ತಾಂತ್ರಿಕ ಸವಾಲುಗಳನ್ನು ಎದುರಿಸುವಾಗ ನಮ್ಮ ಸ್ವಂತ ಆಲೋಚನೆಗಳಿಗೆ ಎಐ ನಂತಹ ತಂತ್ರಜ್ಞಾನ ಬಳಕೆಯಾಗಬೇಕು. ತಂತ್ರಜ್ಞಾನದ ಜೊತೆಗೆ ನಮ್ಮಲ್ಲಿನ ನಿಜವಾದ ಸೃಜನಶೀಲ ಕೌಶಲ್ಯತೆಗಳೆ ನಮ್ಮಯ ಯಶಸ್ಸಿನ ಹಾದಿಯಾಗಿ ತೆರೆದುಕೊಳ್ಳಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪ್ರಾಚೀನ ಗ್ರೀಕ್ ವರ್ಣಮಾಲೆಯಲ್ಲಿ ಬರುವ ಸಿಗ್ಮಾ ಪರಿಕಲ್ಪನೆಯು ಉತ್ಪನ್ನಗಳ ತಯಾರಿಕೆಯಲ್ಲಿ ಅತ್ಯುತ್ತಮ ಗುಣಮಟ್ಟದ ಭರವಸೆಯನ್ನು ಸಂಕೇತಿಸುತ್ತದೆ. ಆ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಿಗ್ಮಾದ ಪರಿಕಲ್ಪನೆಗಳಿಂದ ಪ್ರೇರಣೆ ಪಡೆದು ಗುಣಮಟ್ಟದ ಉತ್ಪನ್ನಗಳ ಆವಿಷ್ಕಾರ ಮತ್ತು ನಿರ್ವಹಣೆಯತ್ತ ಕೇಂದ್ರಿಕರಿಸಬೇಕಿದೆ. ಈ ಹಿನ್ನಲೆಯಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಉನ್ನತಿಗೆ ಇಂತಹ ವೇದಿಕೆಗಳನ್ನು ಪೂರಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್‌ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್‌ ಡಾ.ಎಸ್.‌ವಿ.ಸತ್ಯನಾರಾಯಣ, ಡಾ.ಉಷಾದೇವಿ, ಕಾರ್ಯಕ್ರಮ ಸಂಯೋಜಕರಾದ ಡಾ.ಶಶಿಕಿರಣ್.ಎಸ್‌, ಡಾ.ಅಶ್ವಿನಿ.ಎಸ್.ಆರ್‌, ವಿದ್ಯಾರ್ಥಿ ಸಂಯೋಜಕರಾದ ಶ್ರೀನಂದ.ಎಸ್‌, ವೈಷ್ಣವಿ, ವಂದನ.ಆರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ೪೫ ಕ್ಕು ಹೆಚ್ಚು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರೊಬೊ ರೇಸ್‌, ಹ್ಯಾಕಥಾನ್‌, ಲೈನ್‌ ಫಾಲೊವರ್‌, ಅರ್ಡಿನೊ ಕ್ಲಾಷ್‌ ನಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು.

Exit mobile version