Site icon TUNGATARANGA

ಆರೋಗ್ಯದಿಂದ ಭವಿಷ್ಯ ಉಜ್ವಲ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ : ವ್ಯಕ್ತಿಯು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಭವಿಷ್ಯದ ಬದುಕು ಉಜ್ವಲವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಆಂದೋಲನದ ಅಂಗವಾಗಿ ನಗರದ ರಾಜೇಂದ್ರ ನಗರದ ರೋಟರಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕಿದ ನಂತರ ಮಾತನಾಡುತ್ತಿದ್ದರು.
ಪೋಲಿಯೊ ಸೋಂಕು ತಗುಲದಂತೆ ಪ್ರಸ್ತುತ ಹಾಕಲಾಗುತ್ತಿರುವ ಲಸಿಕೆಯು ಮಗುವಿನ ಜೀವಿತದ ಅವಧಿಗೆ ಬಹು ಅಮೂಲ್ಯವಾಗಿರಲಿದೆ ಎಂದ ಅವರು ಪೋಷಕರು ಐದು ವರ್ಷದೊಳಗಿನ ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸುವಂತೆ ಅವರು ತಿಳಿಸಿದರು.
ಇಂದಿನ ಆರೋಗ್ಯವಂತ ಮಗು ರಾಷ್ಟ್ರದ ಆರ್ಥಿಕ ಭವಿಷ್ಯ ನಿರ್ಧರಿಸಲಿದೆ ಎಂದ ಅವರು ವಿಕಲಚೇತನ ಮಗು ತನ್ನ ಬದುಕನ್ನು ಸುಂದರವಾಗಿ ಸೃಜಿಸಿಕೊಳ್ಳುವುದು ಕಷ್ಟಸಾಧ್ಯ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ ಭಾರತ ಪೋಲಿಯೊ ಮುಕ್ತವಾಗಿದೆ. ಆದರೂ ಈ ಕಾಯಿಲೆ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಈ ಲಸಿಕಾ ಆಂದೋಲನದ ಯಶಸ್ಸಿಗೆ ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಸ್ಮರಣೀಯವಾದುದು ಎಂದ ಅವರು ಕೇಂದ್ರಕ್ಕೆ ಬಂದು ಲಸಿಕೆ ಹಾಕಿಕೊಳ್ಳದೆ ಉಳಿದಿರುವ ಮನೆಮನೆಗಳಿಗೆ ತೆರಳಿ ಮುಂದಿನ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯ 1.38ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಯಂದಿರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮರಳೀಧರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Exit mobile version