Site icon TUNGATARANGA

ನ.6ರಿಂದ 14ರವರೆಗೆ : ತುಂಗಭದ್ರಾ ಮತ್ತು ಇತರೆ ನದಿಗಳ ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಪಾದಯಾತ್ರೆ: ಪ್ರೊ.ಬಿ.ಎಂ.ಕುಮಾರಸ್ವಾಮಿ

ಶಿವಮೊಗ್ಗ,ನ.04: ತುಂಗಭದ್ರಾ ಮತ್ತು ಇತರೆ ನದಿಗಳ ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ನ.6ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಪಾದಯಾತ್ರೆಯನ್ನು ನಿರ್ಮಲ ತುಂಗಭದ್ರಾ ಅಭಿಯಾನದಿಂದ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಭಿಯಾನದ ಅಧ್ಯಕ್ಷರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನದಿಗಳು ಇಂದು ಕಲುಷಿತಗೊಳ್ಳುತ್ತಿವೆ. ಇವುಗಳನ್ನು ಸಂರಕ್ಷಿಸುವ ಹೊಣೆ ಸರ್ಕಾರದ್ದು ಮತ್ತು ಸಾರ್ವಜನಿಕರದ್ದು ಆಗಿದೆ. ಈ ಹಿನ್ನಲೆಯಲ್ಲಿ ನಿರ್ಮಲಾತುಂಗಭದ್ರಾ ಅಭಿಯಾನವು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಇವರ ಸಹಯೋಗದೊಂದಿಗೆ ಸುಮಾರು 400ಕಿ.ಮಿ.ಉದ್ದದ ಬೃಹತ್ ಜಲಜಾಗೃತಿ, ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.

ಈ ಪಾದಯಾತ್ರೆಯಲ್ಲಿ ತುಂಗಭದ್ರಾ ನದಿಪಾತ್ರದ ಪರಿಸರಾಸಕ್ತರು, ಸಾಧುಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಪಾಲ್ಗುಳ್ಳಲಿದ್ದಾರೆ. ಇದೊಂದು ಪಕ್ಷಾತೀತವಾಗಿದ್ದು, ನದಿಯ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಎಲ್ಲಾ ಪರಿಸರಾಸಕ್ತರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಪಾದಯಾತ್ರೆಯು ನ.6ರಂದು ಬೆಳಿಗ್ಗೆ 10ಕ್ಕೆ ಶೃಂಗೇರಿಯಿಂದ ಆರಂಭಗೊಳ್ಳುವುದು, ಈ ಪಾದಯಾತ್ರೆಗೆ ಶೃಂಗೇರಿ ಹಿರಿಯ ಶ್ರೀಗಳಾದ ಭಾರತೀ ತೀರ್ಥ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಉಮಾಶಂಕರ್ ಪಾಂಡೆ ಉದ್ಘಾಟಿಸಲಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಗಣ್ಯರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎಂದರು.

ಅಭಿಯಾನದ ಸದಸ್ಯ ಗಿರೀಶ್ ಪಾಟೇಲ್ ಮಾತನಾಡಿ, ಈ ಪಾದಯಾತ್ರೆಯು ಶಿವಮೊಗ್ಗಕ್ಕೆ ನ.9ರ ಸಂಜೆ ಬರಲಿದ್ದು, ಇಲ್ಲೆ ವಾಸ್ತವ್ಯ ಹೂಡಲಿದೆ. ನ.10 ಮತ್ತು 11ರಂದು ಶಿವಮೊಗ್ಗ ನಗರದಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ನ.10ರಂದು ಬೆಳಿಗ್ಗೆ 8-30ರಿಂದ 10ರವರೆಗೆ ಹಾಗೂ 10.30ರಿಂದ 12ರವರೆಗೆ 2 ಸಭೆಗಳು ನಡೆಯಲಿವೆ. ನ.11ರಂದು ಬೆಳಿಗ್ಗೆ 9ಕ್ಕೆ ಶಾಲಾ ಕಾಲೇಜುಗಳಲ್ಲಿ ಸಭೆಗಳನ್ನು ನಡೆಸಲಾಗುವುದು. ಸುಮಾರು 6ಕಿ.ಮೀ. ಪಾದಯಾತ್ರೆಯ ನಂತರ ಮಧ್ಯಾಹ್ನ 3.30ಕ್ಕೆ ಗೋಂದಿಚಟ್ನಹಳ್ಳಿಯಿಂದ ಹೊಳಲೂರು ಕಡೆಗೆ ಪಾದಯಾತ್ರೆ ಸಾಗುವುದು ಎಂದರು.

ಶಿವಮೊಗ್ಗದ ಕಾರ್ಯಕ್ರಮವನ್ನು ಪರ್ಯಾವರಣ ಟ್ರಸ್ಟ್ ಇದರ ಜವಬ್ದಾರಿ ವಹಿಸಲಿದ್ದು, ಶಾಸಕ ಚನ್ನಬಸಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮಾಜಿ-ಹಾಲಿ ಶಾಸಕರು ಜನಪ್ರತಿನಿಧಿಗಳು, ವಿವಿಧ ಪರಿಸರಾಸಕ್ತ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಿವೆ ಎಂದರು.

ಈ ಪಾದಯಾತ್ರೆಯು ನ.14ರಂದು ಹರಿಹರ ತಲುಪುತ್ತದೆ. ಅಲ್ಲಿಯು ಕೂಡ ಸ್ವಾಮೀಜಿಗಳ ಮತ್ತು ಜನಪ್ರತಿನಿಧಿಗಳ ಜೊತೆ ಸೇರಿ ಸಭೆ ನಡೆಸುತ್ತದೆ. ಇದು ಸಮಾರೋಪ ಸಭೆಯಾಗಿರುತ್ತದೆ ಮತ್ತು ಮುಂದಿನ ಹಂತದ ಪಾದಯಾತ್ರೆಯನ್ನು ಅಲ್ಲಿಯೇ ನಿಶ್ಚಯ ಮಾಡಲಾಗುತ್ತದೆ. ಹಾಗೂ ಇದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಸುಂದರ ಪರಿಸರವನ್ನು ಉಳಿಸುವ ಮತ್ತು ಅಧ್ಯಯನ ಮಾಡುವ ದೃಷ್ಟಿಯಿಂದ ಪಶ್ಚಿಮ ಘಟ್ಟ ಅಧ್ಯಯನ ಕೇಂದ್ರ ಸ್ಥಾಪನೆಗೂ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಜೊತೆಗೆ ಮರಳುಗಣಿಗಾರಿಕೆ ತಡೆಯಲು ತ್ಯಾಜ್ಯ ನೀರು ಶುದ್ಧೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಜ್ಞರ ಸಮಿತಿ ರಚನೆ ಮಾಡುವಂತೆ ಸರ್ಕಾರಕ್ಕೆ ವರದಿಯ ಮೂಲಕ ಒತ್ತಾಯಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ. ಶಂಕರ್, ಡಾ.ಶ್ರೀಪತಿ, ಎಸ್.ಬಿ.ಅಶೋಕ್ ಕುಮಾರ್, ಡಾ.ಕಿರಣ್‍ಕುಮಾರ್ ಇದ್ದರು.

Exit mobile version