Site icon TUNGATARANGA

ಸಚಿವ ಜಮೀರ್ ಅಹ್ಮದ್ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಿ: ಬಿಜೆಪಿ ವತಿಯಿಂದ ಪ್ರತಿಭಟನೆ

ಸಾಗರ : ವಕ್ಫ್ ಮಂಡಳಿಯ ಏಕಪಕ್ಷೀಯ ನಿರ್ಣಯ ಹಿಂದೆಗೆದುಕೊಳ್ಳಬೇಕು ಮತ್ತು ಸಚಿವ ಜಮೀರ್ ಅಹ್ಮದ್ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸುವಂತೆ ಒತ್ತಾಯಿಸಿ ರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನೂರಾರು ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು, ವಾಸ ಮಾಡುತ್ತಿರುವ ಭೂಮಿ ಮೇಲೆ ವಕ್ಫ್ ತನ್ನ ಅಧಿಪತ್ಯ ಸ್ಥಾಪನೆ ಮಾಡಲು ಮುಂದಾಗಿರುವ ಕ್ರಮ ಖಂಡನೀಯ. ರಾಜ್ಯದಲ್ಲಿ ೧.೦೯ ಲಕ್ಷ ಎಕರೆ ವಕ್ಫ್ ಭೂಮಿ ಎಂದು ಹೇಳಲಾಗುತ್ತಿದೆ. ಇದು ತೀರ ಆತಂಕಕಾರಿ ಸಂಗತಿಯಾಗಿದ್ದು, ರೈತರು, ಬಡವರು ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಹಿಂದುಗಳು ಮಾತ್ರವಲ್ಲದೆ ಅಲ್ಪಸಂಖ್ಯಾತ ಬಂಧುಗಳು ಭೂಮಿ ಕಳೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಕ್ಫ್ ಕಾನೂನು ರದ್ದು ಮಾಡಬೇಕು. ಭೂಸುಧಾರಣಾ ಕಾಯ್ದೆ ಅನ್ವಯ ವಕ್ಫ್ ವಶದಲ್ಲಿರುವ ಭೂಮಿಗೆ ಅರ್ಜಿ ಹಾಕಲು ರೈತರಿಗೆ ಅವಕಾಶ ಕಲ್ಪಿಸಿಕೊಡಬೇಕು. ವಕ್ಫ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಪ್ರಧಾನ ಮಂತ್ರಿಗಳು ಮುಂದಾಗಬೇಕು. ವಕ್ಫ್ ಮಂಡಳಿಗೆ ನೀಡಿರುವ ಪರಮಾಧಿಕಾರವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.


ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ರಾಜ್ಯದಲ್ಲಿ ದಾಖಲೆ ಸೃಷ್ಟಿ ಮಾಡುವ ಸರ್ಕಾರ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡ ಹಗರಣ ಮರೆಮಾಚಲು ವಕ್ಫ್ ಪ್ರಕರಣ ಮುನ್ನೆಲೆಗೆ ತಂದಿದ್ದಾರೆ. ರೈತರಿಗೆ ವಕ್ಫ್ ಜಾಗ ಎಂದು ನೋಟಿಸ್ ನೀಡುತ್ತಿದ್ದಾರೆ. ಇದನ್ನು ಹೀಗೆ ಸಹಿಸಿಕೊಂಡರೆ ಒಂದು ವರ್ಗವನ್ನು ಓಲೈಸಲು ರಾಜ್ಯ ಸರ್ಕಾರ ಎಲ್ಲ ಜಾಗವನ್ನೂ ಪರಭಾರೆ ಮಾಡಲು ದಾಖಲೆ ಸೃಷ್ಟಿ ಮಾಡಿದರೂ ಆಶ್ಚರ್ಯವಿಲ್ಲ. ಕಾಂಗ್ರೇಸ್ ತುಷ್ಟೀಕರಣ ನೀತಿ ಜನರಿಗೆ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ರಾಜ್ಯದ ಜನರು ತಕ್ಕಪಾಠ ಕಲಿಸುತ್ತಾರೆ ಎಂದರು.


ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಎರಡೂ ಸಾವಿರಕ್ಕೂ ಹೆಚ್ಚು ಮನೆಗಳಿರುವ ಊರಿಗೆ ಊರನ್ನೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದೆ. ರಾಜ್ಯದಲ್ಲಿ ಓಲೈಕೆ ರಾಜಕಾರಣ ಎಷ್ಟು ದಿನ ಸಹಿಸಿಕೊಂಡು ಇರಲು ಸಾಧ್ಯ. ಕಾಂಗ್ರೇಸ್ ಬೆಂಬಲಿತ ಹಿಂದೂ ಬಾಂಧವರು ಇದರ ಬಗ್ಗೆ ಧ್ವನಿ ಎತ್ತಬೇಕು. ನಮ್ಮನಮ್ಮ ಆಸ್ತಿಯನ್ನು ಪರಿಶೀಲನೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ತಾಲಿಬಾನ್ ಸರ್ಕಾರದ ಷರಿಯಾ ಕಾನೂನು ಚಾಲ್ತಿಯಲ್ಲಿದ್ದಂತೆ ಕಾಣುತ್ತಿದೆ. ಯೂಟರ್ನ್ ಸರ್ಕಾರ ಇದಾಗಿದ್ದು ತಪ್ಪು ಮಾಡಿ ಅದನ್ನು ವಾಪಾಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ. ರೈತರು, ಜನಸಾಮಾನ್ಯರು ತಮ್ಮ ಜಮೀನು ತಕ್ಷಣ ಪರಿಶೀಲನೆ ಮಾಡಿಕೊಳ್ಳಿ. ಮೂಡ, ವಾಲ್ಮೀಕಿ ಹಗರಣ ಮುಚ್ಚಿಕೊಳ್ಳಲು ಇಂತಹದ್ದಕ್ಕೆ ಒತ್ತು ನೀಡಲಾಗುತ್ತಿದೆ. ಭಾರತವನ್ನು ಮುಸ್ಲೀಂ ರಾಷ್ಟ್ರ ಮಾಡುವ ಆರಂಭಿಕ ಹೆಜ್ಜೆ ಇದಾಗಿದೆ ಎಂದರು.


ರೈತ ಮೋರ್ಚಾದ ಅಧ್ಯಕ್ಷ ಗಿರೀಶ್ ಹಕ್ರೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಶಾಂತ ಕೆ.ಎಸ್., ಮಧುರಾ ಶಿವಾನಂದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮೈತ್ರಿ ಪಾಟೀಲ್, ಸವಿತಾ ವಾಸು, ಪ್ರೇಮ ಸಿಂಗ್, ಆರ್.ಶ್ರೀನಿವಾಸ್, ಶಂಕರ ಅಳ್ವಿಕೋಡಿ, ವಿ.ಮಹೇಶ್, ವಿನೋದ್ ರಾಜ್, ಅರುಣ ಕುಗ್ವೆ, ಕೊಟ್ರಪ್ಪ ನೇದರವಳ್ಳಿ, ಸತೀಶಬಾಬು, ರಮೇಶ್ ಎಚ್.ಎಸ್., ಪರಶುರಾಮ, ಬಿ.ಸಿ.ಲಕ್ಷ್ಮೀನಾರಾಯಣ, ಭಾವನಾ ಸಂತೋಷ್, ಸಂತೋಷ್ ಶೇಟ್, ಶಿವಶಂಕರ್, ರತ್ನಾಕರ ಶೇಟ್ ಇನ್ನಿತರರು ಹಾಜರಿದ್ದರು

Exit mobile version