ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ೧೦ ಜನ ನೌಕರರಿಗೆ ಇಂದು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಇಂದು ನಿವೃತ್ತಿ ಹೊಂದಿದ ಪೌರ ಕಾರ್ಮಿಕರು ಎಲ್ಲರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಸರ್ಕಾರಿ ಕೆಲಸ ಎಂಬುದು ಥ್ಯಾಂಕ್ ಲೆಸ್ ಜಾಬ್ ಆಗಿದೆ. ಆದರೂ ನಮ್ಮ ಕರ್ತವ್ಯವನ್ನು ನಾವೆಲ್ಲೂರ ಪ್ರಾಮಾಣಿಕವಾಗಿ ಮಾಡಲೇಬೇಕು ಎಂದರು.
ಪೌರ ಕಾರ್ಮಿಕರು ಕಷ್ಟದ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಹಲವು ಕಡೆ ಪೌರ ಕಾರ್ಮಿಕರಿಗೆ ವಿನಾಕಾರಣ ಕಿರಿಕಿರಿ ಉಂಟಾಗುತ್ತದೆ. ಆದರೂ ಹಿರಿಯ ಕಾರ್ಮಿಕರು ಅನುಸರಿಸಿಕೊಂಡು ಕೆಲಸ ಮಾಡುತ್ತಾರೆ. ಅದು ಪಾಲಿಕೆಗೆ ಒಳ್ಳೆಯ ಹೆಸರು ತರುತ್ತದೆ ಎಂದರು.
ಕಾರ್ಮಿಕರಿಗೆ ಸಲ್ಲಬೇಕಾದ ಪಿಂಚಣಿ ಮತ್ತು ನೂತನ ವೇತನ ಶ್ರೇಣಿ ಸೇರಿದಂತೆ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ತಕ್ಷಣದಿಂದಲೇ ಕೊಡಲು ಬೇಕಾದ ಎಲ್ಲಾ ಕಾರ್ಯಗಳನ್ನು ಪಾಲಿಕೆ ಆಡಳಿತ ವಿಭಾಗದಿಂದ ಈಗಾಗಲೇ ಮಾಡಲಾಗಿದೆ. ಕಳೆದ ೩ ತಿಂಗಳಿಂದ ೨೦ಕ್ಕೂ ಹೆಚ್ಚು ನೌಕರರು ನಿವೃತ್ತಿ ಹೊಂದಿದ್ದಾರೆ. ಇದರಿಂದ ಪಾಲಿಕೆಯ ನಿತ್ಯ ಕಾರ್ಯಗಳಿಗೆ ಸ್ಪಲ್ಪಮಟ್ಟಿನ ಹಿನ್ನಡೆಯಾಗುತ್ತದೆ. ಆದರೂ ನಿವೃತ್ತಿ ಸ್ವಾಭಾವಿಕ ಪ್ರಕ್ರಿಯೆ. ಒಳ್ಳೆಯ ನೌಕರರನ್ನು ಬೀಳ್ಕೊಡುವಾಗ ಅತ್ಯಂತ ದುಃಖವಾಗುತ್ತದೆ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದರು.
ಈ ಸಂದರ್ಭದಲ್ಲಿ ಉಪ ಆಯುಕ್ತರಾದ ತುಷಾರ್ ಹೊಸೂರು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್. ಗೋವಿಂದಪ್ಪ, ಉಪಾಧ್ಯಕ್ಷ ಕುಮಾರ್, ಮುಖ್ಯ ಲೆಕ್ಕಾಧಿಕಾರಿ ಡಕ್ಣಾನಾಯ್ಕ್, ಮಂಜುನಾಥ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿವೃತ್ತಿ ಹೊಂದಿದ ರತ್ನಾಕರ್, ಸೂಲಯ್ಯ, ನಾರಾಯಣ್, ಮೂರ್ತಿ, ಬೈಲಪ್ಪ, ನರಸಿಂಹಮೂರ್ತಿ, ನಾಗರಾಜ್, ನರಸ, ಪೆಂಚಾಲಮ್ಮ, ಮುನಿನರಸಮ್ಮ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ದಿ. ಎನ್.ಜೆ. ರಾಜಶೇಖರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.