ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರವು ಖಾಸಗಿ ಸ್ವತ್ತುಗಳ ಅಕ್ರಮ ಪರಭಾರೆ ಖಾತೆಯಾಗುವುದನ್ನು ತಡೆಗಟ್ಟಲು ಇ-ಸ್ವತ್ತನ್ನು ೨೦೧೮ರಿಂದಲೇ ಜಾರಿಗೆ ತಂದಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಕೂಡ ಜಾಗೃತಿ ಕಾರ್ಯಕ್ರಮಕ್ಕಾಗಿ ಸುಮಾರು ೧೫ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿತ್ತು. ಆದರೂ ಕೂಡ ಪಾಲಿಕೆಯಿಂದ ಇ-ಸ್ವತ್ತು ಪಡೆಯಲಾಗುತ್ತಿಲ್ಲ ಎಂದು ಮನವಿದಾರರು ದೂರಿದರು.
ಅಪ್ಲೋಡ್ ಆಗಲು ತಾಂತ್ರಿಕ ದೋಷವಿದೆ. ಸರ್ವರ್ ಕೆಲಸ ಮಾಡುತ್ತಿಲ್ಲ ಎಂಬ ಸಬೂಬನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಇ-ಸ್ವತ್ತು ಇಲ್ಲದೇ ಯಾವುದೇ ಸ್ವತ್ತುಗಳು ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ಮದುವೆ ಮಾಡುವವರು, ವಿದೇಶಕ್ಕೆ ಹೋಗುವವರು, ಆಸ್ಪತ್ರೆ ಖರ್ಚು ಭರಿಸಲು ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಇ-ಸ್ವತ್ತು ನೀಡಲಿಕ್ಕಾಗಿಯೇ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಮತ್‌ತು ಇ-ಸ್ವತ್ತು ಮಾಡಿಸಲು ಕೆಲವು ನೌಕರರು ಹಣದ ಬೇಡಿಕೆ ಕೂಡ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ಕೂಡ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ…
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಡಿ.ಜಿ.ಕಿರಣ್ ಕೇಸರಿಪಡೆಯ ಅಧ್ಯಕ್ಷ ಎಸ್.ಜೆ. ರಾಜು, ಪ್ರಮುಖರಾದ ರಾಕೇಶ್ ಕುಮಾರ್, ಮಂಜುನಾಥ್, ಶ್ರೀನಿವಾಸ್, ಚಂದನ್, ಅಪ್ಪು, ಯಶವಂತ್ ಸೇರಿದಂತೆ ಹಲವರಿದ್ದರು.